ಮಕ್ಕಳು ಹೆಚ್ಚು ಅಂಕ ಗಳಿಸುವುದಷ್ಟೇ ಶಿಕ್ಷಣವಲ್ಲ. ಅಂಕಗಳ ಜತೆಗೆ ನೈತಿಕ ಮೌಲ್ಯ, ಸಂಸ್ಕಾರ, ಜ್ಞಾನ ಹಾಗೂ ಮಾನವೀಯ ಗುಣಗಳನ್ನು ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಹುಬ್ಬಳ್ಳಿ: ಮಕ್ಕಳು ಹೆಚ್ಚು ಅಂಕ ಗಳಿಸುವುದಷ್ಟೇ ಶಿಕ್ಷಣವಲ್ಲ. ಅಂಕಗಳ ಜತೆಗೆ ನೈತಿಕ ಮೌಲ್ಯ, ಸಂಸ್ಕಾರ, ಜ್ಞಾನ ಹಾಗೂ ಮಾನವೀಯ ಗುಣಗಳನ್ನು ಬೆಳೆಸುವುದು ಇಂದಿನ ಅಗತ್ಯವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಅವರು ಇಲ್ಲಿನ ಭವಾನಿನಗರದ ರಾಘವೇಂದ್ರ ಸ್ವಾಮಿಗಳ ಕಲ್ಯಾಣಮಂಟಪದ ಸುಜಯೀಂದ್ರ ಸಭಾಭವನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ಬೆಂಗಳೂರಿನ ಸಪ್ತರ್ಷಿ ಫೌಂಡೆಷನ್ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ "ಪ್ರತಿಭಾ ಪುರಸ್ಕಾರ- 2026 " ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ಹೊಸ ಅವಕಾಶಗಳು ಸೃಷ್ಟಿಯಾಗಿವೆ. ಕೌಶಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ. ಆದರೆ, ಶಿಕ್ಷಣದ ಜತೆಗೆ ನೈತಿಕ ಮೌಲ್ಯಗಳು, ಸಂಸ್ಕಾರ ಹಾಗೂ ಸಾಮಾಜಿಕ ಜವಾಬ್ದಾರಿಯನ್ನೂ ಮಕ್ಕಳಿಗೆ ಕಲಿಸಬೇಕು ಎಂದು ಹೇಳಿದರು.
ಪ್ರತಿಭಾ ಪುರಸ್ಕಾರವನ್ನು ಕೇವಲ ಶೈಕ್ಷಣಿಕ ಸಾಧನೆಗೆ ಸೀಮಿತಗೊಳಿಸದೆ ಕ್ರೀಡೆ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೂ ನೀಡಬೇಕು. ಈ ರೀತಿಯ ಪುರಸ್ಕಾರಗಳಿಗೆ ತಮ್ಮಿಂದಲೂ ಸಹಕಾರ ನೀಡುವುದಾಗಿ ಅವರು ಹೇಳಿದರು.ಪಾಶ್ಚಾತ್ಯ ದೇಶಗಳ ಜೀವನಶೈಲಿಯನ್ನು ಅಂಧವಾಗಿ ಅನುಕರಿಸುವುದರಿಂದ ಕುಟುಂಬ ವ್ಯವಸ್ಥೆ ದುರ್ಬಲವಾಗುವ ಅಪಾಯವಿದೆ. ಅನೇಕ ದೇಶಗಳಲ್ಲಿ ಜನಸಂಖ್ಯೆ ಇಳಿಕೆಯಾಗುತ್ತಿದ್ದು, ವಯೋವೃದ್ಧರ ಸಂಖ್ಯೆ ಹೆಚ್ಚುತ್ತಿದೆ. ಏಕಾಂತತೆ ದೊಡ್ಡ ಸಾಮಾಜಿಕ ಸವಾಲಾಗಿ ಪರಿಣಮಿಸಿದೆ. ಇದರಿಂದ ಮಾನಸಿಕ ಅಸಮತೋಲನ ಹಾಗೂ ಹಲವು ಸಾಮಾಜಿಕ ಸಮಸ್ಯೆಗಳು ಎದುರಾಗುತ್ತಿವೆ. ಭಾರತೀಯ ಕುಟುಂಬ ವ್ಯವಸ್ಥೆ ಮನುಷ್ಯನಿಗೆ ಮಾನಸಿಕ ನೆಮ್ಮದಿ ಹಾಗೂ ಪರಸ್ಪರ ಬೆಂಬಲ ನೀಡುತ್ತದೆ. ಕುಟುಂಬ, ಸಂಬಂಧಗಳು ಮತ್ತು ಮಾನವೀಯ ಮೌಲ್ಯಗಳ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ ಎಂದರು.
ಉದ್ಯಮಿ ಎಚ್.ಎನ್. ನಂದಕುಮಾರ ಮಾತನಾಡಿ, ವಿದ್ಯಾರ್ಥಿಗಳು ಸಮಾಜದ ಆಸ್ತಿ. ವಿದ್ಯಾರ್ಥಿಗಳು ಸತತ ಅಧ್ಯಯನ, ಸಂಸ್ಕಾರದ ಮೂಲಕ ಉತ್ತಮ ಜೀವನ ಶೈಲಿ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಉನ್ನತ ಹುದ್ಧೆ ಅಲಂಕರಿಸಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.ಶಿವಮೊಗ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಎನ್.ಎಸ್. ರವೀಶ್ ಮಾತನಾಡಿ, ಮಕ್ಕಳಿಗೆ ಓದು ಮುಖ್ಯ. ಆದ್ದರಿಂದ ಪಾಲಕರು ಸತತವಾಗಿ ಓದು ಓದು ಎಂದು ಹೇಳುತ್ತಾರೆ. ಕೇವಲ ಒಂದೇ ಮಾರ್ಗ, ಒಂದೇ ಕ್ಷೇತ್ರದತ್ತ ಒಲವು ತೋರದೇ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳ ಕಡೆ ಒಲವು ಬೆಳೆಸಿಕೊಳ್ಳಬೇಕು. ಪಾಲಕರು ಮಕ್ಕಳ ಅಭಿಪ್ರಾಯ ಪಡೆದು ಅವರ ಆಸಕ್ತಿ ಕ್ಷೇತ್ರದಲ್ಲಿ ಶಿಕ್ಷಣ ಕೊಡಿಸಬೇಕು ಎಂದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಸ್. ರಘುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ರಾಜ್ಯದ ಎಲ್ಲ ಜಿಲ್ಲೆಗಳ ಪ್ರತಿಭಾವಂತ ತಲಾ ಮೂವರು ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.ಉದ್ಯಮಿ ಗೋವಿಂದ ಜೋಶಿ, ಸಮಾಜದ ಮುಖಂಡರಾದ ಡಾ. ಎನ್.ಎಸ್. ರಮೇಶ್, ಮಹಾಸಭಾದ ಶಿಕ್ಷಣ ಉಪ ಸಮಿತಿಯ ಸಹ ಸಂಚಾಲಕ ಹನುಮಂತರಾವ್ ಡಂಬಳ, ರಾಜ್ಯ ಸಹ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಸಂಜೀವ ಜೋಶಿ, ದತ್ತಾತ್ರೇಯ, ಲಕ್ಷ್ಮಿಕಾಂತ, ಸುಬ್ಬಣ್ಣ, ಪ್ರಕಾಶ ಉಪಸ್ಥಿತರಿದ್ದರು.