ಸಾರಾಂಶ
ಉತ್ತಮ ಪರಿಸರ ಉತ್ತಮ ಆರೋಗ್ಯಕ್ಕೆ ಸಹಕಾರಿ.
ಸಂಡೂರು: ಇಲ್ಲಿನ ವೃಂದ-ವಾಸವಿ ಫೌಂಡೇಶನ್ ಹಾಗೂ ವಿಶ್ವ ವಿನೂತನ ಸೇವಾ ಸಂಸ್ಥೆಯಿಂದ ತಾಲೂಕಿನ ದೋಣಿಮಲೈನಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಶನಿವಾರ ವನಮಹೋತ್ಸವ, ಪರಿಸರ ಜಾಗೃತಿ ಅಭಿಯಾನ ಹಾಗೂ ಸಸಿ ವಿತರಣೆ ಕಾರ್ಯಕ್ರಮ ಜರುಗಿತು.
ವಕೀಲರು, ಜನ ಸಂಗ್ರಾಮ ಪರಿಷತ್ ರಾಜ್ಯ ಸಮಿತಿ ಉಪಾಧ್ಯಕ್ಷರೂ ಆದ ಟಿ.ಎಂ. ಶಿವಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಉತ್ತಮ ಪರಿಸರ ಉತ್ತಮ ಆರೋಗ್ಯಕ್ಕೆ ಸಹಕಾರಿ. ಅರಣ್ಯಗಳು ನಮ್ಮ ಪರಿಸರದಲ್ಲಿ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ನಾವು ಅಭಿವೃದ್ಧಿ ನೆಪದಲ್ಲಿ ಅರಣ್ಯ ನಾಶ ಪಡಿಸುತ್ತಿರುವುದಲ್ಲದೆ, ಪರಿಸರ ಕಲುಷಿತಗೊಳಿಸುತ್ತಿದ್ದೇವೆ. ಅರಣ್ಯ ನಾಶ ತಡೆಯಬೇಕಿದೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ವೃಂದ-ವಾಸವಿ ಫೌಂಡೇಶನ್ ಹಾಗೂ ವಿಶ್ವವಿನೂತನ ಸೇವಾ ಸಂಸ್ಥೆಯವರು ತಾಲೂಕಿನ ವಿವಿಧ ಶಾಲಾ-ಕಾಲೇಜುಗಳಲ್ಲಿ ಪರಿಸರ ಜಾಗೃತಿ ಅಭಿಯಾನ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.ವನಮಹೋತ್ಸವ ಅಂಗವಾಗಿ ಶಾಲೆಯ ಆವರಣದಲ್ಲಿ ಹಲವು ಗಿಡಗಳನ್ನು ನೆಟ್ಟು ನೀರೆರೆಯಲಾಯಿತು. ವಿದ್ಯಾರ್ಥಿಗಳಿಗೂ ಗಿಡಗಳನ್ನು ವಿತರಿಸಿ, ಅವುಗಳನ್ನು ತಮ್ಮ ಮನೆಯ ಬಳಿಯಲ್ಲಿ ನೆಟ್ಟು ಪೋಷಿಸಿ, ಬೆಳೆಸುವಂತೆ ಜಾಗೃತಿ ಮೂಡಿಸಲಾಯಿತು.
ವಿದ್ಯಾಲಯದ ಪ್ರಾಚಾರ್ಯ ಬಶ್ಸಿಲಾಲ್, ಉಪನ್ಯಾಸಕಿ ಎಸ್. ಗೀತಾ, ವೃಂದ ಗ್ರೂಪ್-ವಾಸವಿ ಫೌಂಡೇಶನ್‌ನ ಆರ್.ವಿ. ವಿಷ್ಣುಕುಮಾರ್, ವಿಶ್ವವಿನೂತನ ಸೇವಾ ಸಂಸ್ಥೆ ಉಪಾಧ್ಯಕ್ಷ ಆರ್.ವಿ. ದತ್ತುರಾಜ್, ನಿರ್ದೇಶಕರಾದ ಎಸ್.ಆರ್. ಗಿರಿಧರಮೂರ್ತಿ, ಎಸ್.ಟಿ. ವಿಜೇಂದ್ರ, ಸಂಘಟನಾ ಕಾರ್ಯದರ್ಶಿ ಆರ್.ಡಿ. ಸವಿತಾ ದತ್ತುರಾಜ್, ವಾಸವಿ ಫೌಂಡೇಶನ್ ಅಧ್ಯಕ್ಷ ಎ.ನಾಗರಾಜ, ಜಂಟಿ ಕಾರ್ಯಾಧ್ಯಕ್ಷ ಕೆ.ವಿ. ಸತ್ಯನಾರಾಯಣ, ಹಿರಿಯ ಉಪಾಧ್ಯಕ್ಷ ಜಿ.ರಾಘವೇಂದ್ರ, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.