ಸಾರಾಂಶ
ಮುಂಡಗೋಡ: ದನಗರಗೌಳಿ ಸಮುದಾಯ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಇದರಲ್ಲಿ ವನವಾಸಿ ಕಲ್ಯಾಣದ ಕೊಡುಗೆ ಅಪಾರವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ ಹೇಳಿದರು.
ಇಲ್ಲಿಯ ನಗರ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ದನಗರಗೌಳಿ ಯುವ ಸೇನೆಯಿಂದ ಹಮ್ಮಿಕೊಂಡಿದ್ದ ೨೦೨೪-೨೫ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ೮೦% ಕ್ಕಿಂತ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಶಿಕ್ಷಣದ ಜತೆಗೆ ಕ್ರೀಡಾ ಕ್ಷೇತ್ರದಲ್ಲಿ ಕೂಡ ದನಗರಗೌಳಿ ಸಮಾಜ ಇಂದು ಬೆಳಗುತ್ತಿದೆ.ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿರುವ ನಯನಾ ಕೋಕ್ರೆ ಇಂದು ಲಂಡನ್ ನಲ್ಲಿ ಅಥ್ಲೆಟಿಕ್ಸ್ ನಲ್ಲಿ ತರಬೇತಿ ಪಡೆಯುತ್ತಿರುವುದೇ ಇದಕ್ಕೆ ಉತ್ತಮ ಉದಾಹರಣೆ ಎಂದ ಅವರು, ವನವಾಸಿ ಕಲ್ಯಾಣದಲ್ಲಿ ಓದಿರುವ ವಿದ್ಯಾರ್ಥಿಗಳು ಹಲವಾರು ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿರುವುದು ಸಂತಸದ ಸಂಗತಿ ಎಂದರು.
ಕರ್ನಾಟಕ ರಾಜ್ಯ ದನಗರಗೌಳಿ ಯುವ ಸೇನೆಯ ರಾಜ್ಯಾಧ್ಯಕ್ಷ ಸಂತೋಷ ವರಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ ಹಾಗೂ ಹೋರಾಟ ಎಂಬ ಮೂರು ಧ್ಯೇಯೋದ್ದೇಶ ಇಟ್ಟು ಸಮಾಜದಲ್ಲಿ ಕಾರ್ಯ ಪ್ರವೃತ್ತವಾಗಿದ್ದು, ಸಮಾಜದಲ್ಲಿ ಉತ್ತಮ ಕಾರ್ಯ ಮಾಡುವವರಿಗೆ ಟೀಕೆಗಳು ಸಹಜ. ನಾವು ಮಾಡಿದ ಉತ್ತಮ ಕೆಲಸಗಳು ಶಾಶ್ವತವಾಗಿ ಉಳಿಯಬೇಕಾದರೇ ಟೀಕೆ, ಅವಮಾನ ಮೀರಿ ಬೆಳೆಯಬೇಕು ಆಗ ಮಾತ್ರ ಇತಿಹಾಸ ನಿರ್ಮಿಸಲು ಸಾಧ್ಯವೆಂದರು.ಮಾಜಿ ಜಿಪಂ ಉಪಾಧ್ಯಕ್ಷ ಎಲ್.ಟಿ.ಪಾಟೀಲ್ ಮಾತನಾಡಿ, ಶಿಕ್ಷಣದಲ್ಲಿ ಅತ್ಯಂತ ಹಿಂದುಳಿದ ಸಮುದಾಯವಾಗಿದ್ದ ದನಗರಗೌಳಿ ಸಮುದಾಯ ಇಂದು ಶಿಕ್ಷಣ ಪಡೆದುಕೊಂಡು ಮುಖ್ಯ ವಾಹಿನಿಗೆ ಬರಲು ಶ್ರಮಿಸುತ್ತಿದ್ದಾರೆ ಎಂದರು.
ದನಗರ ಗೌಳಿ ಸಮಾಜದ ಯುವ ಮುಕಂಡ ಸಿದ್ದು ಥೋರತ್ ಮಾತನಾಡಿ, ಸಮಾಜದಲ್ಲಿ ಸಂಘಟನೆಯ ಅವಶ್ಯಕತೆ ಇದ್ದು, ಯುವ ಸೇನೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.ಉತ್ತರ ಕನ್ನಡ, ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳ ಒಟ್ಟು ೬೧ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ದೇವು ಪಾಟೀಲ್, ಮಾಕು ಕೋಕರೆ, ಬೀರು ಕಾತ್ರಟ್, ಸಗ್ಗುಬಾಯಿ ಪಟಕಾರೆ, ಯುವ ಸೇನೆಯ ಗೌರವಾಧ್ಯಕ್ಷ ಲಕ್ಷ್ಮಣ ಬೋಡಕೆ, ರಾಜ್ಯ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಪಟಕಾರೆ, ಹಿರಿಯರಾದ ಬಿಕ್ಕು ಕೋಕರೆ, ಸಿದ್ದು ಲಾಂಬೋರ್, ಸಿದ್ದು ಯಮಕರ್, ಭಾಗು ಕಾತ್ರಟ್, ಯಮ್ಮು ಜೋರೆ, ರಾಮು ಕೋಕ್ರೆ, ಪ್ರದೀಪ್ ಗಾವಡೆ, ಜನ್ನು ಟಾಕೇಕರ್, ಸುನೀಲ್ ಸೆಳಕೆ ಹಾಗೂ ಯುವ ಸೇನೆಯ ಪದಾಧಿಕಾರಿಗಳು ಹಾಗೂ ಇತರರು ಇದ್ದರು. ಭಾಗ್ಯ ಕೋಕರೆ ನಿರೂಪಿಸಿದರು. ವೇಣುಗೋಪಾಲ್ ಪಟಕಾರೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಲಕ್ಷ್ಮಣ ಕೋಕರೆ ವಂದಿಸಿದರು. ಬಮ್ಮು ಫೋಂಡೆ ನಿರೂಪಿಸಿದರು.