ಕನ್ನಡಪ್ರಭ ವಾರ್ತೆ ಸಕಲೇಶಪುರ

ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರದ ಹಿನ್ನೆಲೆಯಲ್ಲಿ ರೈಲು ಬುಧವಾರ ಸಕಲೇಶಪುರಕ್ಕೆ ಆಗಮಿಸಿತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ಸ್ವಾವಲಂಬಿ ಭಾರತ’ ಹಾಗೂ ‘ವಿಕಸಿತ ಭಾರತ’ದ ಕನಸಿನ ಭಾಗವಾಗಿ ದೇಶದಲ್ಲೇ ನಿರ್ಮಾಣವಾಗುತ್ತಿರುವ ವಂದೇ ಭಾರತ್ ರೈಲುಗಳು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಾರ್ವಜನಿಕರಿಗೆ ಸೇವೆ ನೀಡುತ್ತಿವೆ. ಇದೀಗ ಈ ರೈಲು ಸಕಲೇಶಪುರದವರೆಗೆ ಪ್ರಾಯೋಗಿಕ ಸಂಚಾರ ನಡೆಸಿದೆ. ಸಕಲೇಶಪುರದವರೆಗೆ ವಿದ್ಯುದ್ದೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಾಯೋಗಿಕ ಸಂಚಾರ ಯಶಸ್ವಿಯಾದ ಬಳಿಕ ಕೆಲವೇ ದಿನಗಳಲ್ಲಿ ಸಾರ್ವಜನಿಕರಿಗೆ ವಂದೇ ಭಾರತ್ ರೈಲು ಸೇವೆ ಲಭ್ಯವಾಗುವ ನಿರೀಕ್ಷೆಯಿದೆ.

ಬೆಂಗಳೂರು- ಮಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರಿಗೆ ವಂದೇ ಭಾರತ್ ರೈಲು ಅತ್ಯಂತ ಅನುಕೂಲಕರವಾಗಲಿದೆ. ರಸ್ತೆ ಮಾರ್ಗದಲ್ಲಿ ಘಾಟ್ ಪ್ರದೇಶದಲ್ಲಿ ಸಂಚಾರಕ್ಕೆ ಅಡಚಣೆ, ಬಸ್ ಪ್ರಯಾಣದ ಅನಾನುಕೂಲ ಹಾಗೂ ವಿಮಾನಗಳ ಸಮಯದ ಮಿತಿಗಳ ನಡುವೆ ರೈಲು ಪ್ರಯಾಣವು ಆರಾಮದಾಯಕ ಮತ್ತು ಸುರಕ್ಷಿತ ಪರ್ಯಾಯವಾಗಲಿದೆ. ವಂದೇ ಭಾರತ್ ರೈಲಿನಲ್ಲಿ ಪ್ರಸ್ತುತ ೨೦ ಬೋಗಿಗಳಿದ್ದು, ಒಂದೇ ಬಾರಿ ಸುಮಾರು ೧,೦೮೦ ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ಅತ್ಯುತ್ತಮ ಆಸನ ವ್ಯವಸ್ಥೆ ಹಾಗೂ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಈ ರೈಲಿನಲ್ಲಿ ಪ್ರಯಾಣಿಸುವಾಗ ವಿಮಾನದಲ್ಲಿ ಪ್ರಯಾಣಿಸಿದ ಅನುಭವವಾಗುತ್ತದೆ. ಮುಂದಿನ ದಿನಗಳಲ್ಲಿ ಸ್ಲೀಪರ್ ಕೋಚ್ ಸೇರಿದಂತೆ ಇನ್ನಷ್ಟು ಸೌಲಭ್ಯಗಳಿರುವ ರೈಲುಗಳ ಸಂಚಾರಕ್ಕೂ ಅವಕಾಶ ದೊರೆಯುವ ನಿರೀಕ್ಷೆಯಿದೆ .

ರೈಲ್ವೆ ಅಧಿಕಾರಿಗಳ ತಂಡವೂ ಸ್ಥಳಕ್ಕೆ ಆಗಮಿಸಿ ಸಾಂಪ್ರದಾಯಿಕ ಪೂಜೆ ನೆರವೇರಿಸಿದ ಬಳಿಕ ರೈಲಿನ ಪ್ರಾಯೋಗಿಕ ಸಂಚಾರ ಮುಂದುವರಿಯಿತು.