ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಕಲಬುರಗಿಯಿಂದ ಬೆಂಗಳೂರುವರೆಗೆ, ಮಹತ್ವಾಕಾಂಕ್ಷಿ ವಂದೇ ಭಾರತ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರವರ್ಚ್ಯುವಲ್ ಚಾಲನೆ ನೀಡಿದರು.ಆದರೆ, ಯಾದಗಿರಿ ಮಾರ್ಗವಾಗಿ ಸಾಗುವ ಈ ರೈಲು ಇಲ್ಲಿನ ನಿಲ್ದಾಣದಲ್ಲಿ ನಿಲ್ಲದಿರುವುದನ್ನು ಖಂಡಿಸಿ, ರೈಲು ರೋಕೋ ಹಾಗೂ ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ಕರೆ ನೀಡಿದ್ದ ಪರಿಣಾಮ, ಇಡೀ ರೈಲು ನಿಲ್ದಾಣಕ್ಕೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.
ಕಲಬುರಗಿ- ಬೆಂಗಳೂರು ಸೇರಿದಂತೆ ವಿವಿಧೆಡೆ ವಂದೇ ಭಾರತ್ ಎಕ್ಸ್ರೆಸ್ ರೈಲುಗಳಿಗೆ ಆನ್‌ಲೈನ್ ಚಾಲನೆಯನ್ನು ಮಂಗಳವಾರ ಬೆಳಿಗ್ಗೆ ಪ್ರಧಾನಿ ಮೋದಿ ನೀಡಿದ್ದರು. ಈ ರೈಲು ಬೆಳಿಗ್ಗೆ 10.40ಕ್ಕೆ ಯಾದಗಿರಿ ಮಾರ್ಗವಾಗಿ ಬೆಂಗಳೂರಿಗೆ ತೆರಳಿತು. ಯಾದಗಿರಿಯಲ್ಲಿ ಇದಕ್ಕೆ ನಿಲುಗಡೆ ಇರಲಿಲ್ಲ. ನಿಲುಗಡೆ ಮಾಡುವಂತೆ ಕೋರಿ ಸಂಘಟನೆಗಳು ಆಗ್ರಹಿಸಿ, ಮುತ್ತಿಗೆ ಎಚ್ಚರಿಕೆ ನೀಡಿದ್ದವು.ಪ್ರತಿಭಟನೆಗಳ ಭೀತಿಯಿಂದಾಗಿ ಸೋಮವಾರ ರಾತ್ರಿಯಿಂದಲೇ ರೈಲು ನಿಲ್ದಾಣದಲ್ಲಿ ಪೊಲೀಸ್ ಪಹರೆ ಹಾಕಲಾಗಿತ್ತು. ಸಂಘಟನೆಗಳ ಮುಖಂಡರನ್ನೂ ಪೊಲೀಸರು ಭೇಟಿಯಾಗಿ ಮುತ್ತಿಗೆ ಕೈಬಿಡುವಂತೆ ಮನವೊಲೈಸುವ ಪ್ರಯತ್ನವೂ ನಡೆದಿತ್ತು ಎನ್ನಲಾಗಿದೆ.
ರೈಲ್ವೆ ಪೊಲೀಸ್ ಹಾಗೂ ಸ್ಥಳೀಯ ಪೊಲೀಸರನ್ನು ಬಂದೋಬಸ್ತಗೆಂದು ನಿಯೋಜಿಸಲಾಗಿತ್ತು. ಪ್ರಯಾಣಿಕರನ್ನು ಹೊರತುಪಡಿಸಿ, ಅನುಮಾನಾಸ್ಪದರನ್ನು ರೈಲು ನಿಲ್ದಾಣದೊಳಗೆ ಬಿಡದಂತೆ ಬ್ಯಾರಿಕೇಡ್‌ಗಳ ಹಾಕಿ ಕಟ್ಟೆಚ್ಚರ ವಹಿಸಲಾಗುತ್ತಿತ್ತು. ತಪಾಸಣೆ ನಡೆಸಿ ಒಳಬಿಡಲಾಗುತ್ತಿತ್ತು. ಪ್ಲಾಟಫಾರಂದುದ್ದಕ್ಕೂ ಹೆಜ್ಜೆ ಹೆಜ್ಜೆಗೆ ಪೊಲೀಸ್ ಪಡೆ ಪ್ರತಿಭಟನಾಕಾರರ ತಡೆಯಲು ಸಜ್ಜಾದಂತಿತ್ತು.ಇನ್ನೇನು ಹತ್ತು ಹದಿನೈದು ನಿಮಿಷಗಳಲ್ಲಿ ವಂದೇ ಭಾರತ್ ರೈಲು ಯಾದಗಿರಿ ನಿಲ್ದಾಣ ಮಾರ್ಗವಾಗಿ ಸಾಗಲಿದೆ ಎನ್ನುವಾಗಲೇ, ಬೆಳಿಗ್ಗೆ 10.15 ರ ಸುಮಾರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭೀಮುನಾಯಕ್ ನೇತೃತ್ವದಲ್ಲಿ ಅನೇಕ ಕಾರ್ಯಕರ್ತರು ದಿಢೀರನೇ ರೈಲು ನಿಲ್ದಾಣದೊಳಗೆ ನುಗ್ಗಲು ಯತ್ನಿಸಿದಾಗ, ಆವರಣದ ಮುಖ್ಯದ್ವಾರದಲ್ಲೇ ಅವರನ್ನು ತಡೆದ ಪೊಲೀಸರು, ಪ್ರತಿಭಟನಾಕಾರರ ಹಿಮ್ಮೆಟ್ಟಿಸಲು ಯತ್ನಿಸಿದರು. ಮುನ್ನುಗ್ಗಲು ಯತ್ನಿಸಿದ ಭೀಮುನಾಯಕ್, ಸಿದ್ದು ಹತ್ತಿಕುಣಿ, ಅಮರೇಶ್ ಹತ್ತಿಮನಿ ಮುಂತಾದವರನ್ನು ಬಂಧಿಸಿ, ಪೊಲೀಸ್ ವಾಹನದೊಳಗೆ ಕೂರಿಸಲಾಯಿತು.
ಯಾದಗಿರಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲು ನಿಲುಗಡೆಗೆ ವಿಚಾರದಲ್ಲಿ ಸಂಸದ್ವಯರು ನಿರ್ಲಕ್ಷ್ಯ ವಹಿಸಿದ್ದಾರೆಂದು ಕಿಡಿ ಕಾರಿದ ಪ್ರತಿಭಟನಾಕಾರರು, ಅವರುಗಳ ವಿರುದ್ಧ ಧಿಕ್ಕಾರದ ಕೂಗುಗಳನ್ನು ಹಾಕಿದರು. ಕೆಲ ಕಾಲ ರೈಲು ನಿಲ್ದಾಣದ ಆವರಣದಲ್ಲಿ ಉದ್ವಿಗ್ನ ವಾತಾವರಣ ಏರ್ಪಟ್ಟಂತಾಗಿ, ಅದೇ ಸಮಯಕ್ಕೆ ನಿಲ್ದಾಣದಲ್ಲಿ ಬಂದಿಳಿದ ಮತ್ತೊಂದು ರೈಲಿನ ಪ್ರಯಾಣಿಕರನ್ನು ಕೆಲಕಾಲ ಆತಂಕದಲ್ಲಿ ನೂಕಿತ್ತು.ಇತ್ತ, 10.39 ರ ಸುಮಾರಿಗೆ ಯಾದಗಿರಿ ರೈಲು ನಿಲ್ದಾಣದಿಂದ ಯಾವುದೇ ಆತಂಕವಿಲ್ಲದೆ ನಿಗದಿತ ವೇಗದಲ್ಲಿ ಸಾಗಿದಾಗ, ಪೊಲೀಸರು ಸೇರಿದಂತೆ ಆಡಳಿತ ನಿರುಮ್ಮಳವಾಯಿತು. ಇಂತಹ ಮಹತ್ವಾಕಾಂಕ್ಷಿ ರೈಲು ಯಾದಗಿರಿಯಲ್ಲಿ ನಿಲುಗಡೆಯಾಗಬೇಕಿತ್ತು ಅನ್ನೋ ಮಾತುಗಳು ಅಲ್ಲಿ ನೆರೆದವರಿಂದ ಮೂಡಿಬಂದವು.
;Resize=(128,128))
;Resize=(128,128))
;Resize=(128,128))
;Resize=(128,128))