ಸಾರಾಂಶ
ಮಂತ್ರಾಲಯದ ರಾಘವೇಂದ್ರ ಸ್ವಾಮಿ ದರ್ಶನಕ್ಕೆ ಅನುಕೂಲವಾಗುವಂತೆ ಬೆಂಗಳೂರಿನ ಬೈಯಪ್ಪನಹಳ್ಳಿಯ ಎಸ್‌ಎಂವಿಟಿ ರೈಲ್ವೇ ನಿಲ್ದಾಣದಿಂದ ಕಲಬುರಗಿಗೆ ತೆರಳುವ ವಂದೇ ಭಾರತ್ ರೈಲಿನ (22233) ಸಮಯವನ್ನು ಬದಲಿಸುವಂತೆ ಇಂಧನ ಸಚಿವ ಕೆ.ಜೆ.ಜಾರ್ಜ್ ಪತ್ರ ಬರೆದು ಕೋರಿದ್ದಾರೆ.
ಬೆಂಗಳೂರು : ಮಂತ್ರಾಲಯದ ರಾಘವೇಂದ್ರ ಸ್ವಾಮಿ ದರ್ಶನಕ್ಕೆ ಅನುಕೂಲವಾಗುವಂತೆ ಬೆಂಗಳೂರಿನ ಬೈಯಪ್ಪನಹಳ್ಳಿಯ ಎಸ್‌ಎಂವಿಟಿ ರೈಲ್ವೇ ನಿಲ್ದಾಣದಿಂದ ಕಲಬುರಗಿಗೆ ತೆರಳುವ ವಂದೇ ಭಾರತ್ ರೈಲಿನ (22233) ಸಮಯವನ್ನು ಬದಲಿಸುವಂತೆ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ರಾಜ್ಯ ರೈಲ್ವೇ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಪತ್ರ ಬರೆದು ಕೋರಿದ್ದಾರೆ.
ಪ್ರಸ್ತುತ ಈ ವಂದೇ ಭಾರತ್ ಬೆಂಗಳೂರಿಂದ ಮಧ್ಯಾಹ್ನ 2.40ಕ್ಕೆ ಹೊರಟು ರಾತ್ರಿ 8.20ಕ್ಕೆ ಮಂತ್ರಾಲಯಂ ರೋಡ್ ನಿಲ್ದಾಣ ತಲುಪಿ ಬಳಿಕ ರಾತ್ರಿ 11.30ಕ್ಕೆ ಕಲಬುರಗಿ ತಲುಪುತ್ತಿದೆ. ಮರುದಿನ ಬೆಳಗ್ಗೆ 5.15ಕ್ಕೆ ಹೊರಟು ಬೆಳಗ್ಗೆ 7.10ಕ್ಕೆ ಮಂತ್ರಾಲಯಂ ರೋಡ್ ನಿಲ್ದಾಣ ತಲುಪಿ ಮಧ್ಯಾಹ್ನ 2ಕ್ಕೆ ಬೆಂಗಳೂರು ತಲುಪುತ್ತಿದೆ. ಶ್ರೀ ಗುರು ರಾಯರ ದರ್ಶನ ಸಮಯ ಪ್ರತಿದಿನ ಬೆಳಗ್ಗೆ 6ಗಂಟೆಯಿಂದ ರಾತ್ರಿ 8.30ರವರೆಗಿದ್ದು, ಈ ರೈಲಿನಲ್ಲಿ ಬಂದು ಹೋಗುವ ರಾಘವೇಂದ್ರ ಭಕ್ತರಿಗೆ ಅನಾನುಕೂಲ ಆಗುತ್ತಿದೆ. ರಾತ್ರಿ 8.20ಕ್ಕೆ ಮಂತ್ರಾಲಯಂ ರೋಡ್ ನಿಂದ ಮಂತ್ರಾಲಯ ರಸ್ತೆ ಮೂಲಕ ನಿಲ್ದಾಣ ತಲುಪಲು ಕನಿಷ್ಠ 40-50 ನಿಮಿಷ ತಗುಲುತ್ತಿದೆ. ಈ ವೇಳೆಗೆ ದರ್ಶನ ಸಾಧ್ಯವಾಗುವುದಿಲ್ಲ. ಅಲ್ಲದೆ, ಮರುದಿನ 6ಗಂಟೆಗೆ ದರ್ಶನ ಪ್ರಾರಂಭ ಆಗುವುದರಿಂದ ಭಕ್ತರು 7.10ಕ್ಕೆ ಮಂತ್ರಾಲಯಂ ರೋಡ್ ತಲುಪಿ ವಂದೇ ಭಾರತ್ ರೈಲು ಹಿಡಿಯುವುದು ಕಷ್ಟವಾಗಿದೆ.
ಹೀಗಾಗಿ, ವಂದೇ ಭಾರತ್ ರೈಲನ್ನು ಎಸ್‌ಎಂವಿಟಿ ರೈಲ್ವೇ ನಿಲ್ದಾಣದಿಂದ ಮಧ್ಯಾಹ್ನ 2.40ರ ಬದಲಾಗಿ ಬೆಳಗ್ಗೆ 7 ಅಥವಾ 8ಗಂಟೆಗೆ ನಿಗದಿಸಿದರೆ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ತೆರಳುವ ಭಕ್ತರಿಗೆ ಅನುಕೂಲ ಆಗಲಿದೆ. ಅದೇ ರೀತಿ ಕಲಬುರಗಿ ನಿಲ್ದಾಣದಿಂದ ಹೊರಡುವ ಈ ರೈಲಿನ ಸಮಯವನ್ನು ಬೆಳಗ್ಗೆ 5.15 ಗಂಟೆ ಬದಲಾಗಿ 8.30 ಅಥವಾ 9ಗಂಟೆಗೆ ನಿಗದಿಸಿದರೆ ಭಕ್ತರಿಗೆ ಅನುಕೂಲವಾಗಲಿದೆ. ಇದರಿಂದ ವಂದೇ ಭಾರತ್‌ಗೆ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿ ಆದಾಯವೂ ಬರಲಿದೆ. ಹೀಗಾಗಿ ರೈಲಿನ ಆಗಮನ, ನಿರ್ಗಮನ ಸಮಯವನ್ನು ಬದಲಿಸುವಂತೆ ಸಚಿವರು ಕೋರಿದ್ದಾರೆ.