ವಂದೇ ಭಾರತ್ ರೈಲು ಬೆಂಗಳೂರಿನಿಂದ ಮಂಗಳೂರು, ಉಡುಪಿ, ಉತ್ತರ ಕನ್ನಡದವರೆಗೆ ವಿಸ್ತರಿಸಬೇಕು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ದೆಹಲಿಯ ಕಚೇರಿಯಲ್ಲಿ ಭೇಟಿ ಮಾಡಿದ ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ

ಉಡುಪಿ: ವಂದೇ ಭಾರತ್ ರೈಲು ಬೆಂಗಳೂರಿನಿಂದ ಮಂಗಳೂರು, ಉಡುಪಿ, ಉತ್ತರ ಕನ್ನಡದವರೆಗೆ ವಿಸ್ತರಿಸಬೇಕು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ದೆಹಲಿಯ ಕಚೇರಿಯಲ್ಲಿ ಭೇಟಿ ಮಾಡಿದ ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ.ಪ್ರತಿದಿನ ಉತ್ತರ ಕನ್ನಡ, ಕುಂದಾಪುರ, ಉಡುಪಿ, ಮಂಗಳೂರಿನಿಂದ 600 ಕ್ಕೂ ಹೆಚ್ಚು ಬಸ್ ಗಳು ಮತ್ತು ಇತರ ಖಾಸಗಿ ವಾಹನಗಳು ರಾಜಧಾನಿ ಬೆಂಗಳೂರು ತಲುಪುತ್ತಿದ್ದು, ನಿತ್ಯ ಪ್ರಯಾಣಿಕರಿಗೆ ಅನುಕೂಲವಾಗಲು ಕರಾವಳಿಗೆ ವಂದೇ ಭಾರತ್ ರೈಲಿನ ಸಂಚಾರ ಆರಂಭಿಸಬೇಕು ಎಂದವರು ಮನವಿ ಸಲ್ಲಿಸಿದ್ದಾರೆ.

ಮಂಗಳೂರಿನಿಂದ ಮುಂಬೈವರೆಗಿನ ಕೊಂಕಣ ರೈಲ್ವೆಯ 734 ಕಿಮೀ ಹಳಿಗಳನ್ನು ದ್ವಿಪಥಗೊಳಿಸುವ ಮೂಲಕ ಹೆಚ್ಚುವರಿ ರೈಲ್ವೆ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಕೂಡಲೇ ಸರ್ವೆ ನಡೆಸಿ ಹಣ ಬಿಡುಗಡೆ ಮಾಡಬೇಕೆಂದು ಕೋರಿದ್ದಾರೆ.ಹಲವು ವರ್ಷಗಳಿಂದ ಮಂಗಳೂರಿನಿಂದ ಕಾರವಾರದೊರಗಿನ ಕರಾವಳಿ ಜಿಲ್ಲೆಗಳ ರೈಲ್ವೆ ಪ್ರಯಾಣಿಕರಿಗೆ ಉತ್ತಮ ಸೇವೆಯ ಕೊರತೆ ಇದ್ದು, ಇದೀಗ ನರೇಂದ್ರ ಮೋದಿ ಸರ್ಕಾರದ ತುರ್ತು ಕ್ರಮಗಳಿಂದಾಗಿ ಸಾಕಷ್ಟು ಪ್ರಗತಿ ಕಂಡು ಬರುತ್ತಿದ್ದು, ಇನ್ನೂ ಹೊಸ ರೈಲುಗಳ ಅಗತ್ಯವಿರುವುದರಿಂದ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ನೆರವು ನೀಡಬೇಕೆಂದು ರೈಲ್ವೆ ಸಚಿವರಲ್ಲಿ ಸಂಸದ ಕೋಟ ಮನವಿ ಮಾಡಿದ್ದಾರೆ.