ವಂದೇ ಮಾತರಂಗೆ ರಾಷ್ಟ್ರಗೀತೆಯ ಸ್ಥಾನಮಾನ ನೀಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಮರ್ಥಿಸುವ ಹಾಗೂ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ 7ರಂದು ಕುಂದಾಪುರದಿಂದ ಸಾಸ್ತಾನದವರೆಗೆ 18 ಕಿ.ಮೀ. ದೂರದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಂದೇ ಮಾತರಂ ಜನಜಾಗೃತಿ ಪಾದಯಾತ್ರೆ ನಡೆಯಲಿದೆ ಎಂದು ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಕುಂದಾಪುರ: ವಂದೇ ಮಾತರಂಗೆ ರಾಷ್ಟ್ರಗೀತೆಯ ಸ್ಥಾನಮಾನ ನೀಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಮರ್ಥಿಸುವ ಹಾಗೂ ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ 7ರಂದು ಕುಂದಾಪುರದಿಂದ ಸಾಸ್ತಾನದವರೆಗೆ 18 ಕಿ.ಮೀ. ದೂರದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಂದೇ ಮಾತರಂ ಜನಜಾಗೃತಿ ಪಾದಯಾತ್ರೆ ನಡೆಯಲಿದೆ ಎಂದು ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 8.30ಕ್ಕೆ ಹೊಸ ಬಸ್ ನಿಲ್ದಾಣದ ಬಳಿ ಕೇರಳದ ರಾಜ್ಯಸಭಾ ಸದಸ್ಯ ಸದಾನಂದ ಮಾಸ್ಟರ್ ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಬಳಿಕ 9.30ಕ್ಕೆ ಶಾಸ್ತ್ರಿ ಸರ್ಕಲ್‌ನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 10.15ಕ್ಕೆ ಪಾದಯಾತ್ರೆ ಆರಂಭವಾಗಲಿದ್ದು, 11.15ಕ್ಕೆ ಕೋಟೇಶ್ವರ ತಲುಪಲಿದೆ. ತೆಕ್ಕಟ್ಟೆಯಲ್ಲಿ ಮಧ್ಯಾಹ್ನ ವಿರಾಮದ ಬಳಿಕ 3 ಗಂಟೆಗೆ ಸಾಲಿಗ್ರಾಮ, ಸಂಜೆ 5 ಗಂಟೆಗೆ ಸಾಸ್ತಾನ ಟೋಲ್‌ಗೇಟ್ ಮೂಲಕ ಸಾಗಿ, ಸಂಜೆ 5.30ಕ್ಕೆ ಸಾಸ್ತಾನ ಪೇಟೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.ಮಾರ್ಗಮಧ್ಯೆ ವಿವಿಧೆಡೆ ಸಭಾ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಇದು ಪಕ್ಷಾತೀತ ಅಭಿಯಾನವಾಗಿದ್ದು, ಸಾರ್ವಜನಿಕರು ಮುಕ್ತವಾಗಿ ಪಾಲ್ಗೊಳ್ಳಬಹುದು ಎಂದು ಕೋಟ ಶ್ರೀನಿವಾಸ ಪೂಜಾರಿ ಕರೆ ನೀಡಿದರು.ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ವಂದೇ ಮಾತರಂಗೆ ರಾಷ್ಟ್ರಗೀತೆಯ ಸ್ಥಾನಮಾನ ನೀಡಿರುವ ಕೇಂದ್ರ ಸರಕಾರದ ನಿರ್ಧಾರದ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ನಿವೃತ್ತ ಸೈನಿಕರು, ವಿದ್ಯಾರ್ಥಿಗಳು, ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದು, ಸಾರ್ವಜನಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಕುಂದಾಪುರ ಬಿಜೆಪಿ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ, ಸುಧೀರ್ ಕೆ.ಎಸ್., ಪ್ರಮುಖರಾದ ರಾಜೇಶ್ ಕಾವೇರಿ, ಸದಾನಂದ ಬಳ್ಕೂರು ಹಾಗೂ ಸದಾನಂದ ಉಪ್ಪಿನಕುದ್ರು ಉಪಸ್ಥಿತರಿದ್ದರು.