ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿಯಾಗಿದ್ದ ವಂದೇ ಮಾತರಂ-ಮಾಜಿ ಶಾಸಕ ಶಿವರಾಜ ಸಜ್ಜನರ

| Published : Nov 09 2025, 03:15 AM IST

ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿಯಾಗಿದ್ದ ವಂದೇ ಮಾತರಂ-ಮಾಜಿ ಶಾಸಕ ಶಿವರಾಜ ಸಜ್ಜನರ
Share this Article
  • FB
  • TW
  • Linkdin
  • Email

ಸಾರಾಂಶ

ವಂದೇ ಮಾತರಂ ಗೀತೆಯು ಕೇವಲ ಅಕ್ಷರಗಳಿಂದ ಕೂಡಿದ ಹಾಡಲ್ಲ, ಇದು ಸ್ವಾತಂತ್ರ್ಯ ಹೋರಾಟಗಾರರ ಘೋಷಣೆಯಾಗಿತ್ತು. ಈ ಗೀತೆಯಿಂದ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ಸ್ಫೂರ್ತಿ ಪಡೆದಿದ್ದರು. ಗೀತೆಯನ್ನು ಕೇಳಿ ಸ್ವಯಂ ಪ್ರೇರಿತವಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣವನ್ನು ತಾಯಿ ಭಾರತಾಂಬೆಗೆ ಸಮರ್ಪಿಸಿದ್ದಾರೆ ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ಹೇಳಿದರು.

ಹಾವೇರಿ: ವಂದೇ ಮಾತರಂ ಗೀತೆಯು ಕೇವಲ ಅಕ್ಷರಗಳಿಂದ ಕೂಡಿದ ಹಾಡಲ್ಲ, ಇದು ಸ್ವಾತಂತ್ರ್ಯ ಹೋರಾಟಗಾರರ ಘೋಷಣೆಯಾಗಿತ್ತು. ಈ ಗೀತೆಯಿಂದ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ಸ್ಫೂರ್ತಿ ಪಡೆದಿದ್ದರು. ಗೀತೆಯನ್ನು ಕೇಳಿ ಸ್ವಯಂ ಪ್ರೇರಿತವಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣವನ್ನು ತಾಯಿ ಭಾರತಾಂಬೆಗೆ ಸಮರ್ಪಿಸಿದ್ದಾರೆ ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ಹೇಳಿದರು.

ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಂದೇ ಮಾತರಂ-150ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.

ಪಕ್ಷ ಇಂದು ದೇಶಾದ್ಯಂತ ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆ ಮಾಡಲಾಗುತ್ತಿದೆ. ಈ ಗೀತೆಗೆ ಇಂದು 150 ವರ್ಷ ತುಂಬಿದ್ದು, ಇದನ್ನು ನಾವೆಲ್ಲರೂ ಪೂರ್ಣ ಪ್ರಮಾಣದಲ್ಲಿ ಹಾಡುವ ಮೂಲಕ ಸಂಭ್ರಮಿಸೋಣ ಎಂದು ಕರೆ ನೀಡಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಸಂತೋಷ ಆಲದಕಟ್ಟಿ ಮಾತನಾಡಿ, ಶ್ರೇಷ್ಠ ಕವಿ ಬಂಕಿಮಚಂದ್ರ ಚಟರ್ಜಿ 1875ರಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡಲು ವಂದೇ ಮಾತರಂ ಗೀತೆ ರಚಿಸಿದರು. ರವೀಂದ್ರನಾಥ ಟ್ಯಾಗೋರ್ ಅವರು 1896ರಲ್ಲಿ ಮೊದಲ ಬಾರಿಗೆ ಕೋಲ್ಕತ್ತದಲ್ಲಿ ಸಾರ್ವಜನಿಕವಾಗಿ ಇದನ್ನು ಹಾಡಿದರು. ಬಾಲಗಂಗಾಧರ ತಿಲಕ, ಭಗತ್‌ಸಿಂಗ, ರಾಜಗುರು ಸುಖದೇವ, ಸುಭಾಷ ಚಂದ್ರ ಬೋಸ್ ಇನ್ನೂ ಮುಂತಾದವರಿಗೆ ಇದು ಸ್ಫೂರ್ತಿಯಾಗಿತ್ತು. ಆದರೆ ರಾಷ್ಟ್ರೀಯ ಕಾಂಗ್ರೆಸ್ 1923ರಲ್ಲಿ ಖಾಕಿನಾಡಲ್ಲಿ ವಂದೇ ಮಾತರಂ ಗೀತೆಯನ್ನು ಹಾಡಲು ಪಂ. ವಿಷ್ಣು ದಿಗಂಬರ ಪಾಲುಸ್ಕರ್‌ ಅವರಿಗೆ ವಿರೋಧ ವ್ಯಕ್ತಪಡಿಸಿತು. ಅಂದಿನ ಮುಸ್ಲಿಂ ಲೀಗ್ ನಾಯಕರನ್ನು ಓಲೈಸಲು ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ 1937ರಲ್ಲಿ ರಾಷ್ಟ್ರಗೀತೆಯ ಕೆಲವು ಭಾಗಗಳನ್ನು ಕೈಬಿಟ್ಟು ವಂದೇ ಮಾತರಂ ಗೀತೆಯನ್ನು ತುಂಡರಿಸಿತು. ರಾಷ್ಟ್ರೀಯ ಕಾಂಗ್ರೆಸ್ ಸ್ವಾತಂತ್ರ್ಯ ಪೂರ್ವದಲ್ಲಿ ವಂದೇ ಮಾತರಂ ಗೀತೆಯನ್ನು ತುಂಡರಿಸಿ 1947ರಲ್ಲಿ ಧಾರ್ಮಿಕ ಕಾರಣಕ್ಕೆ ದೇಶವನ್ನು ತುಂಡರಿಸಿ ಭಾರತಕ್ಕೆ ಹಾಗೂ ಭಾರತೀಯ ಸಂಸ್ಕೃತಿಗೆ ದ್ರೋಹ ಎಸಗಿತು ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ ಆತ್ಮನಿರ್ಭರ ಭಾರತ ನಿರ್ಮಾಣ ಪ್ರತಿಜ್ಞೆ ಬೋಧಿಸಿದರು. ಮಂಜುನಾಥ ಗಾಣಿಗೇರ ನ. 10ರಂದು ನಡೆಯುವ ಏಕತಾ ನಡಿಗೆಯ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ವಂದೇ ಮಾತಂ-150ನೇ ವರ್ಷದ ಸವಿನೆನಪಿಗಾಗಿ ಸಸಿ ನೆಡಲಾಯಿತು.

ಈ ವೇಳೆ ಮಾಜಿ ಶಾಸಕ ಅರುಣಕುಮಾರ ಪೂಜಾರ, ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ. ಶೋಭಾ ನಿಸ್ಸಿಮಗೌಡ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾರಾಯಣಿ, ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣವರ, ಹಾವೇರಿ ನಗರ ಘಟಕದ ಅಧ್ಯಕ್ಷ ಗಿರೀಶ ತುಪ್ಪದ, ನಾಗೇಂದ್ರ ಕಟಕೋಳ, ಅಭಿಷೇಕ ಗುಡಗೂರ, ಚಂದ್ರಣ್ಣ ಹರಿಜನ, ಅಲ್ಲಭಕ್ಷ ತಿಮ್ಮಾಪೂರ, ಎನ್.ಪಿ. ಚಾವಡಿ, ಹಾಗೂ ಪಕ್ಷದ ಜಿಲ್ಲೆ ಹಾಗೂ ಮಂಡಲ, ಮೋರ್ಚಾ, ಪ್ರಕೋಷ್ಠದ ಪದಾಧಿಕಾರಿಗಳು, ಬೂತ್ ಅಧ್ಯಕ್ಷರು, ಕಾರ್ಯಕರ್ತರು ಇದ್ದರು.

ಕಿರಣ ಕೋಣನವರ ನಿರೂಪಿಸಿದರು. ಗುಡ್ಡಪ್ಪ ಭರಡಿ ಸ್ವಾಗತಿಸಿದರು.