ಸಾರಾಂಶ
ಕನ್ನಡಪ್ರಭ ವಾರ್ತೆ ಬೀರೂರು
ಭಾದ್ರಪದ ಶುಕ್ಲ ಚತುರ್ಥಿಯಿಂದ ಮಹಾನವಮಿಯ ದಸರಾ ಹಬ್ಬದವರೆಗೆ 35 - 40ದಿನಗಳ ಕಾಲ ನಡೆಸಲ್ಪಡುವ ಬೀರೂರಿನ ಗಣಪತಿ ಪೆಂಡಾಲ್ ನಿರ್ಮಾಣ, ಶ್ರೀ ಡಾ. ನಂಜುಂಡಸ್ವಾಮಿ ರಂಗಮಂಟಪದಲ್ಲಿ ಕಾಲದ ದಸರಾ ಮೈಲಾರಲಿಂಗಸ್ವಾಮಿ ಕಾರ್ಣಿಕೋತ್ಸವ, ಗಣೇಶೋತ್ಸವದ ಪ್ರತಿಷ್ಠಾಪನೆಯ ಚಪ್ಪರ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಪುರಸಭೆ ಅಧ್ಯಕ್ಷೆ ವನಿತಾಮಧು ಮತ್ತು ಮಿತ್ರ ಸಮಾಜದ ಅಧ್ಯಕ್ಷ ಎನ್.ಎಂ. ನಾಗರಾಜ್ ಬುಧವಾರ ಚಾಲನೆ ನೀಡಿದರು. ಅರ್ಚಕರಾದ ಕುಮಾರ್ ಶಾಸ್ತ್ರೀ ಚಪ್ಪರ ಪೂಜೆ ನೆರವೇರಿಸಿದರು.ನಂತರ ಮಾತನಾಡಿದ ಪುರಸಭೆ ಅಧ್ಯಕ್ಷೆ ವನಿತಾಮಧು , ಪುರಸಭಾ ಹಾಲಿ ಮತ್ತು ಮಾಜಿ ಸದಸ್ಯರು ಹಾಗೂ ಊರಿನ ಎಲ್ಲರ ಸಹಕಾರದಿಂದ ಕಳೆದ 70 ವರ್ಷಗಳ ಹಿಂದೆ ಸ್ಥಾಪನೆಯಾದ ಮಿತ್ರ ಸಮಾಜದ ಸಂಘವು ಪ್ರತೀ ವರ್ಷ ಗಣಪತಿಯನ್ನು ಪ್ರತಿಷ್ಠಾಪಿಸಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಅನ್ನಸಂತರ್ಪಣೆಯ ಕಾರ್ಯಕ್ರಮಗಳನ್ನು ನೆರವೇರಿಸಿಕೊಂಡು ಬರುತ್ತಿದೆ. ಇವರ ಉತ್ತಮ ಕಾರ್ಯಕ್ಕೆ ಆ ದೇವರು ಇನ್ನಷ್ಟು ಮೆರಗನ್ನು ನೀಡಲಿ ಎಂದು ಆಶಿಸಿದರು. ಮಿತ್ರ ಸಮಾಜದ ಅಧ್ಯಕ್ಷರಾದ ಪುರಸಭಾ ಉಪಾಧ್ಯಕ್ಷ ಎನ್.ಎಂ. ನಾಗರಾಜ್ , ಈ ಬಾರಿಯೂ ಉತ್ತಮವಾಗಿ ಈ ಕಾರ್ಯಕ್ರಮಗಳನ್ನು ಆಯೋಜಿಸುವ ಆಶಯ ಹೊಂದಿದ್ದು ಪುರಸಭೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ. ಸುದರ್ಶನ್, ಮಾಜಿ ಸದಸ್ಯ ಮಧು, ಸದಸ್ಯರಾದ ಬಿ.ಆರ್. ಮೋಹನ್ ಕುಮಾರ್, ಗಂಗಾಧರ್, ಲೋಕೇಶಪ್ಪ, ಲಕ್ಷ್ಮಣ್, ಜಿಮ್ ರಾಜು, ಟಬು ರಘು, ಮಧು ಬಾವಿಮನೆ, ವಿನಾಯಕ, ಬಿ.ಎಂ. ರುದ್ರಪ್ಪ, ಸೊಸೈಟಿ ರವಿಕುಮರ್, ಪುರಸಭೆಯ ಚೆಲುವರಾಜ್, ಬಸವರಾಜ್ , ಹಿರಿಯ ಮಾಜಿ ಸದಸ್ಯ ಬಸವರಾಜ್ ಮತ್ತು ಸಿಬ್ಬಂದಿ ಇದ್ದರು.