ಸಾರಾಂಶ
ಹಾವೇರಿ: ಮಲೆನಾಡು ಭಾಗದಲ್ಲಿ ಭಾರಿ ಮಳೆ ಬೀಳುತ್ತಿರುವುದರಿಂದ ವರದಾ ನದಿ ಮೈದುಂಬಿ ಹರಿಯುತ್ತಿದ್ದು, ಕಳಸೂರು ಬ್ರಿಜ್ ಕಂ ಬ್ಯಾರೇಜ್ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.
ಜಿಲ್ಲೆಯಲ್ಲಿ ಬಿಸಿಲು, ತುಂತುರು ಮಳೆಯಾಗುತ್ತಿದ್ದರೂ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ವರದಾ ನದಿ ಹರಿವು ಕಳೆದ ಒಂದು ವಾರದಿಂದ ಹೆಚ್ಚಿದೆ. ಸೋಮವಾರ ರಾತ್ರಿಯಿಂದ ಸವಣೂರು ತಾಲೂಕಿನ ಕಳಸೂರು ಬ್ರಿಜ್ ಕಂ ಬ್ಯಾರೇಜ್ ಮೇಲಿನಿಂದ ನೀರು ಹರಿಯುತ್ತಿದೆ. ಇದರಿಂದ ಕಳಸೂರು ಗ್ರಾಮ ಮತ್ತು ಹಾವೇರಿ ನಡುವಿನ ಸಂಪರ್ಕ ಕಡಿತಗೊಂಡಿದೆ. ಬ್ರಿಜ್ ಮೇಲಿನಿಂದ ನೀರು ಹರಿಯುತ್ತಿದ್ದರೂ ಕೆಲವರು ಅಪಾಯ ಲೆಕ್ಕಿಸದೇ ವಾಹನವನ್ನು ಓಡಿಸುತ್ತಿದ್ದಾರೆ. ಸ್ಥಳೀಯರು ತಡೆಯುತ್ತಿದ್ದರೂ ನೀರಿನ ಸೆಳೆತದ ಮಧ್ಯೆಯೇ ಬೈಕ್, ಜೀಪ್ ಇತ್ಯಾದಿ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದಾರೆ.ಗೋಡೆ ಬಿದ್ದು ಗಾಯ: ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದರೆ ಜಿಲ್ಲೆಯಲ್ಲಿ ಭಾನುವಾರದಿಂದ ಜಿಟಿಜಿಟಿ ಮಳೆಯಾಗುತ್ತಿದೆ. ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನವರೆಗೂ ನಿರಂತರವಾಗಿ ಜಿಟಿಜಿಟಿ ಮಳೆಯಾಗಿದೆ. ಇದರಿಂದ ರಟ್ಟೀಹಳ್ಳಿ ತಾಲೂಕಿನ ಮೇದೂರು ಗ್ರಾಮದ ರೇಶ್ಮಾ ಅಲಿಸಾಬ್ ಎಂಬವರ ಮನೆ ಭಾಗಶಃ ಕುಸಿದಿದೆ. ಶಿಗ್ಗಾಂವಿ ತಾಲೂಕು ಕುನ್ನೂರು ಗ್ರಾಮದ ಮಹದೇವಿ ರಾಮಪ್ಪ ತಳವಾರ ಎಂಬವರ ಮನೆ ಗೋಡೆ ಕುಸಿದು ಮನೆಯಲ್ಲಿ ಮಲಗಿದ್ದ ರಾಮಪ್ಪ ತಳವಾರ ಅವರಿಗೆ ಗಾಯವಾಗಿದೆ. ಅಲ್ಲದೇ ಗಣಪತಿ ಹಬ್ಬಕ್ಕೆಂದು ತಯಾರಿಸಿಟ್ಟಿದ್ದ ಸುಮಾರು 300 ಗಣಪತಿ ಮೂರ್ತಿಗಳಿಗೆ ಹಾನಿಯಾಗಿದೆ. ಹಾನಗಲ್ಲ ತಾಲೂಕಿನ ಕೆಲವರಕೊಪ್ಪ ಗ್ರಾಮದ ಮಾರುತಿ ಮೂಲಂಗಿ ಎಂಬವರ ಮನೆ ಗೋಡೆ ಕುಸಿದು ಹಾನಿಯಾಗಿದೆ. ಜಿಲ್ಲೆಯಲ್ಲಿ ಹರಿದಿರುವ ವರದಾ, ತುಂಗಭದ್ರಾ ನದಿಗಳು ತುಂಬಿ ಹರಿಯುತ್ತಿದ್ದರೂ ಕೆರೆಕಟ್ಟೆಗಳು ಭರ್ತಿಯಾಗಿಲ್ಲ. ಇದರಿಂದ ಇನ್ನೂ ಅಂತರ್ಜಲ ಮಟ್ಟ ಏರಿಕೆಯಾಗಿಲ್ಲ.
ಮಳೆ ವಿವರ: ಮಂಗಳವಾರ ಬೆಳಗಿನ 8 ಗಂಟೆವರೆಗಿನ 14 ಗಂಟೆಗಳ ಅವಧಿಯಲ್ಲಿ ಸವಣೂರು ತಾಲೂಕಿನಲ್ಲಿ 26 ಮಿಮೀ., ಹಿರೇಕೆರೂರು 31.5 ಮಿಮೀ, ರಟ್ಟೀಹಳ್ಳಿಯಲ್ಲಿ 25.2 ಮಿಮೀ, ಹಾನಗಲ್ಲ 41.2 ಮಿಮೀ, ಹಾವೇರಿ 18.2 ಮಿಮೀ, ಶಿಗ್ಗಾಂವಿ 19.2ಮಿಮೀ, ರಾಣಿಬೆನ್ನೂರು 15.2 ಮಿಮೀ ಹಾಗೂ ಬ್ಯಾಡಗಿಯಲ್ಲಿ 17.8 ಮಿಮೀ ಮಳೆಯಾಗಿದೆ.