ಬೈಂದೂರು ತಾಲೂಕಿನ ವಾರಾಹಿ ನದಿಯ ಸಿದ್ಧಾಪುರ ಏತ ನೀರಾವರಿ ಯೋಜನೆಯ ಕಾಮಗಾರಿ ಸಗಿತ ಸಮಸ್ಯೆಯ ಬಗ್ಗೆ ತಾಂತ್ರಿಕ ತಂಡದ ಜೊತೆ ಸಭೆ ನಡೆಸಿ, ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಕಲ್ಪಿಸುತ್ತೇವೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಉಡುಪಿ: ಬೈಂದೂರು ತಾಲೂಕಿನ ವಾರಾಹಿ ನದಿಯ ಸಿದ್ಧಾಪುರ ಏತ ನೀರಾವರಿ ಯೋಜನೆಯ ಕಾಮಗಾರಿ ಸಗಿತ ಸಮಸ್ಯೆಯ ಬಗ್ಗೆ ತಾಂತ್ರಿಕ ತಂಡದ ಜೊತೆ ಸಭೆ ನಡೆಸಿ, ಆದಷ್ಟು ಬೇಗ ಈ ಸಮಸ್ಯೆಗೆ ಪರಿಹಾರ ಕಲ್ಪಿಸುತ್ತೇವೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ ಸಚಿವರು, ವಾರಾಹಿ ನದಿ ಏತ ನೀರಾವರಿ ಯೋಜನೆಯ ಪರ ವಿರೋಧವಾಗಿ ಸ್ಥಳೀಯ ಕಾಂಗ್ರೆಸ್ ನಾಯಕರ ಕಚ್ಚಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ರೈತರ ಅನುಕೂಲಕ್ಕಾಗಿ ಮಾಡಿದ ಯೋಜನೆ, ಈ ಯೋಜನೆಯ ಬಗ್ಗೆ ವರದಿ ನೀಡುವುದಕ್ಕೆ ತಾಂತ್ರಿಕ ತಂಡ ಬಂದು ಹೋಗಿದೆ. ಯೋಜನೆಯ ಪರವಾಗಿರುವ ಹಿರಿಯ ಕಾಂಗ್ರೆಸ್ ನಾಯಕ ಪ್ರತಾಪ್ ಚಂದ್ರ ಶೆಟ್ಟಿ ಬಗ್ಗೆ ನಾನು ಮಾತನಾಡುವುದಿಲ್ಲ. ತಾಂತ್ರಿಕ ತಂಡ ಪರಿಶೀಲನೆ ನಡೆಸಿದೆ, ಜಿಲ್ಲಾಡಳಿತಕ್ಕೆ ಈ ಎಲ್ಲಾ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ಇದ್ದು, ಆದಷ್ಟು ಬೇಗ ಪರಿಹಾರ ಕಂಡುಕೊಳ್ಳುತ್ತೇವೆ.‌ ಈ ಯೋಜನೆ ಸ್ಥಗಿತಗೊಂಡಿರುವು ದುರ್ದೈವ ಎಂದು ಹೇಳಿದರು. ರಾಜಕೀಯ ಮಾಡುವ ದರ್ದಿಲ್ಲ: ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಗೆ ಅನುದಾನ ನೀಡುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂಬ ಮಾಜಿ ಸಚಿವ ಸುನಿಲ್ ಕುಮಾರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪರಶುರಾಮನನ್ನು ಕರಾವಳಿಯಲ್ಲಿ ಆರಾಧಿಸಲಾಗುತ್ತದೆ. ನಮಗೂ ಕೂಡ ಈ ವಿಚಾರದಲ್ಲಿ ರಾಜಕಾರಣ ಮಾಡುವುದು ಇಷ್ಟ ಇಲ್ಲ. ಸುನೀಲ್ ಕುಮಾರ್ ಪರಶುರಾಮನ ಮೂರ್ತಿಯನ್ನು ಫೈಬರ್ ನಲ್ಲಿ ಮಾಡಿಸಿದ್ದರು. ಫೈಬರ್ ನಲ್ಲಿ ಮಾಡಿಸಿ ಕಂಚಿನ ಮೂರ್ತಿ ಎಂದು ನಂಬಿಸಿದ್ದರು. ಅವರೇ ಜನರ ದಿಕ್ಕು ತಪ್ಪಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಜನರನ್ನು ನಂಬಿಸಿ ಮೋಸ ಮಾಡಿದ್ದು, ರಾಜಕೀಯ ಮಾಡಿದ್ದು ಸುನೀಲ್ ಕುಮಾರ್, ಕಾಂಗ್ರೆಸ್ ನವರಿಗೆ ದೇವರ ವಿಚಾರದಲ್ಲಿ ರಾಜಕೀಯ ಮಾಡುವ ದರ್ದು ಇಲ್ಲ. ಆದಷ್ಟು ಬೇಗ ಪರಶುರಾಮ ಮೂರ್ತಿಯ ಕಾಮಗಾರಿಯನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡ್ತೇವೆ ಎಂದರು.ಡಿಸಿ ಕೇಸರಿ ಧ್ವಜ ವಿಚಾರ: ಉಡುಪಿ ಪರ್ಯಾಯೋತ್ಸವದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಭಗವದ್ವಜ ಹಾರಿಸಿದ್ದಕ್ಕೆ ಕಾಂಗ್ರೆಸ್ ನಾಯಕರಿಂದ ವಿರೋಧ ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಈ ವಿಚಾರವನ್ನು ಇಲ್ಲಿಗೆ ಬಿಟ್ಟುಬಿಡಿ ಎಂದು ವಿನಂತಿಸಿದರು.

ಉಡುಪಿಯ ಪರ್ಯಾಯ ಒಂದು ಧಾರ್ಮಿಕ ಕಾರ್ಯಕ್ರಮ. ಸಾಂಸ್ಕೃತಿಕತೆಗೆ ಉಡುಪಿ ಹೆಸರುವಾಸಿ. ಅಂದು ಅಲ್ಲಿ ನಡೆದಿರುವುದು ಧಾರ್ಮಿಕ ಕಾರ್ಯಕ್ರಮ, ಆದ್ದರಿಂದ ಧಾರ್ಮಿಕ ಮನೋಭಾವನೆಯನ್ನು ಕೆರಳಿಸುವ ಕೆಲಸ ಯಾರೂ ಮಾಡಬಾರದು, ಯಾರು ಏನೇ ಮಾತನಾಡಲಿ, ಅಗತ್ಯ ಬಿದ್ದರೆ ನಾನು ಅವರ ಜೊತೆ ಚರ್ಚಿಸುತ್ತೇನೆ ಎಂದರು.