ಶಿವಮೊಗ್ಗದಲ್ಲಿ ಹುಟ್ಟಿ ಉಡುಪಿ ಜಿಲ್ಲೆಯಲ್ಲಿ ಹರಿಯುವ ವಾರಾಹಿ ನದಿಗೆ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ವಾರಾಹಿಯ ನೀರನ್ನು 38,800 ಹೆಕ್ಟೆರ್ ಕೃಷಿ ಭೂಮಿಗೆ ಹರಿಸುವ ಯೋಜನೆಗೆ 9 ಕೋಟಿ ರು. ವೆಚ್ಚದ 1979ರಲ್ಲಿ ಆಗಿನ ಮುಖ್ಯಮಂತ್ರಿ ಗುಂಡೂರಾವ್ ಅಡಿಗಲ್ಲು ಹಾಕಿದರು.

ಶಿವಮೊಗ್ಗದಲ್ಲಿ ಹುಟ್ಟಿ ಉಡುಪಿ ಜಿಲ್ಲೆಯಲ್ಲಿ ಹರಿಯುವ ವಾರಾಹಿ ನದಿಗೆ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ವಾರಾಹಿಯ ನೀರನ್ನು 38,800 ಹೆಕ್ಟೆರ್ ಕೃಷಿ ಭೂಮಿಗೆ ಹರಿಸುವ ಯೋಜನೆಗೆ 9 ಕೋಟಿ ರು. ವೆಚ್ಚದ 1979ರಲ್ಲಿ ಆಗಿನ ಮುಖ್ಯಮಂತ್ರಿ ಗುಂಡೂರಾವ್ ಅಡಿಗಲ್ಲು ಹಾಕಿದರು. 5 ವರ್ಷದಲ್ಲಿ ಮುಗಿಯಬೇಕಾಗಿದ್ದ ಯೋಜನೆ ಗುತ್ತಿಗೆದಾರರ ದುರಾಸೆ, ಅಧಿಕಾರಿಗಳ ಸಡಿಲ ನೀತಿ, ಅಧಿಕಾರಕ್ಕೆ ಬಂದ ಎಲ್ಲಾ ಪಕ್ಷಗಳ ಸರ್ಕಾರದ ನಿರ್ಲಕ್ಷದಿಂದಾಗಿ 35 ವರ್ಷಗಳವರೆಗೆ ವಿಸ್ತರಿಸಿತು, ಕೊನೆಗೆ 2015ರಲ್ಲಿ ಸ್ಥಳೀಯ ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ ಅವರ ಸತ್ಯಾಗ್ರಹದಿಂದಾಗಿ ಯೋಜನೆ ಮುಗಿಸಿ ಉದ್ಘಾಟನೆಗೊಂಡಿತು, ಆದರೇ ಅದಾಗಲೇ ಯೋಜನೆಯ ವೆಚ್ಚ 1000 ಕೋಟಿ ರು.ಗೂ ಮೀರಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿತ್ತು.

ಈ ಯೋಜನೆಯಲ್ಲಿ ಎಡದಂಡೆ ಕಾಲು ಮತ್ತು ಬಲದಂಡೆ ಕಾಲುವೆಗಳ ನಿರ್ಮಾಣವೂ ಸೇರಿತ್ತು, ಎಡದಂಡೆಯ ಕಾಮಗಾರಿ ಪೂರ್ಣಗೊಂಡಿದ್ದರೂ, ಬಲದಂಡೆಯ ಕಾಮಗಾರಿಗಳು ನಡೆದಿರಲಿಲ್ಲ, ಅದರಂಗವಾಗಿಯೇ ಈಗ ಸಿದ್ದಾಪುರ ಗ್ರಾಮದ ಹೊರಿಯಬ್ಬೆ ಎಂಬಲ್ಲಿ 165 ಕೋಟಿ ರು. ವೆಚ್ಚದ ಏತ ನೀರಾವರಿ ಕಾಮಗಾರಿ ಆರಂಭವಾಗಿತ್ತು. ಈ ಯೋಜನೆಯಿಂದ ಈ ಭಾಗದ 6 ಗ್ರಾಪಂಗಳ 1200 ಹೆ ಪ್ರದೇಶಕ್ಕೆ ನೀರಾವರಿಯಾಗುತ್ತದೆ. 35 ಸಾವಿರ ರೈತರಿಗೆ ಪ್ರತ್ಯಕ್ಷವಾಗಿ ಮತ್ತು ಅಂತರ್ಜಲ ಹೆಚ್ಚಾಗಿ ಇನ್ನೂ ಹತ್ತಾರು ಸಾವಿರ ಮಂದಿಗೆ ಪರೋಕ್ಷ ಲಾಭವಾಗುತ್ತದೆ.

ಈ ಯೋಜನೆಗೆ ಸರ್ಕಾರದ ತಾಂತ್ರಿಕ, ಆರ್ಥಿಕ ಮಂಜೂರಾತಿ ದೊರೆತು ಟೆಂಡರ್ ಆಗಿ, ಕಾಮಾಗಾರಿ ಆರಂಭವಾಗಿ ಇಲ್ಲಿನ ರೈತರು ತಮ್ಮ ಭೂಮಿಗೆ ನೀರು ಬಂದು ತಾವು ಕೃಷಿ ಮಾಡುವ ನಿರೀಕ್ಷೆಯಲ್ಲಿದ್ದಾಗ, ಏಕಾಏಕಿ ಆಕ್ಷೇಪ ವ್ಯಕ್ತವಾಗಿದೆ.

ಈ ಹೊರಿಯಬ್ಬೆ ಎಂಬಲ್ಲಿ ಒಂದು ಖಾಸಗಿ 11 ಮೆ.ವ್ಯಾ. ಜಲ ವಿದ್ಯುತ್ ಘಟಕ ಇದೆ. ಅದರ ಅಣೆಕಟ್ಟೆಯ ಮೇಲ್ಭಾಗದಲ್ಲಿ ಈ ಏತ ನೀರಾವರಿ ಯೋಜನೆ ಆರಂಭವಾಗಿದೆ. ಈಗ ಕಾಂಗ್ರೆಸ್ ನಾಯಕರೇ ಯೋಜನೆಗೆ ಆಕ್ಷೇಪ ಸಲ್ಲಿಸಿ, ಅಣೆಕಟ್ಟೆಯ ಕೆಳಗೆ 600 ಮೀಟರ್ ದೂರದಲ್ಲಿ ಈ ಏತ ನೀರಾವರಿ ಸ್ಥಾಪಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ, ಸರ್ಕಾರ ಕಾಮಗಾರಿಯನ್ನು ಸ್ಥಗಿತಗೊಳಿಸಿದೆ. ಇದಕ್ಕೆ ಈ ಖಾಸಗಿ ವಿದ್ಯುತ್ ಘಟಕದ ಉದ್ಯಮಿಯ ಲಾಭಿಯೇ ಕಾರಣ ಎಂಬುದು ರೈತ ಸಂಘದ ಆರೋಪವಾಗಿದೆ ಮತ್ತು ಯೋಜನೆಯನ್ನು ಪುನಃ ಆರಂಭಿಸುವಂತೆ ಜನಾಗ್ರಹ ಹೋರಾಟ ತೀವ್ರಗೊಂಡಿದೆ.