ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಬೆಲೆ ಏರಿಕೆ ನಡುವೆಯೂ ವರಮಹಾಲಕ್ಷ್ಮೀ ಹಬ್ಬವನ್ನು ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.ಸುಮಂಗಲಿಯರು, ಯುವತಿಯರು, ಮಕ್ಕಳು ಮರಮಹಾಲಕ್ಷ್ಮೀ ದೇವಿಯನ್ನು ಆರಾಧಿಸಿದರು.ಪ್ರತಿ ಮನೆ ಮನೆಯಲ್ಲೂ ವಿಶೇಷ ಅಲಂಕಾರದೊಂದಿಗೆ ಪೂಜಿಸಿ ಮಹಿಳೆಯರು, ಮಕ್ಕಳು ಆಶೀರ್ವಾದ ಪಡೆದು ಪುನೀತರಾದರು.ಈ ಬಾರಿ ಬೆಲೆ ಏರಿಕೆ ಎಂದಿಗಿಂತಲೂ ದುಪ್ಪಟ್ಟಾಗಿದ್ದರೂ ಸಹ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ವರಮಹಾಲಕ್ಷ್ಮೀ ಹಬ್ಬವನ್ನು ಸಡಗರದಿಂದ ಆಚರಿಸಿದ್ದು ಕಂಡು ಬಂತು.ಮನೆಗಳಲ್ಲಿ ವರಮಹಾಲಕ್ಷ್ಮೀ ದೇವಿಯ ಮುಖವಾಡಕ್ಕೆ ವಿಶೇಷ ಅಲಂಕಾರ ಮಾಡಿ, ಹಬ್ಬದ ಅಂಗವಾಗಿ ತಯಾರಿಸಿದ್ದ ಬಗೆ ಬಗೆಯ ಸಿಹಿ ತಿಂಡಿಗಳು ಸೇರಿದಂತೆ ಇನ್ನಿತರೆ ಖಾದ್ಯಗಳನ್ನು ನೈವೇದ್ಯಕ್ಕೆ ಇಟ್ಟು ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಇಷ್ಟಾರ್ಥ ಸಿದ್ದಿಸುವಂತೆ ಸುಮಂಗಲಿಯರು, ಮಕ್ಕಳು ಪ್ರಾರ್ಥಿಸಿದರು.ಬೆಳಿಗ್ಗೆಯಿಂದಲೂ ಮಹಿಳೆಯರು, ಮಕ್ಕಳು ನಗರದ ವಿವಿಧ ಬಡಾವಣೆಗಳಲ್ಲಿರುವ ಲಕ್ಷ್ಮೀ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ನಗರದ ಬಿ.ಹೆಚ್. ರಸ್ತೆಯಲ್ಲಿರುವ ಟಿಜಿಎಂಸಿ ಬ್ಯಾಂಕ್ ಆವರಣದಲ್ಲಿರುವ ಮಹಾಲಕ್ಷ್ಮೀ ದೇವಾಲಯ ಸೇರಿದಂತೆ ವಿವಿಧ ಬಡಾವಣೆಗಳಲ್ಲಿರುವ ಶ್ರೀ ಲಕ್ಷ್ಮೀ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆಗಳು ನೆರವೇರಿದವು. ಟಿಜಿಎಂಸಿ ಬ್ಯಾಂಕ್ ಆವರಣದಲ್ಲಿ ಶ್ರೀ ಲಕ್ಷ್ಮೀ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ಹಬ್ಬದ ಅಂಗವಾಗಿ ವಿಶೇಷ ಧಾರ್ಮಿಕ ವಿಧಿ ವಿಧಾನಗಳು ನೆರವೇರಿಸಲಾಗಿದ್ದು, ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಲಾಗಿದೆ.ಭಕ್ತಾದಿಗಳು ಸಹ ಸರದಿ ಸಾಲಿನಲ್ಲಿ ನಿಂತು ಅಮ್ಮನವರ ದರ್ಶನ ಪಡೆದರು. ವರಮಹಾಲಕ್ಷ್ಮೀಹಬ್ಬ ಆಚರಣೆಗೆ ಹೂವು, ಹಣ್ಣು ಹಂಪಲುಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಸಹ ಯಾವುದನ್ನೂ ಲೆಕ್ಕಿಸದೆ ಜನಸಾಮಾನ್ಯರು ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದ್ದು ವಿಶೇಷವಾಗಿತ್ತು.