ನಗರದ ಬಿ.ಎಚ್. ರಸ್ತೆಯಲ್ಲಿರುವ ಟಿಜಿಎಂಸಿ ಬ್ಯಾಂಕ್ ಆವರಣದಲ್ಲಿರುವ ಮಹಾಲಕ್ಷ್ಮಿ ದೇವಾಲಯ ಸೇರಿದಂತೆ ವಿವಿಧ ಬಡಾವಣೆಗಳಲ್ಲಿರುವ ಶ್ರೀ ಲಕ್ಷ್ಮಿ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆಗಳು ನೆರವೇರಿದವು.

ಕನ್ನಡಪ್ರಭ ವಾರ್ತೆ ತುಮಕೂರು

ಮಳೆ ಕೊರತೆ ಹಾಗೂ ಬೆಲೆ ಏರಿಕೆ ನಡುವೆಯೂ ಇಷ್ಟಾರ್ಥ ಸಿದ್ಧಿಸಿ ಅಷ್ಟೈಶ್ವರ್ಯ ದಯಪಾಲಿಸುವ ವರಮಹಾಲಕ್ಷ್ಮಿ ಹಬ್ಬವನ್ನು ಜಿಲ್ಲೆಯಾದ್ಯಂತ ಸಡಗರ- ಸಂಭ್ರಮ ಹಾಗೂ ಶ್ರದ್ಧಾ- ಭಕ್ತಿಯಿಂದ ಆಚರಿಸಲಾಯಿತು.

ಸುಮಂಗಲಿಯರು, ಯುವತಿಯರು, ಮಕ್ಕಳು ವರಮಹಾಲಕ್ಷ್ಮಿ ದೇವಿಯನ್ನು ಆರಾಧಿಸಿದರು. ವರಮಹಾಲಕ್ಷ್ಮಿಯನ್ನು ಪ್ರತಿ ಮನೆ ಮನೆಯಲ್ಲೂ ವಿಶೇಷ ಅಲಂಕಾರದೊಂದಿಗೆ ಪೂಜಿಸಿ ಮಹಿಳೆಯರು, ಮಕ್ಕಳು ಆಶೀರ್ವಾದ ಪಡೆದು ಪುನೀತರಾದರು.

ಈ ಬಾರಿ ಬೆಲೆ ಏರಿಕೆ ಎಂದಿಗಿಂತಲೂ ದುಪ್ಪಟ್ಟಾಗಿದ್ದರೂ ಸಹ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲೂ ತಮ್ಮ ಇಷ್ಟಾರ್ಥ ಸಿದ್ಧಿಸುವ ವರಮಹಾಲಕ್ಷ್ಮಿ ಹಬ್ಬವನ್ನು ಸಡಗರದಿಂದ ಆಚರಿಸಿದ್ದು ಕಂಡು ಬಂದಿತು.

ಸಂಪ್ರದಾಯದಂತೆ ಸುಮಂಗಲಿಯರು ಒಳ್ಳೆಯ ಘಳಿಗೆಯಲ್ಲಿ ವರಮಹಾಲಕ್ಷ್ಮಿಯನ್ನು ಪೂಜಿಸಬೇಕೆಂದು ಇಡೀ ರಾತ್ರಿ ನಿದ್ದೆ ಮಾಡದೆ ದೇವಿಯನ್ನು ತಮ್ಮ ತಮ್ಮ ಮನೆಗಳಲ್ಲಿ ಸಣ್ಣ ತಾಮ್ರದ ಬಿಂದಿಗೆ ಅಥವಾ ಬೆಳ್ಳಿ ಚೆಂಬನ್ನು ಕಳಶದ ರೂಪದಲ್ಲಿ ಇಟ್ಟು ಅದರಲ್ಲಿ ನೀರು ತುಂಬಿಸಿ ಅದರ ಮೇಲೆ ತೆಂಗಿನ ಕಾಯಿ ಇಟ್ಟು ಅದಕ್ಕೆ ಅಮ್ಮನವರ ಬೆಳ್ಳಿ ಮುಖವಾಡ ಇಟ್ಟು, ಸೀರೆ ಉಡಿಸಿ, ಒಡವೆ, ಹೂವುಗಳಿಂದ ಸಿಂಗರಿಸುವ ಕಾರ್ಯದಲ್ಲಿ ನಿರತರಾಗಿದ್ದ ದೃಶ್ಯಗಳು ಕಂಡು ಬಂದವು.

ಮನೆಗಳಲ್ಲಿ ದೇವಿಯ ಮುಖವಾಡಕ್ಕೆ ವಿಶೇಷ ಅಲಂಕಾರ ಮಾಡಿ, ಹಬ್ಬದ ಅಂಗವಾಗಿ ತಯಾರಿಸಿದ್ದ ಬಗೆ ಬಗೆಯ ಸಿಹಿ ತಿಂಡಿಗಳು ಸೇರಿದಂತೆ ಇನ್ನಿತರೆ ಖಾದ್ಯಗಳನ್ನು ನೈವೇದ್ಯಕ್ಕೆ ಇಟ್ಟು ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಇಷ್ಟಾರ್ಥ ಸಿದ್ಧಿಸುವಂತೆ ಸುಮಂಗಲಿಯರು, ಮಕ್ಕಳು ಪ್ರಾರ್ಥಿಸಿದರು.

ಇಷ್ಟಾರ್ಥಗಳನ್ನು ಸಿದ್ಧಿಸುವ ವರಮಹಾಲಕ್ಷ್ಮಿ ಹಬ್ಬದಲ್ಲಿ ಮುತ್ತೈದೆಯರು ಮನೆಗಳಿಗೆ ಬಂದು ಅರಿಶಿನ- ಕುಂಕುಮ ಪಡೆದು ಹರಸಿದರೆ ಹಬ್ಬದ ಸಂಭ್ರಮದ ಇಮ್ಮಡಿಗೊಂಡು ಮಹಿಳೆಯರಲ್ಲಿ ಧನ್ಯತಾ ಭಾವ ಎದ್ದು ಕಾಣುತ್ತದೆ. ಅದರಂತೆ ಪ್ರತಿಯೊಬ್ಬರ ಮನೆಯಲ್ಲೂ ಸುಮಂಗಲಿಯರಿಗೆ ಅರಿಶಿನ- ಕುಂಕುಮ ನೀಡಿ ಅವರಿಂದ ಆಶೀರ್ವಾದ ಪಡೆಯುತ್ತಿದ್ದ ದೃಶ್ಯಗಳು ಸಹ ಕಂಡು ಬಂದವು. ಬೆಳಗ್ಗೆಯಿಂದಲೂ ಮಹಿಳೆಯರು, ಮಕ್ಕಳು ನಗರದ ವಿವಿಧ ಬಡಾವಣೆಗಳಲ್ಲಿರುವ ಲಕ್ಷ್ಮಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ನಗರದ ಬಿ.ಎಚ್. ರಸ್ತೆಯಲ್ಲಿರುವ ಟಿಜಿಎಂಸಿ ಬ್ಯಾಂಕ್ ಆವರಣದಲ್ಲಿರುವ ಮಹಾಲಕ್ಷ್ಮಿ ದೇವಾಲಯ ಸೇರಿದಂತೆ ವಿವಿಧ ಬಡಾವಣೆಗಳಲ್ಲಿರುವ ಶ್ರೀ ಲಕ್ಷ್ಮಿ ದೇವಾಲಯಗಳಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆಗಳು ನೆರವೇರಿದವು.

ಟಿಜಿಎಂಸಿ ಬ್ಯಾಂಕ್ ಆವರಣದಲ್ಲಿ ಶ್ರೀ ಲಕ್ಷ್ಮಿದೇವಾಲಯದಲ್ಲಿ ಬೆಳಗ್ಗೆಯಿಂದಲೇ ಹಬ್ಬದ ಅಂಗವಾಗಿ ವಿಶೇಷ ಧಾರ್ಮಿಕ ವಿಧಿ ವಿಧಾನಗಳು ನೆರವೇರಿಸಲಾಗಿದ್ದು, ಅಮ್ಮನವರಿಗೆ ವಿಶೇಷ ಅಲಂಕಾರ ಮಾಡಲಾಗಿದೆ.

ಭಕ್ತಾದಿಗಳು ಸಹ ಸರದಿ ಸಾಲಿನಲ್ಲಿ ನಿಂತು ಅಮ್ಮನವರ ದರ್ಶನ ಪಡೆದರು.

ವರಮಹಾಲಕ್ಷ್ಮಿ ಹಬ್ಬ ಆಚರಣೆಗೆ ಹೂವು, ಹಣ್ಣು ಹಂಪಲುಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಸಹ ಯಾವುದನ್ನೂ ಲೆಕ್ಕಿಸದೆ ಜನಸಾಮಾನ್ಯರು ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದ್ದು ವಿಶೇಷವಾಗಿತ್ತು.