ಸಾರಾಂಶ
ಬಾಳೆಹೊನ್ನೂರು ಹೋಬಳಿಯಾದ್ಯಂತ ಮಹಿಳೆಯರು ವರಮಹಾಲಕ್ಷ್ಮೀ ವ್ರತವನ್ನು ಶ್ರದ್ಧಾ, ಭಕ್ತಿಯಿಂದ ಶುಕ್ರವಾರ ಆಚರಿಸಿದರು.
ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ಬಾಳೆಹೊನ್ನೂರು ಹೋಬಳಿಯಾದ್ಯಂತ ಮಹಿಳೆಯರು ವರಮಹಾಲಕ್ಷ್ಮೀ ವ್ರತವನ್ನು ಶ್ರದ್ಧಾ, ಭಕ್ತಿಯಿಂದ ಶುಕ್ರವಾರ ಆಚರಿಸಿದರು.ವರಮಹಾಲಕ್ಷ್ಮೀ ವ್ರತದ ಅಂಗವಾಗಿ ಮನೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ, ಮನೆಗಳಲ್ಲಿ ಕಲಶ ಪ್ರತಿಷ್ಠಾಪಿಸಿ ಭಕ್ತಿಯಿಂದ ಲಕ್ಷ್ಮೀಯನ್ನು ಪೂಜಿಸಿ ಪ್ರಾರ್ಥಿಸಿದರು. ಹಬ್ಬಕ್ಕೆಂದು ತಯಾರಿಸಿದ ವಿವಿಧ ಖಾದ್ಯಗಳನ್ನು ದೇವರಿಗೆ ನೈವೇದ್ಯ ಮಾಡಿದರು. ಮುತ್ತೈದೆಯರನ್ನು ಮನೆಗೆ ಆಹ್ವಾನಿಸಿದ ನಾರಿಯರು ಅರಿಶಿನ, ಕುಂಕುಮ, ಹೂ, ಬಳೆಗಳನ್ನು ನೀಡಿ ಸತ್ಕರಿಸಿದರು. ಹೂ, ಹಣ್ಣು ಮತ್ತಿತರ ಪೂಜಾ ಸಾಮಾಗ್ರಿಗಳ ಬೆಲೆ ಏರಿಕೆ ನಡುವೆಯೂ ಲಕ್ಷ್ಮೀ ವ್ರತ ವಿಜೃಂಭಣೆಯಿಂದ ಧಾರ್ಮಿಕ, ಪಾರಂಪರಿಕವಾಗಿ ನಡೆಯಿತು.
ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ರಂಭಾಪುರಿ ಪೀಠದ ಶಕ್ತಿಮಾತೆ ಚೌಡೇಶ್ವರಿ ಅಮ್ಮನವರ ಸನ್ನಿಧಿ, ಭದ್ರಕಾಳಿ ಅಮ್ಮನವರು ಹಾಗೂ ಪಾರ್ವತಿದೇವಿ ಸನ್ನಿಧಿಯಲ್ಲಿ ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ವಿಶೇಷ ಪೂಜೆ ನೆರವೇರಿಸಿ, ಅಷ್ಟೋತ್ತರ, ಕುಂಕುಮಾರ್ಚನೆ ಹಾಗೂ ಮಹಾ ಮಂಗಳಾರತಿ ನೆರವೇರಿಸಿದರು. ರಂಭಾಪುರಿ ಪೀಠದ ಶಿವಾನಂದ ಎಸ್ಟೇಟ್‌ನಲ್ಲಿ ವರಮಹಾಲಕ್ಷ್ಮೀ ವ್ರತದ ಅಂಗವಾಗಿ ರಂಭಾಪುರಿ ಶ್ರೀ ಡಾ.ವೀರಸೋಮೇಶ್ವರ ಜಗದ್ಗುರುಗಳು ತುಂಬಿ ಹರಿಯುತ್ತಿರುವ ಕೆರೆಗೆ ಬಾಗಿನ ಸಲ್ಲಿಸಿದರು.ಪಟ್ಟಣದ ಮೃತ್ಯಂಬಿಕಾ ಅಮ್ಮನವರ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಕೆ.ಎಸ್.ಪ್ರಕಾಶ್‌ಭಟ್ ನೇತೃತ್ವದಲ್ಲಿ ದೇವರಿಗೆ ವಿಶೇಷ ಪೂಜಾದಿಗಳನ್ನು ನೆರವೇರಿಸಿ ವಿವಿಧ ಪುಷ್ಪಾಲಂಕಾರ ಮಾಡಲಾಗಿತ್ತು. ನ.ರಾ.ಪುರ ರಸ್ತೆಯ ಚೌಡೇಶ್ವರಿ ದೇವಸ್ಥಾನ, ಅಕ್ಷರನಗರದ ಗುರಿಕಟ್ಟೆಬೈಲು ಚಾಮುಂಡೇಶ್ವರಿ ದೇವಾಲಯ ಸೇರಿದಂತೆ ಸುತ್ತಮುತ್ತಲಿನ ವಿವಿಧ ದೇವಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಿದವು ಹಾಗೂ ಬೆಳಗ್ಗಿನಿಂದಲೇ ಮಹಿಳೆಯರು ಅಲ್ಲಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.