ಆಗಸ್ಟ್‌ 18ರಿಂದ ವರವಿ ಮೌನೇಶ್ವರ ಜಾತ್ರಾಮಹೋತ್ಸವ

| Published : Aug 15 2025, 01:00 AM IST

ಸಾರಾಂಶ

ತಾಲೂಕಿನ ಸುಕ್ಷೇತ್ರ ವರವಿ ಮೌನೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವ ಆ. ೧೮ರಿಂದ ೨೨ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಂಗೀತಪರ ಕಾರ್ಯಕ್ರಮಗಳೊಂದಿಗೆ ವಿಶ್ವಕರ್ಮ ಮಠಾಧಿಪತಿಗಳು ಹಾಗೂ ಹರಗುರು ಚರಮೂರ್ತಿಗಳ ಉಪಸ್ಥಿತಿಯಲ್ಲಿ ಅದ್ಧೂರಿಯಾಗಿ ಜರುಗಲಿದೆ ಎಂದು ವರವಿ ಮೌನೇಶ್ವರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ್ ಕಮಿಟಿ ಅಧ್ಯಕ್ಷ ಮೋಹನ್ ನರಗುಂದ ಹೇಳಿದರು.

ಶಿರಹಟ್ಟಿ: ತಾಲೂಕಿನ ಸುಕ್ಷೇತ್ರ ವರವಿ ಮೌನೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವ ಆ. ೧೮ರಿಂದ ೨೨ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಂಗೀತಪರ ಕಾರ್ಯಕ್ರಮಗಳೊಂದಿಗೆ ವಿಶ್ವಕರ್ಮ ಮಠಾಧಿಪತಿಗಳು ಹಾಗೂ ಹರಗುರು ಚರಮೂರ್ತಿಗಳ ಉಪಸ್ಥಿತಿಯಲ್ಲಿ ಅದ್ಧೂರಿಯಾಗಿ ಜರುಗಲಿದೆ ಎಂದು ವರವಿ ಮೌನೇಶ್ವರ ದೇವಸ್ಥಾನ ಹಾಗೂ ಮಠದ ವಿಕಾಸ ಟ್ರಸ್ಟ್ ಕಮಿಟಿ ಅಧ್ಯಕ್ಷ ಮೋಹನ್ ನರಗುಂದ ಹೇಳಿದರು.

ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಮಾಜದ ಮುಖಂಡರ ಸಮ್ಮುಖದಲ್ಲಿ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು.

ಮೌನೇಶ್ವರ, ಕಾಳಹಸ್ತೇಂದ್ರ ಶ್ರೀ, ಸೂರ್ಯನಾರಾಯಣ ಶ್ರೀ, ಮಹೇಂದ್ರ ಶ್ರೀ, ಜಗನ್ನಾಥ ಶ್ರೀ, ಅಭಿನವ ನಾಗಲಿಂಗ ಶ್ರೀ, ರಾಮಚಂದ್ರ ಶ್ರೀ, ಪ್ರಮೋದ ಶ್ರೀ, ನಾಗಮೂರ್ತೇಂದ್ರ ಶ್ರೀ, ವೀರೇಂದ್ರ ಶ್ರೀ, ಸೋಮಲಿಂಗ ಶ್ರೀ, ಶ್ರೀಕಂಠ ಶ್ರೀಗಳು ಐದು ದಿನಗಳ ಕಾಲ ನಡೆಯಲಿರುವ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.

ಸಮಾಜದ ಮುಖಂಡ ಆರ್.ಡಿ. ಕಡ್ಲಿಕೊಪ್ಪ ಮಾತನಾಡಿ, ಆ.೧೮ರಂದು ೧೨.೧೫ಕ್ಕೆ ಜಾತ್ರಾಮಹೋತ್ಸವ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮೌನೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ. ಮಠದ ಟ್ರಸ್ಟ್ ಕಮಿಟಿ ಅಧ್ಯಕ್ಷ ಮೋಹನ್ ನರಗುಂದ ಅಧ್ಯಕ್ಷತೆ ವಹಿಸಲಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕರು ಸೇರಿದಂತೆ ಇತರರು ಆಗಮಿಸಲಿದ್ದಾರೆ ಎಂದರು.

ಸಂಜೆ ೭.೧೫ಕ್ಕೆ ಶಹಪೂರದ ಕಾಳಹಸ್ತೇಂದ್ರ ಶ್ರೀಗಳಿಂದ ಮೌನೇಶ್ವರ ಲೀಲಾ ವಿಲಾಸ ಪ್ರವಚನ ಜರುಗಲಿದೆ. ೮.೧೫ಕ್ಕೆ ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮ ಜರುಗಲಿದೆ. ೧೯ರಂದು ಬೆಳಗ್ಗೆ ೧೧.೩೦ಕ್ಕೆ ಧಾರ್ಮಿಕ ಸಭೆ, ಮಧ್ಯಾಹ್ನ ೪ ಗಂಟೆಗೆ ಕಡುಬಿನ ಕಾಳಗ ನಂತರ ಶೈಕ್ಷಣಿಕ ವಿಚಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

೨೦ರಂದು ಬೆಳಗ್ಗೆ ೯.೧೫ರಿಂದ ೧೨ರ ವರೆಗೆ ಸಾಮೂಹಿಕ ಉಪನಯನ ಸಂಜೆ ಧಾರ್ಮಿಕ ಸಭೆ ಹಾಗೂ ಮೌನೇಶ್ವರ ಲೀಲಾ ವಿಲಾಸ ಪ್ರವಚನ ಮತ್ತು ರಾತ್ರಿ ೮ರಿಂದ ಗುಳೆದಗುಡ್ಡದ ಅಖಂಡೇಶ್ವರ ಎಂ.ಪತ್ತಾರ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

೨೧ರಂದು ಪಲ್ಲಕ್ಕಿ ಅಲಾವಿ ಗುಡ್ಡಕ್ಕೆ ಹೋಗಿ ಬರುವುದು. ಪುರವಂತರ ಸೇವೆ ಜರುಗುವುದು. ಸಂಜೆ ಧಾರ್ಮಿಕ ಸಭೆ ಹಾಗೂ ಮೌನೇಶ್ವರ ಲೀಲಾ ವಿಲಾಸ ಪ್ರವಚನ. ರಾತ್ರಿ ೮ ಗಂಟೆಗೆ ಪ್ರವಚನ, ಸಂಗೀತ ಕಾರ್ಯಕ್ರಮ ವೀಣಾ ಸವದತ್ತಿ ಮತ್ತು ಅರ್ಚನಾ ವಿ.ಪತ್ತಾರ ಇವರಿಂದ ಜರುಗಲಿದೆ.

೨೨ರಂದು ಮಹಾಪ್ರಸಾದ, ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭ, ದಾನಿಗಳಿಗೆ ಸನ್ಮಾನ ಹಾಗೂ ಪೂಜಾಫಲ ಲೀಲಾವು ನಡೆಯಲಿದೆ.

ಸಭೆಯ ಸಾನ್ನಿಧ್ಯವನ್ನು ಮೌನೇಶ್ವರ ಶ್ರೀಗಳು, ಫಕೀರ ದಿಂಗಾಲೇಶ್ವರ ಶ್ರೀಗಳು, ಶಿವಕುಮಾರ ಶ್ರೀಗಳು ವಹಿಸಲಿದ್ದು, ಮೋಹನ್ ನರಗುಂದ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಡಾ. ಚಂದ್ರು ಲಮಾಣಿ ಸೇರಿದಂತೆ ವಿವಿಧ ಗಣ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚಂದ್ರಕಾಂತ ಸೋನಾರ, ಮಹೇಶ ಹುಲಬಜಾರ, ಈರಣ್ಣ ಬಡಿಗೇರ, ನಿರಂಜನಾಚಾರ್ಯ ಬಡಿಗೇರ, ಶ್ರೀಧರ ಕೊಣ್ಣೂರ, ಮೌನೇಶ ಬೆಳ್ಳಿಗಟ್ಟಿ, ಮೌನೇಶ ಬಡಿಗೇರ, ದೇವೇಂದ್ರಪ್ಪ ಬಡಿಗೇರ, ಅಶೋಕ ಬಡಿಗೇರ, ಗಣೇಶ ಕಮ್ಮಾರ ಇತರರು ಇದ್ದರು.