ವಿಜೃಂಭಣೆಯಿಂದ ನಡೆದ ನಿಮಿಷಾಂಬ ದೇವಿಯ ವರ್ಧಂತ್ಯುತ್ಸವ

| Published : May 19 2024, 01:58 AM IST

ಸಾರಾಂಶ

ಗ್ರಾಮದ ನಾರಿಯರು ತಮ್ಮ ತಮ್ಮ ಮನೆಯಂಗಳ ಶುಚಿಗೊಳಿಸಿ, ರಂಗೋಲಿ ಬಿಟ್ಟು ದೇವಿ ಮೆರವಣಿಗೆ ಬರುವುದನ್ನೇ ಕಾಯುತ್ತಿದ್ದರು. ಮೆರವಣಿಗೆಯಲ್ಲಿ ಬಂದ ದೇವಿಗೆ ಹಣ್ಣು, ಕಾಯಿ, ಆರತಿ ಮಾಡಿ ಭಕ್ತಿ- ಭಾವದಿಂದ ಪ್ರಾರ್ಥನೆ ಸಲ್ಲಿಸುತ್ತಿದ್ದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣದ ಗಂಜಾಂನ ಐತಿಹಾಸಿಕ ಪ್ರಸಿದ್ಧ ಆದಿದೇವತೆ ನಿಮಿಷಾಂಬ ದೇವಿಯ ವರ್ಧಂತ್ಯುತ್ಸವ ವಿಜೃಂಭಣೆಯಿಂದ ಜರುಗಿತು.

ಸಾವಿರಾರು ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಮಿಷಾಂಬ ದೇವಿಯ ದರ್ಶನ ಪಡೆದರು. ಬೆಂಗಳೂರಿನ ಧಾರ್ಮಿಕದತ್ತಿ ಇಲಾಖೆ ಆಯುಕ್ತ ಎಚ್. ಬಸವರಾಜೇಂದ್ರ, ಜಿಲ್ಲಾಧಿಕಾರಿ ಡಾ. ಕುಮಾರ್, ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್.ನಾಗರಾಜು ಹಾಗೂ ದೇವಾಲಯದ ಸಮಿತಿ ಅಧ್ಯಕ್ಷರು, ಸದಸ್ಯರ ನೇತೃತ್ವದಲ್ಲಿ ಅಮ್ಮನವರ ವರ್ಧಂತ್ಯುತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ, ಹವನಗಳು ನಡೆದವು, ದೇವಿಗೆ ವಿಶೇಷವಾಗಿ ಹೂವಿನ ಅಲಂಕಾರ, ದೇವಾಲಯಕ್ಕೆ ದೀಪಾಲಂಕಾರ ಇತರೆ ಸೇವೆಗಳು ನಡೆದವು.

ಶನಿವಾರ ಬೆಳಗ್ಗೆ 8ಗಂಟೆಗೆ ಮಹಾಸಂಕಲ್ಪ, ಕಲಶ ಸ್ಥಾಪನೆ, ಸಪ್ತಶತಿ ಪಾರಾಯಣ, ಕಲಶ ಪೂಜೆಯಿಂದ ಪ್ರಾರಂಭಗೊಂಡು ನಿಮಿಷಾಂಬ ಹೋಮ ಪೂರ್ಣಾಹುತಿಯೊಂದಿಗೆ 121 ಕಲಶಗಳ ಮಹಾಭಿಷೇಕ, ಅಷ್ಟ ದಿಗ್ಬಲಿ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಈ ಬಾರಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಸೇರಿ ಅಧಿಕಾರಿ ವರ್ಗದವರಿಂದ ದೇವಾಲಯಕ್ಕೆ ಬರುವ ಭಕ್ತರಿಗೆ ನಿತ್ಯ ಅನ್ನದಾನ , ಪ್ರಸಾದ ಕಾರ್ಯಕ್ರಮಗಳು, ಎಂದಿನಂತೆ ಮಧ್ಯಾಹ್ನ 1 ಗಂಟೆಗೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ಸಂಜೆ 6-30ಕ್ಕೆ ದಕ್ಷಿಣ ಗಂಗೆ ಕಾವೇರಿ ಮಾತೆಗೆ ಪೂಜೆ, ಮಹಾ ಆರತಿಯನ್ನು ನೆರವೇರಿಸಲಾಯಿತು.

ದೇವಿ ದರ್ಶನಕ್ಕೆ ಆಗಮಿಸಿದ ಸಾವಿರಾರು ಭಕ್ತರಿಗೆ ದೇವಾಲಯದ ವತಿಯಿಂದ ಪ್ರಸಾದ ವಿತರಣಾ ಕಾರ್ಯ ನಡೆಸಲಾಯಿತು. ದೇಗುಲದ ಇಒ ಸಿ.ಜಿ. ಕೃಷ್ಣ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ, ಸಮಿತಿ ಸದಸ್ಯರು , ಸ್ಥಳೀಯ ಜನಪ್ರತಿನಿಧಿಗಳು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಶೇಷ ದರ್ಶನ ಪಡೆದರು.

ರಾಜ ಬೀದಿಯಲ್ಲಿ ಸಂಭ್ರಮದ ಉತ್ಸವ:

ಸಂಜೆ ದಕ್ಷಿಣ ಗಂಗೆ ಕಾವೇರಿಗೆ ಮಹಾಮಂಗಳಾರತಿ ಮಾಡಿದ ನಂತರ 2020ರ ಕೊರೋನಾ ಸಮಯದಲ್ಲಿ ನಿಂತಿದ್ದ ಶ್ರೀನಿಮಿಷಾಂಬ ಉತ್ಸವ ಮೂರ್ತಿ ಮೆರವಣಿಗೆಗೆ ಈ ಬಾರಿ ಮತ್ತೆ ಗಂಜಾಂ ಗ್ರಾಮದ ರಾಜಬೀದಿಯಲ್ಲಿ ಚಾಲನೆ ನೀಡಲಾಯಿತು.

ಗಂಜಾಂ ಗ್ರಾಮದ ರಾಜ ಬೀದಿಯಲ್ಲಿ ಅಲಂಕೃತಗೊಂಡ ಬೆಳ್ಳಿ ಪಲ್ಲಕಿಯಲ್ಲಿ ಶ್ರೀನಿಮಿಷಾಂಬ ದೇವಿ ಉತ್ಸವ ಮೂರ್ತಿಯನ್ನು ವೈಭವಯುತವಾಗಿ ಮೆರವಣಿಗೆ ನಡೆಸಲಾಯಿತು.

ಗ್ರಾಮದ ಕರೀಘಟ್ಟ ರಸ್ತೆ ಮೂಲಕ ಹಾದು ಆರ್ಕಾಟ್ ಬೀದಿ , ಕರಡಿ ಮಾರಮ್ಮನ ರಸ್ತೆ ಮೂಲಕ ಗುಂಬಸ್ ರಸ್ತೆ ಮಾರ್ಗವಾಗಿ ಕುರಾದ್ ಬೀದಿ ತಲುಪುತ್ತಿದ್ದಂತೆ ನವಗ್ರಹ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪ್ರಸಾದ ವಿನಿಯೋಗದ ನಂತರ ಅದೇ ಮಾರ್ಗವಾಗಿ ಕರೀಘಟ್ಟ ರಸ್ತೆಗೆ ಬಂದು ನಂತರ ಅಂಬೇಡ್ಕರ್ ಬೀದಿ ಮೂಲಕ ಉತ್ಸವ ಮೆರವಣಿಗೆ ಹಾದುಹೋಗಿ ದನಿನ ಬೀದಿ, ನಂತರ ಮಾರಿ ಗುಡಿ ಬೀದಿ ಮೂಲಕ ಮೆರವಣಿಗೆ ಸಾಗಿ ದೇವಾಲಯಕ್ಕೆ ಉತ್ಸವ ಮೂರ್ತಿ ಬಂದು ನಿಲ್ಲುವಂತೆ ಮಾರ್ಗಸೂಚಿಗಳನ್ನು ಈ ಮುಂಚೆಯೇ ನಿಗಧಿಪಡಿಸಲಾಯಿತು.

ಗ್ರಾಮದ ನಾರಿಯರು ತಮ್ಮ ತಮ್ಮ ಮನೆಯಂಗಳ ಶುಚಿಗೊಳಿಸಿ, ರಂಗೋಲಿ ಬಿಟ್ಟು ದೇವಿ ಮೆರವಣಿಗೆ ಬರುವುದನ್ನೇ ಕಾಯುತ್ತಿದ್ದರು. ಮೆರವಣಿಗೆಯಲ್ಲಿ ಬಂದ ದೇವಿಗೆ ಹಣ್ಣು, ಕಾಯಿ, ಆರತಿ ಮಾಡಿ ಭಕ್ತಿ- ಭಾವದಿಂದ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಗ್ರಾಮದ ಗ್ರಾಮಸ್ಥರ ನೇತೃತ್ವದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಸಾರ್ವಜನಿಕರು , ಉನ್ನತ ಮಟ್ಟದ ಅಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.