ಸಾರಾಂಶ
ಭಾರತ ಆರ್ಥಿಕವಾಗಿ ಅಭಿವೃದ್ಧಿ ಪಥದಲ್ಲಿ ಇದ್ದರು ಸ್ತ್ರೀಯರ ಕುರಿತಾದ ಪೂರ್ವಗ್ರಹ ಪೀಡಿತ ಸಾಮಾಜಿಕ ಆಚರಣೆಗಳಿಂದ ಹಿಂದೆ ಉಳಿದಿದೆ.
ಅಂಕೋಲಾ:
ಭಾರತ ಆರ್ಥಿಕವಾಗಿ ಅಭಿವೃದ್ಧಿ ಪಥದಲ್ಲಿ ಇದ್ದರು ಸ್ತ್ರೀಯರ ಕುರಿತಾದ ಪೂರ್ವಗ್ರಹ ಪೀಡಿತ ಸಾಮಾಜಿಕ ಆಚರಣೆಗಳಿಂದ ಹಿಂದೆ ಉಳಿದಿದೆ. ಹೆಣ್ಣು ಭ್ರೂಣ ಹತ್ಯೆ ಅವ್ಯಾಹತವಾಗಿ ಮುಂದುವರಿದಿದ್ದು ಲಿಂಗಾನುಪಾತದಲ್ಲಿ ಏರುಪೇರಾಗಿದೆ ಎಂದು ಪ್ರಾಚಾರ್ಯ ಡಾ. ಎಸ್.ವಿ. ವಸ್ತ್ರದ ಹೇಳಿದರು.ತಾಲೂಕು ಆರೋಗ್ಯ ಇಲಾಖೆ ಸಭಾಭವನದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಯಕ್ತ ಏರ್ಪಡಿಸಿದ್ದ ‘ಬೇಟಿ ಬಚಾವೋ ಬೇಟಿ ಪಢಾವೋ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಮಾರಂಭ ಉದ್ಘಾಟಿಸಿದ ತಾಲೂಕು ವೈದ್ಯಾಧಿಕಾರಿ ಡಾ. ಜಗದೀಶ ನಾಯ್ಕ, ಮಹಿಳೆಯರು ಮತ್ತು ಮಕ್ಕಳು ಇಂದಿಗೂ ಅಸುರಕ್ಷಿತ ಸಮುದಾಯಗಳಾಗಿದ್ದಾರೆ. ಅವರ ಹಿತರಕ್ಷಣೆಗಾಗಿ ಸರ್ಕಾರ ಹಲವು ಕಾನೂನು ರೂಪಿಸಿದ್ದು ಈ ಕುರಿತು ಅರಿವು ಮೂಡಿಸುವ ಅಗತ್ಯವಿದೆ ಎಂದರು.ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸವಿತಾ ಶಾಸ್ತ್ರಿಮಠ ಅಭಿಯಾನದ ಧ್ಯೇಯೊದ್ದೇಶ ತಿಳಿಸಿದರು. ಹಿರಿಯ ಆರೋಗ್ಯ ಸಂರಕ್ಷಣಾಧಿಕಾರಿ ಇಂದಿರಾ ನಾಯ್ಕ, ತಾಲೂಕು ಆಶಾ ಕಾರ್ಯಕರ್ತರ ಮೇಲ್ವಿಚಾರಕಿಯರಾದ ಕಮಲಾ ಗೌಡ, ಗೌರಿ ಮಾರ್ಕಂಡಯ್ಯ, ಸೌಮ್ಯ ಗೌಡ ಉಪಸ್ಥಿತರಿದ್ದರು. ಭಾವನಾ ನಾಯ್ಕ ನಿರೂಪಿಸಿದರು. ತಾಲೂಕಿನ ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಶಿಕ್ಷಕಿಯರು ಭಾಗವಹಿಸಿದ್ದರು. ಇದೇ ವೇಳೆ ಬೇಟಿ ಬಚಾವೋ ಬೇಟಿ ಪಢಾವೋ ಅಭಿಯಾನ ಹಾಗೂ ಸ್ತ್ರೀ ಭ್ರೂಣ ಹತ್ಯೆ ವಿರುದ್ಧದ ಜಾಗೃತಿಯ ಭಿತ್ತಿ ಪತ್ರ ಬಿಡುಗಡೆಗೊಳಿಸಲಾಯಿತು.