ಸಾರಾಂಶ
ಡಂಬಳ: ಪ್ರತಿ ವರ್ಷ 2 ಕೋಟಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿ ಕೊಡುವುದಾಗಿ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮಾತಿನಂತೆ ನಡೆದುಕೊಳ್ಳದೆ ಯುವಕರನ್ನು ಯಾಮರಿಸಿದ್ದಾರೆ. ಇಂತಹ ವಚನ ಭ್ರಷ್ಟ ಸರ್ಕಾರವನ್ನು ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ತರಬೇಡಿ ಎಂದು ಶಾಸಕ ಜಿ.ಎಸ್. ಪಾಟೀಲ್ ಹೇಳಿದರು.
ಡಂಬಳ ಹೋಬಳಿಯ ಡೋಣಿ ಗ್ರಾಮದಲ್ಲಿ 181.50ಲಕ್ಷದಡಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಟ್ಟಡದ ಗುದ್ದಲಿ ಪೂಜೆ, 25ಲಕ್ಷ ರು. ದಡಿ ಸರ್ಕಾರಿ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಿಂದ ಮುಖ್ಯ ರಸ್ತೆಯವರೆಗೆ ಸಿ.ಸಿ.ರಸ್ತೆ, 10 ಲಕ್ಷ ರು. ಗ್ರಂಥಾಲಯ ಕಟ್ಟಡ ಉದ್ಘಾಟನೆ, 25ಲಕ್ಷ ರು. ಶ್ರೀ ಸದ್ಗುರು ಹಾಲೇಶ್ವರ ಆಶ್ರಮದ ಆವರಣದಲ್ಲಿ ಯಾತ್ರಿ ನಿವಾಸ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ಮುಖ್ಯ ಸಿದ್ದರಾಮಯ್ಯ ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಸರ್ಕಾರದಲ್ಲಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಆದ್ಯತೆ ನೀಡುವುದರ ಮೂಲಕ ಶೈಕ್ಷಣಿಕ ರಂಗಕ್ಕೆ ಶಕ್ತಿ ತುಂಬುವದರ ಮೂಲಕ ದೇಶದ ಶಕ್ತಿಯನ್ನು ಹೆಚ್ಚಿಸುವ ಕಾರ್ಯ ಬರದಿಂದ ರಾಜ್ಯದಲ್ಲಿ ಸಾಗಿದೆ ಎಂದು ಹೇಳಿದರು.ಹತ್ತು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರೈತರ ಸಾಲ ಮನ್ನಾ ಮಾಡಿಲ್ಲ ಬದಲಾಗಿ ಶ್ರೀಮಂತರ 10ಲಕ್ಷ ಕೋಟಿ ರು.ಸಾಲವನ್ನು ಮನ್ನಾ ಮಾಡುವ ಮೂಲಕ ಕೇಂದ್ರ ಸರ್ಕಾರ ಬಡವರ ಪರವಲ್ಲ ಬಂಡವಾಳಶಾಹಿಗಳ ಪರ ಎಂಬುದನ್ನು ಸಾಬೀತು ಮಾಡಿದೆ. ಆದರೆ ಕೇಂದ್ರದಲ್ಲಿ ಮನಮೋಹಸಿಂಗ ಪ್ರಧಾನಿಯವರು ಇದ್ದಾಗ ದೇಶಾದ್ಯಂತ ಎಲ್ಲಾ ಹಂತದ ರೈತರ ಸಾಲ ಮನ್ನಾ ಮಾಡಿ ರೈತರ ಪರ ಸರ್ಕಾರವಾಗಿತ್ತು. ಅಷ್ಟೇ ಅಲ್ಲದೆ ಇಂದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 5ಗ್ಯಾರಂಟಿ ಯೋಜನೆಗಳನ್ನು ಕೊಟ್ಟು ಮಾತಿನಂತೆ ಈಡೇರಿಸಿದೆ ಎಂದರು.
ವಿಪಕ್ಷದವರು 5 ಗ್ಯಾರಂಟಿಗಳನ್ನು ಕೊಡಲು ಸಾಧ್ಯವಿಲ್ಲ, ಇದೆಲ್ಲಾ ಸುಳ್ಳು ಎಂದಿದ್ದರು. ಆದರೆ ಅವರದೆ ಪಕ್ಷದ ನಾಯಕರು ಈ ಹಿಂದೆ ಹೇಳಿದಂತಹ ಬೇಡಿಕೆಗಳನ್ನು ಈಡೇರಿಸಿಲ್ಲ. ಕೇಂದ್ರದಲ್ಲಿ ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹೇಳುತ್ತಾ ಮೋದಿಕಾ ಗ್ಯಾರಂಟಿ ಸುಳ್ಳಿನ ಗ್ಯಾರಂಟಿಯಾಗಿ ಹೋರ ಹೊಮ್ಮಿದೆ. ಇದನ್ನು ನೋಡುತ್ತಿರುವ ಜನತೆ ಲೋಕ ಸಭೆಯ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುವುದರ ಮೂಲಕ ಮತ್ತೆ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ನಡೆಸುವುದು ನಿಶ್ಚಿತ ಎಂದು ಹೇಳಿದರು.ಮುಂಡರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ. ಮೋರನಾಳ, ರೋಣ ಪುರಸಭೆ ಉಪಾಧ್ಯಕ್ಷ ಮಿಥುನ ಜಿ. ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಗ್ಯಾರಂಟಿಗಳನ್ನು ಕಡುಬಡವರಿಗೆ ಕಾರ್ಮಿಕರಿಗೆ ರೈತರಿಗೆ ಮಹಿಳೆಯರಿಗೆ ನೀಡುವುದರ ಮೂಲಕ ಒಂದು ವರ್ಷದಲ್ಲಿ ಕುಟುಂಬಕ್ಕೆ 45 ಸಾವಿರ ಹಣ ವರ್ಗಾವಣೆಯಾಗುತ್ತಿದೆ. ಇಷ್ಟೆಲ್ಲಾ ಬಡವರ ಪರ ಕಾಳಜಿ ವಹಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನರು ಬರುವ ಎಲ್ಲಾ ಚುನಾವಣೆಗಳಲ್ಲಿ ರಾಜಕೀಯ ಶಕ್ತಿ ತುಂಬಲು ಬೆಂಬಲವಾಗಿರಬೇಕೆಂದು ಮನವಿ ಮಾಡಿದರು.
ಸಾನಿಧ್ಯ ವಹಿಸಿ ಶ್ರೀ ಅಮೃತೇಶ್ವರ ಹಾಲಸೋಮೇಶ್ವರ ಶ್ರೀಗಳು ಮಾತನಾಡಿದರು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಲಲಿತಾ ಕುಂಬಾರ, ಉಪಾಧ್ಯಕ್ಷೆ ನಾಗರತ್ನ ಒಡ್ಡರ, ಗೋಣಿಬಸಪ್ಪ ಕೊರ್ಲಹಳ್ಳಿ, ಶಾಂತವೀರಗೌಡ ಹೊಸಮನಿ, ಜಗದೀಶ ಮೈನಳ್ಳಿ, ಗುರನ್ನ ಕುರ್ತುಕೋಟಿ, ನಾಗರಾಜ ಸಜ್ಜನರ, ಬಿ.ಎಸ್.ಕೆರಿ, ಈಶಣ್ಣ ಓಲಿ, ಮಳ್ಳಪ್ಪ ಜೋಂಡಿ, ಒಂಟೆಲ್ಲಪ್ಪ ಒಡ್ಡರ, ಕಾಶಪ್ಪ ಅಳವುಂಡಿ, ಈರಪ್ಪ ಯಳವತ್ತಿ, ಬಸುರಾಜ ಪೂಜಾರ, ರಾಮಣ್ಣ ಮೇಗಲಮನಿ, ಭರಮಪ್ಪ ಕಿಲಾರಿ, ಪರಶುರಾಮ ಒಡ್ಡರ, ತಹಸೀಲ್ದಾರ್ ಧನಂಜಯ ಮಾಲಗಿತ್ತಿ, ಇಒ ವಿಶ್ವನಾಥ ಹೋಸಮನಿ, ಪಿಡಬ್ಲುಡಿ ನಾಗೇಂದ್ರ ಪಟ್ಟಣಶೆಟ್ಟರ, ಡಿಡಿಪಿಐ ಎಮ್.ಎ. ರಡ್ಡೇರ, ಸಮಾಜ ಕಲ್ಯಾಣ ಅಧಿಕಾರಿ ಉದಯಕುಮಾರ ಯಲಿವಾಳ, ಬಿಒ ಎಚ್.ಎಮ್. ಪಡ್ನೆಸ್, ಗಂಗಾಧರ ಇದ್ದರು.