ಸಾರಾಂಶ
ತುಮಕೂರು: ದಸರಾ ಸಮಿತಿಯ 34 ನೇ ವರ್ಷದ ದಸರಾ ಉತ್ಸವದ ಅಂಗವಾಗಿ ಅಕ್ಟೋಬರ್ 3 ರಿಂದ 12 ರವರಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಅಕ್ಟೋಬರ್ 3 ರಂದು ಕೆ.ಆರ್.ಬಡಾವಣೆ ಯ ಶ್ರೀರಾಮ ಮಂದಿರದಲ್ಲಿ ಸಾಂಸ್ಕೃತಿಕ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ದಸರಾ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಡಾ.ಪರಮೇಶ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 3 ರ ಸಂಜೆ 5.30ಕ್ಕೆ ನಡೆಯುವ ಸಾಂಸ್ಕೃತಿಕ ದಸರಾ ಕಾರ್ಯಕ್ರಮಕ್ಕೆ ಕುಂಚಿಟಿಗ ಮಹಾ ಸಂಸ್ಥಾನದ ಡಾ.ಹನುಮಂತನಾಥ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.ಕೇಂದ್ರ ಸರಕಾರದ ಜಲಶಕ್ತಿ ಮತ್ತು ರೈಲ್ವೆ ರಾಜ್ಯಸಚಿವ ವಿ.ಸೋಮಣ್ಣ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶಗೌಡ ಅವರು ಭಾಗವಹಿಸಲಿದ್ದು, ದಸರಾ ಸಮಿತಿ ಕಾರ್ಯಾಧ್ಯಕ್ಷ ಡಾ.ಪರಮೇಶ್ ಅಧ್ಯಕ್ಷತೆ ವಹಿಸುವರು. ನಂತರ ನೀಲಾಲಯ ನೃತ್ಯ ಕೇಂದ್ರದ ಬಾಲಾ ವಿಶ್ವನಾಥ್ ಮತ್ತು ತಂಡದವರಿಂದ ಮಹಿಷಾಸುರ ಮರ್ದಿನಿ ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ.ಅಕ್ಟೋಬರ್ 4ರ ಸಂಜೆ 3 ಗಂಟೆಗೆ ಭಜನಾ ಸ್ಪರ್ಧೆ, ಅಕ್ಟೋಬರ್ 5 ರ ಶನಿವಾರ ಸಂಜೆ 4 ಗಂಟೆಗೆ ಜಾನಪದ ಕಲಾ ಪ್ರಕಾರಗಳ ಸ್ಪರ್ಧೆ, ಅಕ್ಟೋಬರ್ 6ರಂದು ಬೆಳಗ್ಗೆ 10:30 ಕ್ಕೆ ಯೋಗ ದಸರಾ ಪ್ರಯುಕ್ತ ಯೋಗ ರಸಪ್ರಶ್ನೆ ಕಾರ್ಯಕ್ರಮ ಹಾಗೂ ಮಧ್ಯಾಹ್ನ 1 ಗಂಟೆಗೆ ದೇಶ ಭಕ್ತಿಗೀತೆಗಳ ನೃತ್ಯ ಸ್ಪರ್ಧೆ, ಅಕ್ಟೋಬರ್ 7ರಂದು ಸಂಜೆ 4 ಗಂಟೆಗೆ ಜನಪದ ಗೀತೆಗಳ ಸ್ಪರ್ಧೆ ಮತ್ತು 6 ಗಂಟೆಗೆ ಯೋಗ ದಸರಾ ಮತ್ತು ಮಲ್ಲಕಂಭ ಸ್ಪರ್ಧೆ ನಡೆಯಲಿದೆ.ಅಕ್ಟೋಬರ್ 8ರ ಸಂಜೆ ನಾಲ್ಕು ಗಂಟೆಗೆ ವೇಷಭೂಷಣ ಸ್ಪರ್ಧೆ ಹಾಗೂ ಗಾಯಕ ಶಂಕರ್ ಶಾನುಭೋಗ್ ತಂಡದಿಂದ ಕಾವ್ಯ ಸಂಗೀತ ಕಾರ್ಯಕ್ರಮ. ಅಕ್ಟೋಬರ್ 9ರ ಬುಧವಾರ ಸಂಜೆ 4 ಗಂಟೆಗೆ ರಂಗಗೀತೆಗಳ ಸ್ಪರ್ಧೆ, ಕುಮಾರಿ ಹಾರಿಕಾ ಮಂಜುನಾಥ್ ಅವರಿಂದ ಸಾಂಸ್ಕೃತಿಕ ಚಿಂತನ ಭಾಷಣ ನಡೆಯಲಿದೆ. ಅಕ್ಟೋಬರ್ 10 ರ ಗುರುವಾರ ಸಂಜೆ 3 ಗಂಟೆಗೆ ಸಾಂಪ್ರದಾಯಕ ಉಡುಗೆ, ತೊಡುಗೆ ಸ್ಪರ್ಧೆ, ಸಂಜೆ 6 ಗಂಟೆಗೆ ಸಾಯಿರಾಮನ್ ನೃತ್ಯಕೇಂದ್ರದವತಿಯಿಂದ ನೃತ್ಯ ವೈಭವ ಕಾರ್ಯಕ್ರಮ ಜರುಗಲಿದೆ.ಅಕ್ಟೋಬರ್ 11 ರ ಶುಕ್ರವಾರ ಆರು ಗಂಟೆಗೆ ಭೂಮಿತಾಯಿ ಬಳಗದ ನಿರ್ಮಲ ಮತ್ತು ತಂಡದಿಂದ ಜಾನಪದ ವೈಭವ ಕಾರ್ಯಕ್ರಮ, ಅಕ್ಟೋಬರ್ 12 ರ ಶನಿವಾರ ಬೆಳಗ್ಗೆ 11 ಗಂಟೆಗೆ ರಂಗೋಲಿ ಸ್ಪರ್ಧೆ, ಸಂಜೆ ನಾಲ್ಕುಗಂಟೆಗೆ ಸಿದ್ದಗಂಗಾ ಕ್ಷೇತ್ರದ ಸಿದ್ದಲಿಂಗಸ್ವಾಮೀಜಿ ಅವರಿಂದ ಸಾಮೂಹಿಕ ಶಮಿ ಪೂಜೆ ನೆರವೇರಲಿದೆ. ನಂತರ ಶೃತಿ.ವಿ.ಎಸ್, ಮಹೇಶ್ ಪ್ರಿಯದರ್ಶನ್, ಮತ್ತು ಅರುಂಧತಿ ವಸಿಷ್ಠ ಅವರಿಂದ ಕನ್ನಡ್ ಪದ ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಡಾ.ಪರಮೇಶ್ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಶಾಸಕ ಜಿ.ಬಿ.ಜೋತಿಗಣೇಶ್, ಮುಖಂಡರಾದ ಕೋರಿ ಮಂಜುನಾಥ್, ಆರ್.ಎಲ್.ರಮೇಶ್‌ಬಾಬು, ಬಸವರಾಜು ಜಿ.ಎಸ್, ಜಿ.ಕೆ.ಶ್ರೀನಿವಾಸ್, ಎಂ.ಕೆ.ನಾಗರಾಜರಾವ್, ಗೋವಿಂದರಾವ್ ಮತ್ತಿತರರು ಉಪಸ್ಥಿತರಿದ್ದರು.