ಸಾರಾಂಶ
ವಿವಿಧ ಕಲಾ ತಂಡಗಳಿಂದ ಜನಪದ ಗೀತೆ, ಜನಪದ ಸಂಗೀತ, ಭರತನಾಟ್ಯ, ಜಾನಪದ ನೃತ್ಯ, ಪೌರಾಣಿಕ ನಾಟಕ, ಸುಗಮ ಸಂಗೀತ, ಭರತನಾಟ್ಯ, ಸೋಬಾನೆಪದ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ಥಾನಿ ತಬಲ, ಜಾನಪದ ಗೀತೆ ಸೇರಿದಂತೆ ಇನ್ನಿತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕನ್ನಡಪ್ರಭವಾರ್ತೆ ಶ್ರೀರಂಗಪಟ್ಟಣ
ದಸರಾ ಮಹೋತ್ಸವ ಅಂಗವಾಗಿ ಯುವದಸರಾ ಅಂಗವಾಗಿ ಶಾಲಾ- ಕಾಲೇಜು ವಿದ್ಯಾರ್ಥಿಗಳು ಹಾಗೂ ಜಾನಪದ ಕಲಾ ತಂಡಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ಜರುಗಿದವು.ಪಟ್ಟಣದ ಶ್ರೀರಂಗನಾಥಸ್ವಾಮಿ ಮೈದಾನದ ಶ್ರೀರಂಗ ವೇದಿಕೆಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯ್ತಿ ವತಿಯಿಂದ ಏರ್ಪಡಿಸಿದ್ದ ನಡೆದ ಯುವ ದಸರಾ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಡಾ.ಬಿ.ನಂದೀಶ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಇಂತಹ ವೇದಿಕೆಗಳನ್ನು ಬಳಸಿಕೊಂಡು ತಮ್ಮ ಪ್ರತಿಭೆ ಅನಾವರಣಗೊಳಿಸಬೇಕು. ಪಠ್ಯೇತರ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ದೈಹಿಕವಾಗಿ ಸದೃಢರಾಗಬೇಕು ಎಂದರು.ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ನಿರ್ದೇಶಕ ಸಿ. ಚಲುವಯ್ಯ ಮಾತನಾಡಿ, ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದರಿಂದ ತಮ್ಮಲ್ಲಿನ ಭಯ, ಹಿಂಜರಿಕೆಯನ್ನು ಹೋಗಲಾಡಿಸುತ್ತದೆ ಎಂದರು.
ಇದೇ ವೇಳೆ ಯುವ ದಸರಾದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಸಾಧನೆ ಬಗ್ಗೆ ಸಮೂಹ ನೃತ್ಯ, ಆರಾಧನಾ ಕಾಲೇಜು ವಿದ್ಯಾರ್ಥಿಗಳು ನೃತ್ಯ (ನವದುರ್ಗೆಯರು), ನಗುವನಹಳ್ಳಿ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಂದ ಸಮೂಹ ನೃತ್ಯ (ಜಾನಪದ ಕಲೆ ಆಧಾರಿತ), ಅರಕೆರೆ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಂದ ಸಮೂಹ ನೃತ್ಯ (ಕನ್ನಡ ನಾಡು ನುಡಿ), ಶ್ರೀರಂಗಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ(ಅರ್ಜುನ ಆನೆಯ ಬಗ್ಗೆ), ಪರಿವರ್ತನಾ ಕಾಲೇಜು ವಿದ್ಯಾರ್ಥಿಗಳಿಂದ ಜಾನಪದ ಸಮೂಹ ಗೀತ ಗಾಯನ, ಭಾರತಿನಗರ ಕಾಲೇಜಿನಿಂದ ಪೌರಾಣಿಕ ನಾಟಕ ದೃಶ್ಯ, ಹನುಮಂತನಗರ ಭಾರತಿ ಪದವಿ ಪೂರ್ವ ಕಾಲೇಜಿನಿಂದ ವೈಶಂಪಾಯನ ಸರೋವರದಲ್ಲಿ ದುರ್ಯೋಧನ ಪ್ರಹಸನಗಳನ್ನೊಗೊಂಡ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ:
ವಿವಿಧ ಕಲಾ ತಂಡಗಳಿಂದ ಜನಪದ ಗೀತೆ, ಜನಪದ ಸಂಗೀತ, ಭರತನಾಟ್ಯ, ಜಾನಪದ ನೃತ್ಯ, ಪೌರಾಣಿಕ ನಾಟಕ, ಸುಗಮ ಸಂಗೀತ, ಭರತನಾಟ್ಯ, ಸೋಬಾನೆಪದ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ಥಾನಿ ತಬಲ, ಜಾನಪದ ಗೀತೆ ಸೇರಿದಂತೆ ಇನ್ನಿತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಮಕ್ಕಳ ಸಿನಿಮೋತ್ಸವ ಕಾರ್ಯಕ್ರಮ:
ಮಕ್ಕಳ ಚಲನಚಿತ್ರಗಳ ಸಿನಿಮೋತ್ಸವದ ಅಂಗವಾಗಿ ಗಂಜಾಂನ ಶ್ರೀದೇವಿ ಚಿತ್ರಮಂದಿರದಲ್ಲಿ ಅನ್ನ, ಬಾಬುರಾಯನ ಕೊಪ್ಪಲುನ ಭಾರತಿ ಚಿತ್ರಮಂದಿರದಲ್ಲಿ ನಾನು ಸಚಿನ್ ತೆಂಡೂಲ್ಕರ್ ಅಲ್ಲ ಹಾಗೂ ಅರಕೆರೆ ಮಂಜುನಾಥ್ ಚಿತ್ರಮಂದಿರದಲ್ಲಿ ಜೀರ್ಜಿಂಬೆ ಮಕ್ಕಳ ಚಲನಚಿತ್ರಗಳು ಪ್ರದರ್ಶನಗೊಂಡವು.