ಸಾರಾಂಶ
ಅಮಿತ್ ಶಾ ಮಾತನಾಡಿರುವ ಹಗುರ ಮಾತು ಅವರಿಗೆ ಶೋಭೆ ತರುವುದಿಲ್ಲ. ಇಂತಹ ಹೇಳಿಕೆಯು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ದೇಶದ ಬಹು ದೊಡ್ಡ ಸ್ಥಾನದಲ್ಲಿರುವ ಕೇಂದ್ರ ಗೃಹ ಸಚಿವರಾಗಿರುವ ಇವರು ತಮ್ಮ ಸ್ಥಾನ ಮರೆತು ಮಾತನಾಡಿದ್ದಾರೆ. ಕೂಡಲೇ ಪ್ರಧಾನಿ ನರೇಂದ್ರ ಮೋದಿಯವರು ಸಂಪುಟದಿಂದ ಅವರನ್ನು ಕೈಬಿಡಬೇಕಿತ್ತು,
ಕನ್ನಡಪ್ರಭ ವಾರ್ತೆ ರಾಮನಗರ
ಸಂವಿಧಾನ ಶಿಲ್ಪಿ ಡಾ.ಬಿ. ಆರ್. ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಲೇ ದೇಶದ ಜನರ ಕ್ಷಮೆ ಕೋರಬೇಕು ಹಾಗೂ ಗೃಹಮಂತ್ರಿ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ನಗರದ ಐಜೂರು ವೃತ್ತದಲ್ಲಿ ಭಾರತ್ ಭೀಮ್ ಸೇನೆ , ಕರ್ನಾಟಕ ಭೀಮ್ ಸೇನೆ ಮತ್ತು ದಲಿತ ಸಂಘಟನೆಗಳ ನೇತೃತ್ವದಲ್ಲಿ ಕಾರ್ಯಕರ್ತರು ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಹಿಡಿದು ಕೇಂದ್ರ ಗೃಹ ಸಚಿವ ಅಮಿತ್ ಷಾ ವಿರುದ್ಧ ಘೋಷಣೆ ಕೂಗುತ್ತಾ ತಮಟೆ ಭಾರಿಸುತ್ತಾ ಆಕ್ರೋಶ ಹೊರಹಾಕಿದರು.
ಡಾ. ಬಿ.ಆರ್. ಅಂಬೇಡ್ಕರ್ ಈ ದೇಶದ ಬಹುದೊಡ್ಡ ಆಸ್ತಿ. ಅಂತಹ ಮಹಾನ್ ವ್ಯಕ್ತಿಯ ಬಗ್ಗೆ ಅಮಿತ್ ಶಾ ನಾಲಿಗೆ ಮೇಲೆ ಹಿಡಿತವಿಲ್ಲದೆ ಹಗುರವಾಗಿ ಮಾತನಾಡಿದ್ದಾರೆ. ಕೇಂದ್ರ ಗೃಹಮಂತ್ರಿಯಾಗಿ ಒಬ್ಬ ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಯ ಬಾಯಿಂದ ಈ ಮಾತು ಬಂದಿರುವುದು ಸರಿಯಲ್ಲ ಎಂದು ದೂರಿದರು.ಅಮಿತ್ ಶಾ ಮಾತನಾಡಿರುವ ಹಗುರ ಮಾತು ಅವರಿಗೆ ಶೋಭೆ ತರುವುದಿಲ್ಲ. ಇಂತಹ ಹೇಳಿಕೆಯು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ದೇಶದ ಬಹು ದೊಡ್ಡ ಸ್ಥಾನದಲ್ಲಿರುವ ಕೇಂದ್ರ ಗೃಹ ಸಚಿವರಾಗಿರುವ ಇವರು ತಮ್ಮ ಸ್ಥಾನ ಮರೆತು ಮಾತನಾಡಿದ್ದಾರೆ. ಕೂಡಲೇ ಪ್ರಧಾನಿ ನರೇಂದ್ರ ಮೋದಿಯವರು ಸಂಪುಟದಿಂದ ಅವರನ್ನು ಕೈಬಿಡಬೇಕಿತ್ತು, ಆದರೂ ಕೈ ಬಿಟ್ಟಿಲ್ಲ, ತಕ್ಷಣ ಅವರಿಂದ ರಾಜೀನಾಮೆ ಪಡೆಯಬೇಕು. ಅಮಿತ್ ಶಾ ಬಹಿರಂಗವಾಗಿ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಭಾರತ್ ಭೀಮ್ ಸೇನೆ ರಾಜ್ಯಾಧ್ಯಕ್ಷ ದಿನೇಶ್, ಕರ್ನಾಟಕ ಭೀಮ್ ಸೇನೆ ಜಿಲ್ಲಾಧ್ಯಕ್ಷ ಕಲ್ಲುಗೋಪಹಳ್ಳಿ ಲೋಕೇಶ್, ದಲಿತ ಸಂಘಟನೆ ಅಂಬೇಡ್ಕರ್ ಭೀಮ್ ವಾದ ಅಧ್ಯಕ್ಷ ಪುನೀತ್, ಸಮತಾ ಸೈನಿಕ ದಳ ನಗರ ಅಧ್ಯಕ್ಷ ಸುರೇಶ್, ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಸಾಗರ್, ಅಲ್ಪಸಂಖ್ಯಾತ ರಾಜ್ಯಾಧ್ಯಕ್ಷ ರಿಜ್ವಾನ್, ಮುಖಂಡರಾದ ರವಿಮೌರ್ಯ, ಅಪ್ಪಗೆರೆ ಶ್ರೀನಿವಾಸ್, ಸುನಿಲ್, ಗುಣಶೇಖರ್, ಹೇಮಂತ್, ಗಂಗಾಧರ್, ರಾಮು, ಕಿರಣ್, ಕುಮಾರ್, ಇಮ್ರಾನ್, ಸಚಿನ್, ಸುರೇಶ್, ದಿನೇಶ್ ಮತ್ತಿತರರು ಭಾಗವಹಿಸಿದ್ದರು.