ಕನ್ನಡಪ್ರಭ ವಾರ್ತೆ ಮಂಡ್ಯ
ತಮಿಳುನಾಡಿಗೆ ನಿತ್ಯ 12 ಸಾವಿರ ಕ್ಯುಸೆಕ್‌ನಂತೆ 15 ದಿನಗಳವರೆಗೆ ನೀರು ಹರಿಸುವಂತೆ ಸಿಡಬ್ಲ್ಯೂಆರ್‌ಸಿ ಆದೇಶ ವಿರೋಧಿಸಿ ಹಾಗೂ ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡದಂತೆ ಒತ್ತಾಯಿಸಿ ರೈತರು ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದರು.ನಗರದ ಜಯಚಾಮರಾಜ ಒಡೆಯರ್ ವೃತ್ತ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸೇರಿದ ರೈತರು ಹಾಗೂ ವಿವಿಧ ಸಂಘಟನೆಗಳ ಕಾರ್‍ಯಕರ್ತರು, ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸಂಚಾರಕ್ಕೆ ತಡೆಯೊಡ್ಡಿದರು. ಕಾವೇರಿ ನೀರು ನಿರ್ವಹಣಾ ಸಮಿತಿ ಮತ್ತು ಪ್ರಾಧಿಕಾರ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶಕ್ಕೆ ಮನ್ನಣೆ ನೀಡಿ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಒತ್ತಾಯಿಸಿ ರೈತ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು, ಕಾರ್‍ಯಕರ್ತರು ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಧರಣಿ ಸತ್ಯಾಗ್ರಹ ನಡೆಸಿದರು.ಪ್ರೊ.ಬಿ.ಶಿವಲಿಂಗಯ್ಯ ಮಾತನಾಡಿ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕುಂಟಿತವಾಗಿದೆ. ವಾಡಿಕೆ ಮಳೆಯೂ ಬಾರದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ವಾಸ್ತವ ಚಿತ್ರಣ ಅರಿಯದೆ ಕಾವೇರಿ ನೀರು ನಿರ್ವಹಣಾ ಸಮಿತಿ ಮತ್ತು ಪ್ರಾಧಿಕಾರ ಅವೈಜ್ಞಾನಿಕವಾಗಿ ನೀರು ಬಿಡುವಂತೆ ಆದೇಶ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ಅಚ್ಚುಕಟ್ಟು ಪ್ರದೇಶದ ನಾಲ್ಕೂ ಜಲಾಶಯಗಳಲ್ಲಿ ನೀರಿನ ಸಂಗ್ರಹಣೆ ಕಡಿಮೆ ಇದೆ. ಇರುವ ನೀರು ಈ ಭಾಗದ ಜನ- ಜಾನುವಾರುಗಳ ಕುಡಿಯುವುದು ಮತ್ತು ಬೆಳೆದು ನಿಂತ ಬೆಳೆ ರಕ್ಷಣೆಗಾಗಿ ಅಗತ್ಯವಿದೆ. ಹೀಗಿರುವಾಗ ತಮಿಳುನಾಡಿಗೆ ನಿತ್ಯ 12 ಸಾವಿರ ಕ್ಯುಸೆಕ್ ನೀರು ಹರಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಮಳೆ ಬಾರದೆ ಸಂಕಷ್ಟ ಪರಿಸ್ಥಿತಿಯನ್ನು ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ ಸರಿಯಾದ ರೀತಿಯಲ್ಲಿ ನೀರು ಹಂಚಿಕೆ ಮಾಡಬೇಕು. ಸಂಕಷ್ಟ ಸೂತ್ರ ಅನುಷ್ಠಾನಗೊಳಿಸಬೇಕು. ಅದು ಬಿಟ್ಟು ಸಮಿತಿ ಮತ್ತು ಪ್ರಾಧಿಕಾರ ಕರ್ನಾಟಕದ ವಾದವನ್ನು ಆಲಿಸದೆ ಕೇವಲ ತಮಿಳುನಾಡಿಗೆ ನೀರು ಬಿಡಿಸುವುದಷ್ಟೇ ತಮ್ಮ ಜವಾಬ್ದಾರಿ ಎಂದಂತೆ ಕಾಣುತ್ತಿದೆ. ಹೀಗಾಗಿ ನೀರು ಇರಲಿ, ಬಿಡಲಿ, ಎಷ್ಟು ಪ್ರಮಾಣ ಇದೆ. ಇರುವ ನೀರು ರೈತರ ಹಾಲಿ ಬೆಳೆಗಳು ಮತ್ತು ಕುಡಿಯುವ ನೀರಿನ ಪೂರೈಕೆಗೆ ಆಗುತ್ತದೆಯೇ ಎಂಬ ವಾಸ್ತವ ಸ್ಥಿತಿಗತಿಗಳನ್ನು ಅರಿಯದೆ ತಮಿಳುನಾಡಿನ ಏಜೆಂಟರಂತೆ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಬಿ.ಶಿವಕುಮಾರ್, ಪ್ರಧಾನ ಕಾರ್‍ಯದರ್ಶಿ ಸುನಂದಾ ಜಯರಾಂ, ಪದಾಧಿಕಾರಿಗಳಾದ ಕನ್ನಡ ಸೇನೆ ಮಂಜುನಾಥ್, ಇಂಡುವಾಳು ಚಂದ್ರಶೇಖರ್, ಎಸ್. ನಾರಾಯಣ್, ಸಿ.ಟಿ. ಮಂಜುನಾಥ್, ಸಿದ್ದೇಗೌಡ ಸೇರಿದಂತೆ ಹಲವರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.ಅರೆಬೆತ್ತಲೆ ಪ್ರತಿಭಟನೆ:
ತಮಿಳುನಾಡಿಗೆ ನೀರು ಹರಿಸದಂತೆ ಒತ್ತಾಯಿಸಿ ರೈತ ಸಂಘ, ಕನ್ನಡ ಸಂಘಟನೆಗಳ ಕಾರ್‍ಯಕರ್ತರು ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಅರೆಬೆತ್ತಲೆ ಪ್ರತಿಭಟನೆ, ರಸ್ತೆ ತಡೆ ನಡೆಸಿದರು.ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್‍ಯಕರ್ತರು, ತಮಿಳುನಾಡು ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ, ಪ್ರಾಧಿಕಾರದ ವಿರುದ್ದ ಘೋಷಣೆ ಕೂಗಿದರು. ಪ್ರಾಧಿಕಾರಗಳಿಗೆ ವಾಸ್ತವ ಸ್ಥಿತಿ ತಿಳಿಸುವಲ್ಲಿ ರಾಜ್ಯದ ಅಧಿಕಾರಿಗಳು ವಿಫಲರಾಗಿದ್ದಾರೆ. ರೈತರ ತಲೆ ಮೇಲೆ ಚಪ್ಪಡಿ ಎಳೆಯುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಪ್ರಾಧಿಕಾರದ ಆದೇಶವನ್ನು ಯಾವುದೇ ಕಾರಣಕ್ಕೂ ಪಾಲನೆ ಮಾಡಬಾರದು. ಒಂದು ವೇಳೆ ತಮಿಳುನಾಡಿಗೆ ನೀರು ಹರಿಸಿದ್ದೇ ಆದಲ್ಲಿ ರಾಜ್ಯಾದ್ಯಂತ ಉಗ್ರ ಚಳವಳಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಅಣ್ಣಯ್ಯ, ಮುಖಂಡರಾದ ವೇಣುಗೋಪಾಲ್, ಲತಾ ಶಂಕರ್, ಜೈಕುಮಾರ್, ಜಿ.ಟಿ. ರವೀಂದ್ರಕುಮಾರ್ ಹೆಮ್ಮಿಗೆ ಚಂದ್ರಶೇಖರ್, ನಾಗಣ್ಣ, ಎಚ್.ಡಿ. ಜಯರಾಂ, ಸೇರಿದಂತೆ ಹಲವರು ಭಾಗವಹಿಸಿದ್ದರು.
ಅಪ್ಪಿಕೋ ಚಳವಳಿ:ಪ್ರಾಧಿಕಾರದ ಆದೇಶ ಖಂಡಿಸಿ ಬಿಜೆಪಿ ಕಾರ್‍ಯರ್ತರು ನಗರದ ಕಾವೇರಿ ಭವನದ ಬಳಿ ಇರುವ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ಅಪ್ಪಿಕೋ ಚಳವಳಿ ನಡೆಸಿದರು.
ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡದಂತೆ ರಾಜ್ಯದ ಮುಖ್ಯಮಂತ್ರಿಗೆ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿ ಕಾಳಿಕಾಂಬ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ತಂದ ನಿಂಬೆ ಹಣ್ಣಿನಿಂದ ಡಿಕೆಶಿ ಭಾವಚಿತ್ರಕ್ಕೆ ಇಳಿ ತೆಗೆದು, ಆದೇಶ ಪಾಲನೆ ಮಾಡದಂತೆ ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಬಿಜೆಪಿ ಕಾರ್‍ಯಕರ್ತರಾದ ಶಿವಕುಮಾರ್ ಆರಾಧ್ಯ, ಹೊಸಹಳ್ಳಿ ಶಿವು, ಪ್ರಸನ್ನ, ಯೋಗೇಶ್, ಮಾದರಾಜೇ ಅರಸ್, ಪ್ರಸನ್ನಕುಮಾರ್, ಕರವೇ ಅಶೋಕ್ ಇತರರು ಇದ್ದರು.