ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತ ಹಾಗೂ ಅಹಿಂಸಾತ್ಮಕ ಹೋರಾಟಗಳಿಗೆ ಸರ್ಕಾರ ಸ್ಪಂದಿಸುವುದು ಅದರ ಕರ್ತವ್ಯವಾಗಿದೆ. ಗಾಂಧಿವಾದದ ಮಾರ್ಗದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹವನ್ನು ಕಡೆಗಣಿಸುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಮಾರಕ ಬೆಳವಣಿಗೆಯಾಗಿದೆ. ಸೋನಂ ವಾಂಗ್ಚುಕ್ ಅವರ ಆರೋಗ್ಯ ಗಂಭೀರ ಹಂತ ತಲುಪಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಅವರ ಜೀವ ರಕ್ಷಣೆಗಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಅವರು ಮುಂದಿಟ್ಟಿರುವ ನ್ಯಾಯಯುತ ಬೇಡಿಕೆಗಳ ಬಗ್ಗೆ ಸೂಕ್ತ ನಿರ್ಧಾರ ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಖ್ಯಾತ ಪರಿಸರವಾದಿ, ಗಾಂಧಿವಾದಿ ಹಾಗೂ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್ ಅವರ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿ ಗುರುವಾರ ನಗರದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಜನಪರ ಹಾಗೂ ಪರಿಸರ ಸಂಘಟನೆಗಳಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯನ್ನು ಉದ್ದೇಶಿಸಿ ಹಸಿರು ಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಆರ್. ಪಿ. ವೆಂಕಟೇಶ್ ಮೂರ್ತಿ ಮಾತನಾಡಿ, ದೆಹಲಿಯ ಜಂತರ್ ಮಂತರ್‌ನಲ್ಲಿ ಸೋನಂ ವಾಂಗ್ಚುಕ್ ಅವರು ನ್ಯಾಯಯುತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹ ದೇಶಾದ್ಯಂತ ಗಮನ ಸೆಳೆದಿದೆ. ಆದರೆ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದರೂ ಕೇಂದ್ರ ಸರ್ಕಾರ ಯಾವುದೇ ರೀತಿಯ ಸ್ಪಂದನೆ ತೋರದಿರುವುದು ಅತ್ಯಂತ ವಿಷಾದನೀಯ ಮತ್ತು ಖಂಡನೀಯ ಎಂದರು. ನೀಟ್ ಪರೀಕ್ಷೆಯಲ್ಲಿನ ಅವ್ಯವಸ್ಥೆ ಮತ್ತು ಅಕ್ರಮಗಳಿಂದ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅನಿಶ್ಚಿತತೆಯಲ್ಲಿದೆ. ಪರೀಕ್ಷಾ ವ್ಯವಸ್ಥೆಯ ಮೇಲಿನ ವಿಶ್ವಾಸ ಕುಸಿದಿದ್ದು, ಅನೇಕ ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ಕೆಲವರು ಆತ್ಮಹತ್ಯೆಗೂ ಶರಣಾಗಿರುವುದು ದೇಶಕ್ಕೆ ದೊಡ್ಡ ದುರಂತವಾಗಿದೆ. ತಮ್ಮ ಮಕ್ಕಳ ಉನ್ನತ ಶಿಕ್ಷಣದ ಕನಸು ಕಂಡಿದ್ದ ಪೋಷಕರು ಕೂಡ ತೀವ್ರ ನೋವು ಅನುಭವಿಸುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ನೀಟ್ ಪರೀಕ್ಷೆಯಲ್ಲಿನ ಅವ್ಯವಸ್ಥೆಗೆ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಸತ್ಯಾಗ್ರಹಕ್ಕೆ ಸೋನಂ ವಾಂಗ್ಚುಕ್ ಬೆಂಬಲ ಸೂಚಿಸಿರುವುದು ನ್ಯಾಯಸಮ್ಮತವಾಗಿದೆ. ಆದರೆ ಕೇಂದ್ರ ಸರ್ಕಾರ ಈ ಹೋರಾಟವನ್ನು ಸಂಪೂರ್ಣ ನಿರ್ಲಕ್ಷಿಸಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಟೀಕಿಸಿದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತ ಹಾಗೂ ಅಹಿಂಸಾತ್ಮಕ ಹೋರಾಟಗಳಿಗೆ ಸರ್ಕಾರ ಸ್ಪಂದಿಸುವುದು ಅದರ ಕರ್ತವ್ಯವಾಗಿದೆ. ಗಾಂಧಿವಾದದ ಮಾರ್ಗದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹವನ್ನು ಕಡೆಗಣಿಸುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಮಾರಕ ಬೆಳವಣಿಗೆಯಾಗಿದೆ. ಸೋನಂ ವಾಂಗ್ಚುಕ್ ಅವರ ಆರೋಗ್ಯ ಗಂಭೀರ ಹಂತ ತಲುಪಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಅವರ ಜೀವ ರಕ್ಷಣೆಗಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಅವರು ಮುಂದಿಟ್ಟಿರುವ ನ್ಯಾಯಯುತ ಬೇಡಿಕೆಗಳ ಬಗ್ಗೆ ಸೂಕ್ತ ನಿರ್ಧಾರ ಪ್ರಕಟಿಸಬೇಕು ಎಂದು ಆಗ್ರಹಿಸಿದರು. ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವವರೊಂದಿಗೆ ದೇಶದ ಸಮಾನಮನಸ್ಕ ನಾಗರಿಕರು ನಿಲ್ಲಬೇಕಾದ ಅಗತ್ಯವಿದೆ. ಪರಿಸರ ಸಂರಕ್ಷಣೆ, ಸಾಮಾಜಿಕ ನ್ಯಾಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಪಾರದರ್ಶಕತೆಗಾಗಿ ಧ್ವನಿ ಎತ್ತುತ್ತಿರುವ ಸೋನಂ ವಾಂಗ್ಚುಕ್ ಅವರ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಬೇಕಿದೆ ಎಂದು ಅವರು ಹೇಳಿದರು.ಪ್ರತಿಭಟನೆಯಲ್ಲಿ ಜಿಲ್ಲೆಯ ಜನಪರ, ಪರಿಸರ ಸಂಘಟನೆಗಳ ಮುಖಂಡರಾದ ಎಸ್.ಎಸ್. ಪಾಷಾ, ಧರ್ಮೇಶ್, ಕಿಶೋರ್ ಕುಮಾರ್, ಚಲಂ ಹಾಡ್ಲಹಳ್ಳಿ, ಪುರುಷೋತ್ತಮ್, ಅಪ್ಪಾಜಿಗೌಡ, ಶಿವಶಂಕರಪ್ಪ, ಪ್ರಸಾದ್ ರಕ್ಷಿದಿ, ಶ್ರೀನಿವಾಸ್, ಬಿ.ಎಸ್. ದೇಸಾಯಿ, ಚಿನ್ನಸ್ವಾಮಿ, ಮಾದಿಗ ದಂಡೋರ ಟಿ. ಆರ್. ವಿಜಯ್ ಕುಮಾರ್, ಕೃಷ್ಣದಾಸ್, ಎಂ.ಸಿ. ಡೊಂಗ್ರೆ, ರೂಪ ಹಾಸನ, ಶಿವಣ್ಣ, ಸಮೀರ್,ಎಂ.ಜಿ. ಪೃಥ್ವಿ, ಅರವಿಂದ್, ಅರ್ಹನಿಶಿ, ಕೆ.ಟಿ. ಜಯಶ್ರೀ ಸೇರಿದಂತೆ ಹಸಿರುಭೂಮಿ ಪ್ರತಿಷ್ಠಾನದ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.