ಆದಿಚುಂಚನಗಿರಿ ಮಠದಲ್ಲಿ ಗುರುಪೂರ್ಣಿಮೆ ಅಂಗವಾಗಿ ವಿವಿಧ ಪೂಜೆ

| Published : Jul 22 2024, 01:18 AM IST

ಸಾರಾಂಶ

ಗುರುಪೂರ್ಣಿಮೆ ಪ್ರಯುಕ್ತ ಶ್ರೀ ಮಠದಲ್ಲಿ ಭಾನುವಾರ ಬೆಳಗ್ಗೆಯಿಂದಲ್ಲೇ ವಿವಿಧ ಪೂಜಾ ಮಹೋತ್ಸವಗಳು ನಡೆದವು, ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬೆಳ್ಳಿ ರಥದ ಮೆರವಣಿಗೆ ಮಾಡಲಾಯಿತು. ಮಠದ ಸಾವಿರಾರು ಭಕ್ತರು ಗುರುಪೂರ್ಣಿಮೆಯಂದು ಶ್ರೀ ಗುರುಗಳನ್ನು ಸ್ಮರಿಸಿ, ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ವಿವಿಧ ಪೂಜಾ ಕಾರ್ಯಗಳು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರೆವೇರಿತು.

ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳ ಸಾನಿಧ್ಯದಲ್ಲಿ ಕ್ಷೇತ್ರದ ಅಧಿದೇವತೆ ಶ್ರೀ ಕಾಲಭೈರವೇಶ್ವರಸ್ವಾಮಿ, ಶ್ರೀ ಗಂಗಾಧರೇಶ್ವರಸ್ವಾಮಿ ಸೇರಿದಂತೆ ಎಲ್ಲ ದೇವರುಗಳಿಗೆ ಅಭಿಷೇಕ, ಗಂಗಾಸ್ನಾನ, ಪುಷ್ಪಾರ್ಚನೆ ಹಾಗೂ ವಿಶೇಷ ಪೂಜೆಗಳು ಜರುಗಿದವು.

ಭೈರವೈಕ್ಯ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಮಹಾಸಮಾಧಿ ಬಳಿ ಹೋಮ, ಅಭಿಷೇಕ, ಪೂಜಾ ಕೈಂಕರ್ಯಗಳು ನೆರವೇರಿದವು. ಶ್ರೀಮಠದ 71 ಭೈರವೈಕ್ಯ ಶ್ರೀಗಳನ್ನು ಸ್ಮರಿಸಿ ಪೂಜಿಸಿಲಾಯಿತು.

ಗುರುಪೂರ್ಣಿಮೆ ಪ್ರಯುಕ್ತ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ಮಹಾಸಮಾಧಿಯನ್ನು ಪುಷ್ಪ ಹಾಗೂ ತಳಿರು ತೋರಣಗಳಿಂದ ಶೃಂಗಾರ ಮಾಡಿ, ಶ್ರೀಗಳ ಪ್ರತಿಮೆಗೆ ಅಭಿಷೇಕ, ಪುಷ್ಪಾರ್ಚನೆ ಸೇರಿದಂತೆ ಹಲವು ಬಗೆಯ ಪೂಜೆಗಳನ್ನು ಡಾ.ನಿರ್ಮಲಾನಂದನಾಥ ಶ್ರೀಗಳು ನೆರವೇರಿಸಿದರು.

ಗುರುಪೂರ್ಣಿಮೆ ಪ್ರಯುಕ್ತ ಶ್ರೀ ಮಠದಲ್ಲಿ ಭಾನುವಾರ ಬೆಳಗ್ಗೆಯಿಂದಲ್ಲೇ ವಿವಿಧ ಪೂಜಾ ಮಹೋತ್ಸವಗಳು ನಡೆದವು, ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬೆಳ್ಳಿ ರಥದ ಮೆರವಣಿಗೆ ಮಾಡಲಾಯಿತು. ಮಠದ ಸಾವಿರಾರು ಭಕ್ತರು ಗುರುಪೂರ್ಣಿಮೆಯಂದು ಶ್ರೀ ಗುರುಗಳನ್ನು ಸ್ಮರಿಸಿ, ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ಮಠದ ಸಾಧು-ಸಂತರು ಡಾ.ನಿರ್ಮಲಾನಂದನಾಥ ಶ್ರೀಗಳಿಗೆ ನಮಸ್ಕರಿಸಿ ಗುರುಗಳ ಆಶೀರ್ವಾದ ಪಡೆದುಕೊಂಡರು. ನೆರೆದಿದ್ದ ಸಹಸ್ರಾರು ಭಕ್ತರೂ ಕೂಡ ಶ್ರೀಗಳ ಆಶೀರ್ವಾದ ಪಡೆದರು. ಭಕ್ತರಿಗೆ ವಿಶೇಷ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ ಸೇರಿದಂತೆ ವಿವಿಧ ಶಾಖಾ ಮಠಗಳ ಶ್ರೀಗಳು ಸಾಧು-ಸಂತರು ಇದ್ದರು.