ಸಾರಾಂಶ
ಭಟ್ಕಳ ಪಟ್ಟಣದ ಬಿಲಾಲ್ ಸಭಾಂಗಣದಲ್ಲಿ ಸೋಮವಾರ ಭಟ್ಕಳ ಪುರಸಭೆ ಮತ್ತು ಜಾಲಿ ಪಪಂ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಉದ್ಘಾಟಿಸಿದರು.
ಭಟ್ಕಳ: ಪಟ್ಟಣದ ಬಿಲಾಲ್ ಸಭಾಂಗಣದಲ್ಲಿ ಸೋಮವಾರ ಭಟ್ಕಳ ಪುರಸಭೆ ಮತ್ತು ಜಾಲಿ ಪಪಂ ವತಿಯಿಂದ ಏರ್ಪಡಿಸಲಾದ ಪೌರಕಾರ್ಮಿಕರ ದಿನಾಚರಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಉದ್ಘಾಟಿಸಿದರು.
ಆನಂತರ ಮಾತನಾಡಿದ ಅವರು, ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯವನ್ನು ಪ್ರಾಮಾಣಿಕವಾಗಿ ನೆರವೇರಿಸುತ್ತಿದ್ದಾರೆ. ಪ್ರತಿನಿತ್ಯ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿ ಜನರ ಆರೋಗ್ಯ ಕಾಪಾಡುತ್ತಿರುವ ಪೌರಕಾರ್ಮಿಕರೂ ನಮ್ಮ ದೇಶದ ಯೋಧರಾಗಿದ್ದಾರೆ. ರಾಜ್ಯ ಸರ್ಕಾರ ಪೌರ ಕಾರ್ಮಿಕರನ್ನು ಉತ್ತೇಜಸುವ ನಿಟ್ಟಿನಲ್ಲಿ ಪೌರ ಕಾರ್ಮಿಕರಿಗೂ ಹಾಗೂ ಅವರ ಮಕ್ಕಳಿಗೆ ವಿವಿಧ ಯೋಜನೆಗಳನ್ನು ರೂಪಿಸಿದೆ. ಪೌರಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪೌರ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಸಹಕರಿಸಲು ತಾನು ಸದಾ ಸಿದ್ಧವಾಗಿದ್ದು, ಯಾವುದೆ ಉನ್ನತ ಶಿಕ್ಷಣ ಪಡೆಯುವುದಾದರೂ ಸಹಾಯ ಮಾಡುವ ಭರವಸೆ ನೀಡಿದರು.ಭಟ್ಕಳ ಪುರಸಭೆ ಮತ್ತು ಜಾಲಿ ಪಪಂ ೭೦ ಪೌರಕಾರ್ಮಿಕರಿಗೆ ಸಚಿವರು ಸರ್ಕಾರದ ವತಿಯಿಂದ ನೀಡಲಾಗುವ ವಿಶೇಷ ಭತ್ಯೆಯ ಚೆಕ್ ವಿತರಿಸಿದರು. ಪೌರಕಾರ್ಮಿಕರನ್ನು ಸಚಿವರು ಸನ್ಮಾನಿಸಿದರು. ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ಪೌರಕಾರ್ಮಿಕರಿಗೆ ವಿವಿಧ ಸ್ಪರ್ಧೆ ಸೇರಿದಂತೆ ಸಾಂಸ್ಕೃತಿಕ ಮತ್ತು ಮನರಂಜನೆ ಕಾರ್ಯಮಗಳು ನಡೆಯಿತು. ಜಾಲಿ ಪಪಂ ಅಧ್ಯಕ್ಷೆ ಖಾಜೀಯಾ ಆಪ್ಸಾ, ಉಪಾಧ್ಯಕ್ಷ ಸಯೈದ್ ಇಮ್ರಾನ ಲಂಕಾ, ಭಟ್ಕಳ ಪುರಸಭೆ ಉಪಾಧ್ಯಕ್ಷ ಅಲ್ತಾಫ್ ಖರೂರಿ ಮಾತನಾಡಿದರು.
ಭಟ್ಕಳ ಪುರಸಭೆ ಮತ್ತು ಜಾಲಿ ಪಪಂ ಸದಸ್ಯರಿದ್ದರು. ಭಟ್ಕಳ ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಸ್ವಾಗತಿಸಿದರು. ಪರಿಸರ ಅಭಿಯಂತರ ವೆಂಕಟೇಶ ನಾವುಡ ಪ್ರಾಸ್ತಾವಿಕ ಮಾತನಾಡಿದರು. ಜಾಲಿ ಪಪಂ ಮುಖ್ಯಾಧಿಕಾರಿ ಮಂಜಪ್ಪ ಎನ್. ವಂದಿಸಿದರು. ಶಿಕ್ಷಕ ಸುರೇಶ ಮುರ್ಡೇಶ್ವರ ಕಾರ್ಯಕ್ರಮ ನಿರೂಪಿಸಿದರು.