Various schemes help in cancer prevention: Dr. Girish
ಸದುಪಯೋಗಕ್ಕೆ ಸಲಹೆ
---ಕ್ಯಾನ್ಸರ್ ಜಾಗೃತಿ ಶಿಬಿರ ಹಾಗೂ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ಉದ್ಘಾಟನೆ
--ಕನ್ನಡಪ್ರಭ ವಾರ್ತೆ ಕೆಂಭಾವಿಮಾನವನ ಜೀವಕ್ಕೆ ಆಪತ್ತು ತರುವ ವಿವಿಧ ಬಗೆಯ ಮಾರಕ ಕ್ಯಾನ್ಸರ್ ರೋಗವನ್ನು ತಡೆಗಟ್ಟಲು ಸರ್ಕಾರ ಹಲವು ರೀತಿಯ ಯೋಜನೆಗಳನ್ನು ರೂಪಿಸಿದ್ದು, ಜನತೆ ಇದರ ಸದುಪಯೋಗ ಪಡೆಯುವಂತೆ ವೈದ್ಯಾಧಿಕಾರಿ ಡಾ. ಗಿರೀಶ ಕುಲಕರ್ಣಿ ಮನವಿ ಮಾಡಿದರು.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಹಾಗೂ ಓರಾಕಲ್ ಸಲ್ಯೂಷನ್ ಸಂಯುಕ್ತಾಶ್ರಯದಲ್ಲಿ ನಡೆದ ಕ್ಯಾನ್ಸರ್ ಜಾಗೃತಿ ಶಿಬಿರ ಹಾಗೂ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಹಲವು ಬಗೆಯ ಕ್ಯಾನ್ಸರ್ ರೋಗವು ನಮ್ಮ ಜೀವಕ್ಕೆ ಕುತ್ತು ತರುತ್ತಿವೆ ಅದರಲ್ಲೂ ಗಂಡು ಮಕ್ಕಳಲ್ಲಿ ಸಿಗರೇಟ್ ಸೇವನೆ, ಮದ್ಯಪಾನ, ಗುಟ್ಕಾ ಸೇವನೆಯಿಂದ ಮಾರಕ ರೋಗಗಳು ಹರಡುತ್ತಿವೆ. ಇವುಗಳನ್ನು ತಡೆಗಟ್ಟುವುದು ಮತ್ತು ಅವುಗಳ ಉಪಶಮನದ ಬಗ್ಗೆ ಈ ಶಿಬಿರ ಹಮ್ಮಿಕೊಂಡಿದ್ದು ತಜ್ಞ ವೈದ್ಯರು ರೋಗಿಗಳ ಜೊತೆ ಆಪ್ತ ಸಮಾಲೋಚನೆ ನಡೆಸಿ ರೋಗದ ಲಕ್ಷಣ ಕಂಡು ಬರುವ ವ್ಯಕ್ತಿಗಳಿಗೆ ಉಚಿತ ಔಷಧಿ ವಿತರಿಸಿ ಅವರಿಗೆ ಧೈರ್ಯ ತುಂಬುವ ಕೆಲಸ ಅನೇಕ ವೈದ್ಯರು ಮಾಡಲಿದ್ದು ಜನತೆ ಇದರ ಲಾಭ ಪಡೆಯಬೇಕೆಂದು ಕರೆ ನೀಡಿದರು.ಇಂಡಿಯನ್ ಕ್ಯಾನ್ಸರ್ ಸೊಸೈಟಿ ವೈದ್ಯಾಧಿಕಾರಿ ಡಾ. ಸುಷ್ಮಿತಾ ಮಾತನಾಡಿ, ಪುರುಷರಿಗೆ ಬಾಯಿ, ಹೊಟ್ಟೆ, ಕುತ್ತಿಗೆ ಸೇರಿದಂತೆ ಹಲವು ಭಾಗದಲ್ಲಿ ಕ್ಯಾನ್ಸ್ರ್ ರೋಗಗಳು ಬಂದರೆ ವಿಶೇಷವಾಗಿ ಮಹಿಳೆಯರಿಗೆ ಗರ್ಭಕಂಠದ, ಬಾಯಿ-ಗಂಟಲು, ಸ್ತನ ಕ್ಯಾನ್ಸರ್ ಮಾರಕವಾಗಲಿದೆ. ಗರ್ಭಕೋಶದ ರೋಗವನ್ನು ಆರಂಭಿಕ ಹಂತದಲ್ಲೆ ಪರೀಕ್ಷಿಸಿ ಔಷಧ ಉಪಚಾರ ಮಾಡುವುದರಿಂದ ರೋಗ ಗುಣಪಡಿಸಬಹುದು ಎಂದು ಹೇಳಿದರು.
ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರ ಜಿಲ್ಲೆಯಲ್ಲಿಯೆ ಹೆಸರುವಾಸಿಯಾಗಿದ್ದು ಇಲ್ಲಿ ನಿತ್ಯ ನೂರಾರು ರೋಗಿಗಳ ತಪಾಸಣೆ, ತಿಂಗಳಿಗೆ ದಾಖಲೆಮಟ್ಟದ ಹೆರಿಗೆಗಳು ಸೇರಿದಂತೆ ಅನೇಕ ರೀತಿಯ ತಪಾಸಣಾ ಶಿಬಿರಗಳು ನಡೆಯುತ್ತಿದ್ದು, ಜನತೆ ವೈದ್ಯರ ಜೊತೆ ಕೈಜೋಡಿಸಿ ಇದರ ಲಾಭ ಪಡೆಯುವಂತೆ ಹೇಳಿದರು. ಶಿಬಿರದಲ್ಲಿ 81 ರೋಗಿಗಳನ್ನು ಪರೀಕ್ಷಿಸಲಾಯಿತು.ಡಾ. ಅರ್ಪಿತಾ, ದೇವೇಂದ್ರ, ಕೀರ್ತಿ, ಸ್ನೇಹ, ನಾಗರಾಜ ವೈದ್ಯರ ತಂಡದಲ್ಲಿದ್ದರು.
-ಫೋಟೊ: 3ವೈಡಿಆರ್2
ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಇಂಡಿಯನ್ ಕ್ಯಾನ್ಸರ್ ಸೊಸೈಟಿ ಹಾಗೂ ಓರಾಕಲ್ ಸಲ್ಯೂಷನ್ ಸಂಯುಕ್ತಾಶ್ರಯದಲ್ಲಿ ನಡೆದ ಕ್ಯಾನ್ಸರ್ ಜಾಗೃತಿ ಶಿಬಿರ ಹಾಗೂ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ಉದ್ಘಾಟಿಸಲಾಯಿತು. ಡಾ. ಗಿರೀಶ ಕುಲಕರ್ಣಿ, ಡಾ ಸುಷ್ಮಿತಾ, ಡಾ. ಅರ್ಪಿತಾ, ನಾಗರಾಜ ಇದ್ದರು.