ಸಾವಿತ್ರಿಬಾಯಿ ಫುಲೆ ಸೇವೆ ಪ್ರಚುರ ಪಡಿಸಲು ವಿವಿಧ ಯೋಜನೆ

| Published : Jan 07 2025, 12:15 AM IST

ಸಾರಾಂಶ

ಕನಕಪುರ: ವಿವಿಧ ಭಾಗಗಳ ಶಾಲೆ, ಕಾಲೇಜು ಮಕ್ಕಳನ್ನು ಒಂದೆಡೆ ಸೇರಿಸಿ ಕ್ರೀಡಾಕೂಟ ಆಯೋಜಿಸಿ, ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಹಾಗೂ ಜ್ಯೋತಿ ಬಾಫುಲೆ ಕುರಿತು ಅರಿವು ಮೂಡಿಸುತ್ತಿರುವ ಧಮ್ಮದೀವಿಗೆ ಟ್ರಸ್ಟ್‌ ಉದ್ದೇಶ ತುಂಬಾ ಮಹತ್ವವಾದುದು ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಡಿಎಸ್ ಸತೀಶ್ ಹೇಳಿದರು.

ಕನಕಪುರ: ವಿವಿಧ ಭಾಗಗಳ ಶಾಲೆ, ಕಾಲೇಜು ಮಕ್ಕಳನ್ನು ಒಂದೆಡೆ ಸೇರಿಸಿ ಕ್ರೀಡಾಕೂಟ ಆಯೋಜಿಸಿ, ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಹಾಗೂ ಜ್ಯೋತಿ ಬಾಫುಲೆ ಕುರಿತು ಅರಿವು ಮೂಡಿಸುತ್ತಿರುವ ಧಮ್ಮದೀವಿಗೆ ಟ್ರಸ್ಟ್‌ ಉದ್ದೇಶ ತುಂಬಾ ಮಹತ್ವವಾದುದು ಎಂದು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಡಿಎಸ್ ಸತೀಶ್ ಹೇಳಿದರು.

ನಗರದ ದಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಜ.7ರಂದು ಸಾವಿತ್ರಿಬಾಯಿ ಪುಲೆ ಜಯಂತಿ ಪ್ರಯುಕ್ತ ಆಯೋಜಿಸಿದ್ದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾವಿತ್ರಿ ಬಾಪುಲೆ ಜಯಂತಿಯಂದು ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಕಳೆದ 20 ವರ್ಷಗಳಿಂದ ವಿಭಿನ್ನ ಹಾಗೂ ವಿಶೇಷವಾಗಿ ಪ್ರತಿ ವರ್ಷ ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯ. ಕಳೆದ ವರ್ಷ ರಾಜ್ಯಮಟ್ಟದ ಮ್ಯಾರಥಾನ್ ಆಯೋಜಿಸಿ ಫುಲೆ ದಂಪತಿ ಕುರಿತು ಮಕ್ಕಳಿಗೆ ಅರಿವು ಮೂಡಿಸಲಾಗಿತ್ತು. ಈ ಬಾರಿ ಕ್ರೀಡಾಕೂಟ ಆಯೋಜಿಸಿದೆ ಎಂದರು.

ಡಾ. ಡಿ.ಸಿ.ಬೊಮ್ಮಯ್ಯ ಮಾತನಾಡಿ, ಮಾತೆ ಸಾವಿತ್ರಿ ಬಾಫುಲೆ ಅವರು ಹುಟ್ಟಿದ್ದು ಮಹಾರಾಷ್ಟ್ರದಲ್ಲೇ ಆದರೂ, ಅವರ ಸೇವೆಯ ಪ್ರತಿಫಲ ದೇಶದ ಮೂಲೆಮೂಲೆಗೂ ಅನ್ವಯಿಸುತ್ತದೆ. ಶಿಕ್ಷಣ ವಂಚಿತರಿಗೆ ಅಕ್ಷರದ ಬೆಳಕು ತೋರಿಸಲು ಅವರು ಮಾಡಿದ ಹೋರಾಟವನ್ನುನ್ನು ಜಗತ್ತಿಗೆ ಸಾರಿ ಜಯಂತಿ ಆಚರಣೆ ಮಾಡುವುದು ಅಗತ್ಯ. ಆ ಮಾತೆಗೆ ಸರ್ಕಾರ ಭಾರತ ರತ್ನ ಕೊಟ್ಟು ಗೌರವಿಸಬೇಕು ಎಂದು ತಿಳಿಸಿದರು.

ಧಮ್ಮದೀವಿಗೆ ಚಾರಿಟ್ಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ ಮಾತನಾಡಿ, ಸ್ವತಂತ್ರ ಪೂರ್ವದಲ್ಲಿ ಅಲ್ಪಸಂಖ್ಯಾತರು, ಹೆಣ್ಣುಮಕ್ಕಳು ಅಕ್ಷರ ಕಲಿಯುವ ಅವಕಾಶಗಳನ್ನು ನಿಷೇಧಿಸಿದ್ದ ಕಾಲಘಟ್ ದಲ್ಲಿ ಮಾತೆ ಸಾವಿತ್ರಿ ಬಾ ಫುಲೆ ಮತ್ತು ಜ್ಯೋತಿಬಾ ಫುಲೆ ದಂಪತಿ ಮಹಾರಾಷ್ಟ್ರ ಹೂನಾದ ಬಿಡೆವಾಡ ಗ್ರಾಮದಲ್ಲಿ ಮೊದಲ ಹೆಣ್ಣು ಮಕ್ಕಳ ಶಾಲೆಯನ್ನು ತೆರೆದು ಶಿಕ್ಷಣ ವಂಚಿತರಿಗೆ ಅಕ್ಷರದ ಬೆಳಕು ತೋರಿದ ಪುಲೆ ದಂಪತಿಯನ್ನು ಗೌರವಿಸುವುದು ನಮ್ಮ ಜೀವಿತದ ಬಹಳ ದೊಡ್ಡ ಪುಣ್ಯದ ಕೆಲಸ. ಆದ್ದರಿಂದ ಕಳೆದ 20 ವರ್ಷಗಳಿಂದ ಈ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಕಾರ್ಯಕ್ರಮಕ್ಕೆ ಸಾಕಾರ ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

ಕಬಡ್ಡಿ ಪಂದ್ಯಾವಳಿಯಲ್ಲಿ ವಿವಿಧ ರಾಜ್ಯದ ಹಲವು ಭಾಗಗಳಿಂದ ಸುಮಾರು 30ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಮಹಿಳಾ ವಿಭಾಗದಲ್ಲಿ ಎಂ.ಎಸ್. ಗೋಲ್ಡ್ ತಂಡದ ವಿದ್ಯಾರ್ಥಿನಿಯರು ಮೊದಲ ಸ್ಥಾನ ಹಾಗೂ ಆರ್‌ಇಎಸ್ ಸಂಸ್ಥೆಯ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನ ಗಳಿಸಿದರು. ಬಾಲಕರ ವಿಭಾಗದಲ್ಲಿ ಆರ್‌ಇಎಸ್ ಸಂಸ್ಥೆಯ ವಿದ್ಯಾರ್ಥಿಗಳು ಮೊದಲ ಸ್ಥಾನ ಹಾಗೂ ಆನೇಕಲ್ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಗಳಿಸಿದರು.

ಮೊದಲ ಸ್ಥಾನ ಪಡೆದ ತಂಡಕ್ಕೆ 25,000 ನಗದು ಬಹುಮಾನ ಹಾಗೂ ದ್ವಿತೀಯ ಸ್ಥಾನ ಗಳಿಸಿದ ತಂಡಕ್ಕೆ 20,000 ನಗದು ಬಹುಮಾನ ನೀಡಿ ಗೌರವಿಸಲಾಯಿತು. ರಾಷ್ಟ್ರೀಯ ಕಬಡ್ಡಿ ಆಟಗಾರ ರಾಜಶೇಖರ್, ರಾಷ್ಟ್ರಮಟ್ಟದ ಕ್ರೀಡಾಪಟು ಶ್ರೀಕಾಂತ್ ಪ್ರೊ. ಕಬಡ್ಡಯ ಶ್ರೀಕಂಠ ಮೂರ್ತಿ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಶಿವಸ್ವಾಮಿ ಕ್ರೀಡಾಕೂಟದಲ್ಲಿ ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 01(1)

ಕನಕಪುರ ತಾಲೂಕು ಕ್ರೀಡಾಂಗಣದಲ್ಲಿ ಕಬಡ್ಡಿ ಪಂದ್ಯಾವಳಿಗೆ ಸಾವಿತ್ರಿ ಬಾಫುಲೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಚಾಲನೆ ನೀಡಲಾಯಿತು.