ಸಾರಾಂಶ
ಮಳವಳ್ಳಿ ತಾಲೂಕಿನ ಅಂತರವಳ್ಳಿಯಲ್ಲಿ 65 ಲಕ್ಷ ರು. ವೆಚ್ಚದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಶಂಕುಸ್ಥಾಪನೆ ಹಾಗೂ 990 ಲಕ್ಷದ ಅಂದಾಜು ಮೊತ್ತದಲ್ಲಿ ಹುಸ್ಕೂರು ಗ್ರಾಪಂ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯ ಮೊರಾರ್ಜಿ ದೇಸಾಯಿ ವಸತಿ ಶಾಲಾ ಕಾಂಪೌಂಡ್ ಮತ್ತು ಸಂಕೀರ್ಣ ಎರಡನೇ ಹಂತದ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ರೈತರು ಹಾಗೂ ಕಾರ್ಮಿಕರ ಜೀವನ ಉತ್ತಮಗೊಳಿಸಲು ಸರ್ಕಾರದಿಂದ ವಿವಿಧ ಸೌಲಭ್ಯ ವಿತರಿಸಲಾಗುತ್ತಿದೆ. ಇವುಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಅರ್ಥಿಕವಾಗಿ ಸದೃಢರಾಗಬೇಕು ಎಂದು ಶಾಸಕ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.ಪಟ್ಟಣದ ತಾಪಂ ಆವರಣದಲ್ಲಿ ಕೃಷಿ ಇಲಾಖೆಯಿಂದ 133 ರೈತರಿಗೆ ಮೇವು ಕತ್ತರಿಸುವ ಯಂತ್ರ ಹಾಗೂ ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರು 66 ಮೇಷನ್ ಕಿಟ್ ಹಾಗೂ ಎಲೆಕ್ಟ್ರಿಕಲ್ ಕೆಲಸ ಮಾಡುವ 55 ಕಾರ್ಮಿಕರಿಗೆ ಕೀಟ್‌ಗಳನ್ನು ವಿತರಿಸಿ ಮಾತನಾಡಿದರು.
ತಾಲೂಕಿನ ಅಂತರವಳ್ಳಿಯಲ್ಲಿ 65 ಲಕ್ಷ ರು. ವೆಚ್ಚದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಶಂಕುಸ್ಥಾಪನೆ ಹಾಗೂ 990 ಲಕ್ಷದ ಅಂದಾಜು ಮೊತ್ತದಲ್ಲಿ ಹುಸ್ಕೂರು ಗ್ರಾಪಂ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯ ಮೊರಾರ್ಜಿ ದೇಸಾಯಿ ವಸತಿ ಶಾಲಾ ಕಾಂಪೌಂಡ್ ಮತ್ತು ಸಂಕೀರ್ಣ ಎರಡನೇ ಹಂತದ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಲಾಗಿದೆ ಎಂದರು.5,78000 ರು. ಬೆಲೆ ಬಾಳುವ 66 ಮೇಷನ್ ಕಿಟ್ ಮತ್ತು 55 ಮಂದಿಗೆ ಎಲೆಕ್ಟ್ರಾನಿಕ್ ಕಿಟ್ ಸೇರಿದಂತೆ ಒಟ್ಟು 111 ಅರ್ಹ ಫಲಾನುಭವಿಗಳಿಗೆ ಕಿಟ್ ವಿತರಿಸಲಾಗಿದೆ. ಕೃಷಿ ಇಲಾಖೆಯಿಂದ 39,90,000 ರು. ವೆಚ್ಚದ ಸಲಕರಣೆಗಳನ್ನು ವಿತರಿಸಲಾಗಿದೆ. 11 ಕೋಟಿಗೂ ಹೆಚ್ಚು ವಿವಿಧ ಸೌಲಭ್ಯ ಹಾಗೂ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಕಾರ್ಮಿಕ ಇಲಾಖೆಯಲ್ಲಿ ಈಗಾಗಲೇ ಅಸಂಘಟಿತ ಕಾರ್ಮಿಕರು 6045 ಮಂದಿ ನೋಂದಾಯಿಸಿಕೊಂಡಿದ್ದಾರೆ. ಸರ್ಕಾರ ಹೊಸದಾಗಿ ಅಸಂಘಟಿತ ಕಾರ್ಮಿಕರ ನೋಂದಣಿಗೆ ಅವಕಾಶ ಮಾಡಿಕೊಟ್ಟಿದ್ದು, ಕಾರ್ಮಿಕ ಬದುಕಿನಲ್ಲಿ ಹೊಸ ಆಶಾಕಿರಣವಾಗಿ ಕಾಂಗ್ರೆಸ್ ಸರ್ಕಾರ ಸೇವೆ ಸಲ್ಲಿಸುತ್ತಿರುವುದರಿಂದ ಕಾರ್ಮಿಕರು ನೋಂದಾವಣಿ ಮಾಡಿಸಿಕೊಳ್ಳುವುದರ ಮೂಲಕ ಸರ್ಕಾರದ ಸೌಲಭ್ಯ ಪಡೆಯಬೇಕೆಂದು ಸಲಹೆ ನೀಡಿದರು.ಈ ವೇಳೆ ಮನ್ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಪಿ.ರಾಜು, ದೊಡ್ಡಯ್ಯ, ಪುರಸಭೆ ಸದಸ್ಯ ಶಿವಸ್ವಾಮಿ, ತಾಪಂ ಇಒ ಶ್ರೀನಿವಾಸ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ದೀಪಕ್, ಕಾರ್ಮಿಕ ಇಲಾಖೆ ನಿರ್ದೇಶಕಿ ಅನಿತಾ ಸೇರಿದಂತೆ ಇತರರು ಇದ್ದರು.