ಸಾರಾಂಶ
- 4 ತಾಸು ಪೊಲೀಸ್ ವಿಚಾರಣೆ ವೇಳೆ ಬಹಿರಂಗ
- ಗೆಳತಿ ನೀಡಿದ್ದ ಚಿನ್ನ ಪೊಲೀಸ್‌ಗೆ ಕೊಟ್ಟ ಪ್ರಕಾಶ್
ಕನ್ನಡಪ್ರಭ ವಾರ್ತೆ ಬೆಂಗಳೂರುಚಿನ್ನಾಭರಣ ಉದ್ಯಮಿಗೆ 2.5 ಕೋಟಿ ರು. ವಂಚನೆ ಪ್ರಕರಣದ ಆರೋಪಿಯೂ ಆಗಿರುವ ಸ್ನೇಹಿತೆ ಶ್ವೇತಾಗೌಡ ನೀಡಿದ್ದ 12 ಲಕ್ಷ ರು. ನಗದು ಹಾಗೂ 100 ಗ್ರಾಂ. ಚಿನ್ನಾಭರಣವನ್ನು ಪುಲಕೇಶಿ ನಗರ ಉಪ ವಿಭಾಗದ ಎಸಿಪಿ ಅವರಿಗೆ ಮಾಜಿ ಸಚಿವ ಹಾಗೂ ಕೋಲಾರ ಜಿಲ್ಲೆ ಬಿಜೆಪಿ ನಾಯಕ ವರ್ತೂರು ಪ್ರಕಾಶ್ ಮಂಗಳವಾರ ಮರಳಿಸಿದ್ದಾರೆ.
ಈ ನಡುವೆ, ಶ್ವೇತಾ ಗೌಡಳ ಜತೆ ವಿವಾಹವಾಗಲು ಮುಂದಾಗಿದ್ದ ವರ್ತೂರು ಪ್ರಕಾಶ್ ಅವರು ತಿರುಪತಿಯಲ್ಲಿ ನಿಶ್ಚಿತಾರ್ಥಕ್ಕೆ ಸಿದ್ಧತೆಯನ್ನೂ ನಡೆಸಿದ್ದರು ಎಂಬ ಸಂಗತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.ವಂಚನೆ ಪ್ರಕರಣದ ವಿಚಾರಣೆಗೆ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ತನಿಖಾಧಿಕಾರಿ ಆಗಿರುವ ಪುಲಕೇಶಿ ನಗರದ ಉಪ ವಿಭಾಗದ ಎಸಿಪಿ ಗೀತಾ ಅವರ ಮುಂದೆ ಬೆಳಗ್ಗೆ 10.15ರ ಸುಮಾರಿಗೆ ಮಾಜಿ ಸಚಿವರು ಹಾಜರಾಗಿದ್ದರು. ಈ ಪ್ರಕರಣದ ಕುರಿತು ನಾಲ್ಕು ತಾಸು ಮಾಜಿ ಸಚಿವರನ್ನು ಪ್ರಶ್ನಿಸಿ ತನಿಖಾಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಈ ವೇಳೆ ಆರೋಪಿ ಶ್ವೇತಾ ಜೊತೆಗಿನ ಒಡನಾಟ ಒಪ್ಪಿಕೊಂಡ ಅವರು, ತಮಗೆ ಆಕೆ ನೀಡಿದ್ದ 12 ಲಕ್ಷ ರು. ನಗದು, ಮೂರು ಬ್ರೇಸ್‌ಲೆಟ್ ಹಾಗೂ ಉಂಗುರ ಸೇರಿ 100 ಗ್ರಾಂ. ಆಭರಣವನ್ನು ಮರಳಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸ್ನೇಹ ಮಾಡಿ ಕೆಟ್ಟೆ:ನನಗೆ ಶ್ವೇತಾ ವಂಚಕಿ ಎಂಬುದು ಗೊತ್ತಿರಲಿಲ್ಲ. ಆಕೆಯ ಸ್ನೇಹ ಮಾಡಿ ನಾನು ತಪ್ಪು ಮಾಡಿಬಿಟ್ಟೆ. ನನಗೆ ಆಕೆಯ ವ್ಯವಹಾರಗಳು ಸಂಪೂರ್ಣವಾಗಿ ತಿಳಿದಿರಲಿಲ್ಲ. ನನ್ನ ಮನೆಗೆ ಒಡವೆ ತಂದು ಕೊಟ್ಟಿದ್ದು ಗೊತ್ತಿರಲಿಲ್ಲ ಎಂದು ವಿಚಾರಣೆ ವೇಳೆ ವರ್ತೂರು ಪ್ರಕಾಶ್ ಅಲವತ್ತುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಐದಾರು ತಿಂಗಳ ಹಿಂದೆ ನನಗೆ ಫೇಸ್‌ಬುಕ್ ಮೂಲಕ ಶ್ವೇತಾ ಪರಿಚಯವಾಗಿದ್ದಳು. ಚಿನ್ನಾಭರಣ ಬ್ಯುಸಿನೆಸ್ ನಡೆಸುವುದಾಗಿ ಆಕೆ ಹೇಳಿದ್ದಳು. ಹಾಗಾಗಿ ನವರತ್ನ ಜ್ಯುವೆಲರ್ಸ್ ಮಾಲೀಕ ಸಂಜಯ್ ಭಾಪ್ನರವರ ಅಂಗಡಿಗೆ ಚಿನ್ನ ಖರೀದಿಗೆ ಶ್ವೇತಾ ಜತೆ ಹೋಗಿದ್ದೆ. ಆದರೆ ನನಗೆ ಆಕೆಯ ವಂಚನೆ ಬಗ್ಗೆ ತಿಳಿದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಚಾಟಿಂಗ್ ಹಿಸ್ಟರಿ ನೋಡಿ ಸೈಲೆಂಟ್:
ಈ ಹೇಳಿಕೆ ದಾಖಲಿಸಿಕೊಂಡ ಎಸಿಪಿ ಗೀತಾ ಅವರು, ಮುಂದಿನ ಹಂತದಲ್ಲಿ ತನಿಖೆಗೆ ಅಗತ್ಯವಿದ್ದರೆ ವಿಚಾರಣೆ ಹಾಜರಾಗುವಂತೆ ಹೇಳಿ ಕಳುಹಿಸಿದ್ದಾರೆ. ವಿಚಾರಣೆ ಆರಂಭದಲ್ಲಿ ತನಗೇನೂ ಗೊತ್ತಿಲ್ಲ. ರಾಜಕಾರಣಿಯಾಗಿರುವ ಕಾರಣ ನನ್ನ ಮನೆಗೆ ಪ್ರತಿ ದಿನ ಬಹಳ ಜನ ಬಂದು ಹೋಗುತ್ತಾರೆ. ನನಗೆ ಶ್ವೇತಾಗೌಡ ಸ್ನೇಹಿತೆ ಅಲ್ಲ. ಇದೊಂದು ಸುಳ್ಳು ಆರೋಪ ಎನ್ನುತ್ತಿದ್ದ ಮಾಜಿ ಸಚಿವರಿಗೆ ಶ್ವೇತಾ ಜೊತೆಗಿನ ಚಾಟಿಂಗ್ ಹಿಸ್ಟರಿಯನ್ನು ಎಸಿಪಿ ಮುಂದಿಟ್ಟಿದ್ದಾರೆ. ಈ ಮಾಹಿತಿ ನೋಡಿ ಅಚ್ಚರಿಗೊಂಡ ಅವರು, ಕೊನೆಗೆ ತಮ್ಮ ಸ್ನೇಹದ ಬಗ್ಗೆ ಸವಿಸ್ತಾರವಾಗಿ ಅರುಹಿದ್ದಾರೆ ಎನ್ನಲಾಗಿದೆ.--