ದೀಪಾವಳಿ ಸಂಭ್ರಮಕ್ಕೆ ವರುಣ ತಣ್ಣೀರು!

| Published : Oct 21 2025, 01:00 AM IST

ಸಾರಾಂಶ

ದೀಪಾವಳಿ ಸಂದರ್ಭದಲ್ಲೇ ಭಾನುವಾರ ರಾತ್ರಿ ಧಾರಾಕಾರ ಮಳೆ ಸುರಿದು ವ್ಯಾಪಾರಸ್ಥರ ಪಾಲಿಗೆ ಕರಾಳ ರಾತ್ರಿಯಾಗಿ ಮಾರ್ಪಟ್ಟಿತು. ಯಾವುದೇ ಮೂಲಸೌಲಭ್ಯ ಕಲ್ಪಿಸದೇ ಆಡಳಿತ ಯಂತ್ರ ಹಬ್ಬದ ತಾತ್ಕಾಲಿಕ ಮಾರುಕಟ್ಟೆಯನ್ನು ಬೀರಲಿಂಗೇಶ್ವರ ದೇವಸ್ಥಾನ ಮೈದಾನಕ್ಕೆ ಸ್ಥಳಾಂತರಿಸಿತ್ತು. ಆದರೆ, ವ್ಯಾಪಾರಿಗಳು ಹಿಡಿಶಾಪ ಹಾಕಿಕೊಂಡೇ ಸೋಮವಾರ ಎಂದಿನಂತೆ ಪ್ರವಾಸಿ ಮಂದಿರ ಸಮೀಪದ ರಸ್ತೆಯಲ್ಲಿ ಹಬ್ಬದ ವಹಿವಾಟು ನಡೆಸಿದರು.

- ಪ್ರವಾಸಿ ಮಂದಿರ ರಸ್ತೆಗೆ ಮರಳಿದ ಮಾರುಕಟ್ಟೆ । ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ- - -

ಕನ್ನಡಪ್ರಭ ವಾರ್ತೆ ದಾವಣಗೆರೆ ದೀಪಾವಳಿ ಸಂದರ್ಭದಲ್ಲೇ ಭಾನುವಾರ ರಾತ್ರಿ ಧಾರಾಕಾರ ಮಳೆ ಸುರಿದು ವ್ಯಾಪಾರಸ್ಥರ ಪಾಲಿಗೆ ಕರಾಳ ರಾತ್ರಿಯಾಗಿ ಮಾರ್ಪಟ್ಟಿತು. ಯಾವುದೇ ಮೂಲಸೌಲಭ್ಯ ಕಲ್ಪಿಸದೇ ಆಡಳಿತ ಯಂತ್ರ ಹಬ್ಬದ ತಾತ್ಕಾಲಿಕ ಮಾರುಕಟ್ಟೆಯನ್ನು ಬೀರಲಿಂಗೇಶ್ವರ ದೇವಸ್ಥಾನ ಮೈದಾನಕ್ಕೆ ಸ್ಥಳಾಂತರಿಸಿತ್ತು. ಆದರೆ, ವ್ಯಾಪಾರಿಗಳು ಹಿಡಿಶಾಪ ಹಾಕಿಕೊಂಡೇ ಸೋಮವಾರ ಎಂದಿನಂತೆ ಪ್ರವಾಸಿ ಮಂದಿರ ಸಮೀಪದ ರಸ್ತೆಯಲ್ಲಿ ಹಬ್ಬದ ವಹಿವಾಟು ನಡೆಸಿದರು.

ಪ್ರತಿವರ್ಷ ಹಬ್ಬದ ಸಂದರ್ಭದಲ್ಲಿ ಜಯದೇವ ವೃತ್ತದಿಂದ ಪಿ.ಬಿ. ರಸ್ತೆ ಸಂಪರ್ಕಿಸುವ ರಾಜನಹಳ್ಳಿ ಹನುಮಂತಪ್ಪ ಧರ್ಮಛತ್ರ ಪಕ್ಕದ ಪ್ರವಾಸಿ ಮಂದಿರದ ಬಳಿ ತಾತ್ಕಾಲಿಕ ಮಾರುಕಟ್ಟೆ ಏರ್ಪಡುತ್ತಿತ್ತು. ಈ ಬಾರಿ ಪಿ.ಬಿ. ರಸ್ತೆ, ಗಾಂಧಿ ವೃತ್ತದಲ್ಲಿ ಕಾಮಗಾರಿ ಹಿನ್ನೆಲೆ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ಹಬ್ಬದ ತಾತ್ಕಾಲಿಕ ಮಾರುಕಟ್ಟೆ ಬೀರಲಿಂಗೇಶ್ವರ ದೇವಸ್ಥಾನ ಆವರಣಕ್ಕೆ ಸ್ಥಳಾಂತರಿಸಿ ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ಆದೇಶ ಹೊರಡಿಸಿತ್ತು. ಆದರೆ ಭರವಸೆ ನೀಡಿದಂತೆ ವ್ಯಾಪಾರಸ್ಥರಿಗೆ ಯಾವುದೇ ಮೂಲಸೌಲಭ್ಯ ಕಲ್ಪಿಸಿರಲಿಲ್ಲ.

ಭಾನುವಾರ ಸಂಜೆಯಿಂದ ಗುಡುಗು, ಮಿಂಚು, ಸಿಡಿಲಿನ ಆರ್ಭಟದೊಂದಿಗೆ ಸುರಿದ ಭಾರೀ ಮಳೆಯು ಆಡಳಿತ ಯಂತ್ರದ ಬೇಜವಾಬ್ದಾರಿ ಬಯಲು ಮಾಡಿತು. ಅಲ್ಲದೇ, ಹಬ್ಬಕ್ಕೆ ನಾಲ್ಕು ಕಾಸು ಕಾಣಬೇಕೆಂಬ ನಿರೀಕ್ಷೆಯಿಂದ ಬಾಡಿಗೆ ವಾಹನಗಳಲ್ಲಿ ಜಿಲ್ಲಾ ಕೇಂದ್ರಕ್ಕೆ ಸರಕು ತಂದಿದ್ದ ವ್ಯಾಪಾರಿಗಳು, ರೈತರಿಗೆ ಮಳೆ ನಿರಾಸೆ ತಂದೊಡ್ಡಿತು.

ಮಳೆಯಿಂದಾಗಿ ಪಟಾಕಿ ವಹಿವಾಟಿಗೂ ತೊಂದರೆಯಾಯಿತು. ಸಂಜೆಯಿಂದಲೇ ಮಳೆ ಆರ್ಭಟಿಸಿದ ಕಾರಣ ವ್ಯಾಪಾರ ಸಂಪೂರ್ಣ ಹಳ್ಳ ಹಿಡಿಯಿತು. ವರ್ತಕರು ಪಟಾಕಿ ದಾಸ್ತಾನು ಕಾಪಾಡಿಕೊಳ್ಳುವಲ್ಲೇ ಇಡೀ ರಾತ್ರಿ ಕಳೆಯಬೇಕಾಯಿತು. ಸೋಮವಾರ ಬೆಳಗಾಗುತ್ತಿದ್ದಂತೆ ಎಂದಿನಂತೆ ಪಿ.ಬಿ. ರಸ್ತೆಯ ರಾಜನಹಳ್ಳಿ ಹನುಮಂತಪ್ಪ ಧರ್ಮಛತ್ರ ಪಕ್ಕದ ರಸ್ತೆ, ಪ್ರವಾಸಿ ಮಂದಿರದ ಬಳಿ ತಾತ್ಕಾಲಿಕ ವ್ಯಾಪಾರಿಗಳು ವಹಿವಾಟು ಆರಂಭಿಸಿದ್ದರು. ಮಾರುಕಟ್ಟೆಯಲ್ಲಿ ಎಲ್ಲ ವಸ್ತುಗಳ ದರಗಳು ಏರಿಕೆಯಾಗಿದ್ದವು.

- - -

-20ಕೆಡಿವಿಜಿ37, 38: ದೀಪಾವಳಿಗೆ ಮಾವಿನ ಸಪ್ಪು, ಬಾಳೆ ಕಂಬ ಖರೀದಿಸುತ್ತಿರುವ ಗ್ರಾಹಕರು. -20ಕೆಡಿವಿಜಿ39, 40: ದಾವಣಗೆರೆ ಪ್ರವಾಸಿ ಮಂದಿರ ರಸ್ತೆಯಲ್ಲಿ ಪೂಜೆಗೆಂದು ಗ್ರಾಹಕರು ಹೂವು, ಹಾರಗಳನ್ನು ಖರೀದಿಸಿದರು.