ಮೊಳಕಾಲ್ಮುರಿನಲ್ಲಿ ವರುಣನ ಅಬ್ಬರ ಜೋರು

| Published : Oct 06 2024, 01:20 AM IST

ಸಾರಾಂಶ

ತಾಲೂಕಿನಲ್ಲಿ ಶುಕ್ರವಾರ ತಡರಾತ್ರಿ ವರುಣರಾಯ ಅಬ್ಬರಿಸಿದ್ದು, ಭರ್ಜರಿಯಾಗಿ ಸುರಿದ ಮಳೆಯಿಂದ ಕೆರೆ ಕಟ್ಟೆಗಳಿಗೆ ನೀರು ಹರಿದು ಬಂದಿದೆ. ಕೃಷಿ ಭೂಮಿಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟವೂ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ತಾಲೂಕಿನಲ್ಲಿ ಶುಕ್ರವಾರ ತಡರಾತ್ರಿ ವರುಣರಾಯ ಅಬ್ಬರಿಸಿದ್ದು, ಭರ್ಜರಿಯಾಗಿ ಸುರಿದ ಮಳೆಯಿಂದ ಕೆರೆ ಕಟ್ಟೆಗಳಿಗೆ ನೀರು ಹರಿದು ಬಂದಿದೆ. ಕೃಷಿ ಭೂಮಿಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟವೂ ಸಂಭವಿಸಿದೆ.

ತಾಲೂಕಿನ ದೇವಸಮುದ್ರ ಹೋಬಳಿಯ ಪಕ್ಕುರ್ತಿ ಕೆರೆ ಎರಡನೇ ಬಾರಿ ಭರ್ತಿಯಾಗಿ ಕೂಡಿ ಬಿದ್ದಿದೆ. ಗುಂಡೇರಹಳ್ಳದ ಮೂಲಕ ದೇವಸಮುದ್ರ ಕೆರೆಗೆ ಅಪಾರ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಭರ್ತಿಯಾಗುವ ಹಂತ ತಲುಪಿದೆ.

ಚಿಕ್ಕನಹಳ್ಳಿ ಮತ್ತು ಗೌರಸಮುದ್ರ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದ್ದು, ಜಮೀನುಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ಶೇಂಗಾ, ಸಜ್ಜೆ, ಹತ್ತಿ, ತೊಗರಿ ಬೆಳೆ ಸೇರಿದಂತೆ 19 ಹೆಕ್ಟೇರ್ ಬೆಳೆ ಹಾನಿಯಾಗಿದೆ.

ತಾಲೂಕಿನಲ್ಲಿ ಒಟ್ಟು ಹತ್ತು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ದೇವಸಮುದ್ರ ಹೋಬಳಿಯ ಕೆಳಗಳ ಕಣಿವೆ, ಪಕ್ಕುರ್ತಿ, ಪೆನ್ನಮ್ಮನ ಹಳ್ಳಿಯಲ್ಲಿ ತಲಾ ಒಂದು ಮನೆ, ದೇವಸಮುದ್ರ 2, ಹಾಗು ಕಸಬಾ ಹೋಬಳಿಯ ಕೊಂಡ್ಲಹಳ್ಳಿ, ಹಿರೇಕೆರೆ ಹಳ್ಳಿ ಮ್ಯಾಸರ ಹಟ್ಟಿ ,ಮೊಗಲ ಹಳ್ಳಿ ತಲಾ ಒಂದು, ಬಿಜಿ ಕೆರೆಯಲ್ಲಿ 2 ಮನೆಗಳು ಭಾಗಶಃ ಮನೆ ಕುಸಿದಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ತಾಲೂಕಿನ ಜೀವನದಿ ಚಿನ್ನಹಗರಿಯು ಮೈದುಂಬಿ ಹರಿಯುತ್ತಿದೆ. ಚಿನ್ನಹಗರಿ ನದಿ ಹಾದು ಹೋಗಿರುವ ಗಡಿ ಗ್ರಾಮಗಳಾದ ಚಿಕ್ಕೋಬನಹಳ್ಳಿ, ಚಿಕ್ಕುಂತಿ, ಸಿದ್ದಯ್ಯ ಕೋಟೆ ಗ್ರಾಮಗಳ ರೈತರಲ್ಲಿ ಸಂತಸ ಮನೆ ಮಾಡಿದೆ. ಭಾಗದ ಮಹಿಳೆಯರು ಸಂಭ್ರಮದಿಂದ ಹರಿಯುವ ಗಂಗೆಗೆ ಹಾಲು ತುಪ್ಪ ಅರ್ಪಿಸಿ ಪೂಜೆ ಸಲ್ಲಿಸುವುದು ಕಂಡು ಬಂದಿದೆ.

ಸಿದ್ದಯ್ಯನ ಕೋಟೆ ಶ್ರೀ ಬಸವಲಿಂಗ ಸ್ವಾಮೀಜಿ ನದಿ ತಟಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಚಿಕ್ಕೋಬನಹಳ್ಳಿಯ ಜಿನಗಿ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಹಳ್ಳದಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಬ್ಯಾರೇಜ್ ದುರಸ್ತಿ ಮಾಡಿದರೆ ರೈತರ ಜಮೀನುಗಳ ಬೋರ್ ವೆಲ್ ಗಳಿಗೆ ಜಲ ಮರು ಪೂರಣಕ್ಕೇ ಅನುಕೂಲವಾಗುತ್ತದೆ ಎಂದು ಗ್ರಾಮದ ಅಜ್ಜೇರಿ ತಿಪ್ಪೇಸ್ವಾಮಿ ಹೇಳಿದ್ದಾರೆ.

ಮೂರು ವರ್ಷಗಳ ತರುವಾಯ ಚಿನ್ನಹಗರಿ ನದಿಯು ಮೈದುಂಬಿ ಹರಿಯುತ್ತಿರುವುದರಿಂದ ರಂಗಯ್ಯನ ದುರ್ಗ ಜಲಾಶಯದ ಒಳಹರಿವು ಹೆಚ್ಚಿದೆ ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ.

ಕಸಬಾ ಹೋಬಳಿಗೆ ಹೋಲಿಕೆ ಮಾಡಿಕೊಂಡಲ್ಲಿ ರಾಂಪುರ ಹೋಬಳಿಯ ವಿವಿಧ ಕಡೆಯಲ್ಲಿ ಭಾರಿ ಮಳೆಯಾಗಿದೆ. ಕಸಬಾ ಹೋಬಳಿ ಬಿಜಿಕೆರೆ ಹೊಸಕೆರೆ ಮತ್ತೊಮ್ಮೆ ಭರ್ತಿಯಾಗಿದ್ದು, ದುಪ್ಪಿಕೆರೆಗೆ ಅಪಾರ ಪ್ರಮಾಣದ ನೀರು ಹರಿದು ಬಂದು ಕೋಡಿ ಬೀಳುವ ಹಂತಕ್ಕೆ ಬಂದಿದೆ. ಪಂಚಾಯಿತಿ ವ್ಯಾಪ್ತಿಯ ಮುತ್ತಿಗಾರಹಳ್ಳಿ ಅರಣ್ಯ ಪ್ರದೇಶದ ಕೆರೆ ಕಟ್ಟೆಗಳು ಭರ್ತಿಯಾಗಿ ರೈತರಲ್ಲಿ ಹರ್ಷ ತರಿಸಿದೆ.