ಸಾರಾಂಶ
ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ನಿರೀಕ್ಷೆಯಲ್ಲಿದ್ದ ಅನ್ನದಾತನಿಗೆ ಮಳೆ ನಿರಾಸೆ ಮೂಡಿಸಿದೆ. ಕಳೆದ ಒಂದು ತಿಂಗಳಿಂದ ಒಂದೇ ಒಂದು ಉತ್ತಮ ಮಳೆಯಾಗದೇ ಇರುವ ಹಿನ್ನೆಲೆಯಲ್ಲಿ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದ್ದು, ವರುಣನ ಮುನಿಸು ತಪ್ಪಿಸುವ ನಿಟ್ಟಿನಲ್ಲಿ ವಿವಿಧ ರೀತಿಯ ಪೂಜಾ ವಿಧಾನಗಳನ್ನು ಅನುಸರಿಸಲು ಮುಂದಾಗಿದ್ದು, ಅದರಲ್ಲಿ ಸ್ಥಳೀಯ ಹಿರೇಮಠದ ಓಣಿಯ ತಾಯಂದಿರು ಸತತ ಐದು ದಿನಗಳ ಕಾಲ ನಸುಕಿನ ವೇಳೆ ಮೌನವ್ರತಾಚರಣೆ ಮಾಡುವ ಮೂಲಕ ವರುಣ ದೇವನಿಗೆ ಪ್ರಾರ್ಥಿಸುತ್ತಿದ್ದಾರೆ.
ನಿಂಗರಾಜ ಬೇವಿನಕಟ್ಟಿ
ನರೇಗಲ್ಲ: ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ನಿರೀಕ್ಷೆಯಲ್ಲಿದ್ದ ಅನ್ನದಾತನಿಗೆ ಮಳೆ ನಿರಾಸೆ ಮೂಡಿಸಿದೆ. ಕಳೆದ ಒಂದು ತಿಂಗಳಿಂದ ಒಂದೇ ಒಂದು ಉತ್ತಮ ಮಳೆಯಾಗದೇ ಇರುವ ಹಿನ್ನೆಲೆಯಲ್ಲಿ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದ್ದು, ವರುಣನ ಮುನಿಸು ತಪ್ಪಿಸುವ ನಿಟ್ಟಿನಲ್ಲಿ ವಿವಿಧ ರೀತಿಯ ಪೂಜಾ ವಿಧಾನಗಳನ್ನು ಅನುಸರಿಸಲು ಮುಂದಾಗಿದ್ದು, ಅದರಲ್ಲಿ ಸ್ಥಳೀಯ ಹಿರೇಮಠದ ಓಣಿಯ ತಾಯಂದಿರು ಸತತ ಐದು ದಿನಗಳ ಕಾಲ ನಸುಕಿನ ವೇಳೆ ಮೌನವ್ರತಾಚರಣೆ ಮಾಡುವ ಮೂಲಕ ವರುಣ ದೇವನಿಗೆ ಪ್ರಾರ್ಥಿಸುತ್ತಿದ್ದಾರೆ. ಏನಿದು ವ್ರತಾಚರಣೆ?: ಮುಂಗಾರು ಹಂಗಾಮಿನ ವೇಳೆ ಬರಬೇಕಿದ್ದ ಮಳೆ ಹೆಸರು ಬೆಳೆ ಬಿತ್ತಿ ತಿಂಗಳು ಗತಿಸಿದ್ದರೂ ಬಾರದಿರುವುದರಿಂದ ರೈತ ಸಮುದಾಯ ಕಂಗಾಲಾಗಿದೆ. ಓಣಿಯ ಆರು ಜನ ತಾಯಂದಿರು ನಸುಕಿನ ವೇಳೆ ಎದ್ದು, ಮೌನವ್ರತ ಆಚರಿಸುವ ಮೂಲಕ ಮಡಿಯಲ್ಲಿ ಮಲ್ಲಯ್ಯಜ್ಜನ ಗುಡಿಯಿಂದ ತುಂಬಿದ ಕೊಡ ತಂದು ಬರಮ ದೇವರ ಮೂರ್ತಿಗೆ ಹಾಕುವ ಮೂಲಕ ಪೂಜಾ ವಿಧಿ ವಿಧಾನ ಕೈಗೊಂಡು ಜನ ಏಳುವುದಕ್ಕಿಂತ ಮೊದಲೇ ಕಾರ್ಯ ಮಾಡಿ ಮುಗಿಸುವುದು, ಇದೇ ರೀತಿ ಐದು ದಿನಗಳ ಕಾಲ ಪೂರೈಸಿ ಕೊನೆಯದಿನ ಹಿರೇಕೆರೆಗೆ ಪೂಜೆ ಸಲ್ಲಿಸಿ ಓಣಿಯ ಜನತೆ ಓಣಿಯಲ್ಲಿ ಪ್ರಸಾದ ಮಾಡಿಸಿ ಜನರಿಗೆ ಉಣಬಡಿಸುವ ವಿಧಾನವಾಗಿದೆ.ದೇವರಲ್ಲಿ ನಂಬಿಕೆ: ವಿವಿಧ ಬಗೆಯ ವ್ರತಾಚರಣೆ ಪೂಜಾ ವಿಧಾನ ಅನುಸರಿಸುವುದರಿಂದ ಮಳೆರಾಯ ಕಣ್ಣು ತೆರೆಯುತ್ತಾನೆ ಎಂಬುದು ಜನರ ಅಚಲವಾದ ನಂಬಿಕೆ. ಇದನ್ನು ಹಳೆಯ ತಲೆಮಾರಿನಿಂದಲೂ ಅನುಸರಿಸುತ್ತಾ ಬಂದಿದ್ದು, ಪ್ರಸ್ತುತವಾಗಿ ಈಗಲೂ ಇದು ಜಾರಿಯಲ್ಲಿರುವುದು ವಿಶೇಷ.ಮುಂಗಾರು ಮಳೆ ಕೈಕೊಟ್ಟ ಕಾರಣ ಸತತ ಐದು ದಿನಗಳ ಕಾಲ ಬೆಳಗ್ಗೆ ಐದು ಗಂಟೆಗೆ ಎದ್ದು ನೀರನ್ನು ತಂದು ಭರಮ ದೇವರಿಗೆ ನೀರನ್ನು ಹಾಕುವ ಮೂಲಕ ಪ್ರಾರ್ಥನೆ ಮಾಡಿ ಕೊನೆಯ ದಿನ ಐದು ದೇವರುಗಳಿಗೆ ನೀರು ಹಾಕಿ ಕೆರೆಗೆ ಹೋಗಿ ಗಂಗಾ ಪೂಜೆ ಸಲ್ಲಿಸಿ ಓಣಿಯಲ್ಲಿ ಪ್ರಸಾದ ಮಾಡಿಸುತ್ತೇವೆ. ಇದರಿಂದ ಈ ಹಿಂದೆ ಮಳೆಯಾಗಿತ್ತು, ಈಗಲೂ ಮಳೆಯಾಗುತ್ತದೆಂಬ ನಂಬಿಕೆ ಇದೆ ಎಂದು ಗ್ರಾಮಸ್ಥೆಯರಾದ ಗಂಗಮ್ಮ ಕಳಕೊಣ್ಣವರ, ಮಂಜುಳಾ ಮಳ್ಳಿ, ನಿಂಗವ್ವ ಮಡಿವಾಳರ ಹೇಳಿದರು.ಈ ಹಿಂದೆ ಮಳೆರಾಯ ಮನಿಸಿ ಕೊಂಡಾಗ ಆತನ ಓಲೈಕೆಗಾಗಿ ವಿವಿಧ ರೀತಿಯ ಪೂಜಾ ವಿಧಿ ವಿಧಾನ ಮಾಡುತ್ತಿದ್ದೆವು, ಅದರಲ್ಲಿ ಮೌನವ್ರತದಿಂದ ನೀರು ಹಾಕುವ ಮೂಲಕ ಈಗ ವರುಣ ದೇವನ ಓಲೈಕೆಗೆ ಮುಂದಾಗಿದ್ದೇವೆ. ಇದರಿಂದ ಮಳೆ ಬಂದೇ ಬರುತ್ತದೆ ಎಂಬ ನಂಬಿಕೆ ನಮಗಿದೆ ಎಂದು ರೈತ ಮಹಿಳೆಯರಾದ ದ್ರಾಕ್ಷಾಯಣಿ ಹಡಪದ, ಲಕ್ಷ್ಮಿ ಹಡಪದ, ಕಸ್ತೂರಿ ಹಡಪದ ಹೇಳಿದರು.