ವರುಣನ ಆರ್ಭಟ, ಮಲೆನಾಡಿನ 5 ತಾಲೂಕುಗಳ ಶಾಲೆಗಳಿಗೆ ರಜೆ

| Published : Jul 19 2024, 12:50 AM IST

ವರುಣನ ಆರ್ಭಟ, ಮಲೆನಾಡಿನ 5 ತಾಲೂಕುಗಳ ಶಾಲೆಗಳಿಗೆ ರಜೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಜಿಲ್ಲೆಯಲ್ಲಿ ದಿನೇ ದಿನೇ ವರುಣನ ಆರ್ಭಟ ಜೋರಾಗುತ್ತಿದೆ. ಮಕ್ಕಳ ಹಿತದೃಷ್ಟಿಯಿಂದ ಮಲೆನಾಡಿನ 5 ತಾಲೂಕುಗಳ ಅಂಗನವಾಡಿ ಹಾಗೂ ಶಾಲೆಗಳಿಗೆ ಶುಕ್ರವಾರವೂ ರಜೆ ವಿಸ್ತರಣೆ ಮಾಡಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.

ಹಲವೆಡೆ ಮತ್ತೆ ರಸ್ತೆ ಸಂಪರ್ಕ ಬಂದ್‌ । ಹೆಬ್ಬಾಳ್‌ ಸೇತುವೆ ಮುಳುಗಡೆ । ಸಂಜೆ ನಂತರ ಚುರುಕುಗೊಂಡ ಮಳೆ ।ಮತ್ತೆ ಶೃಂಗೇರಿಗೆ ಜಲ ಕಂಟಕ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲೆಯಲ್ಲಿ ದಿನೇ ದಿನೇ ವರುಣನ ಆರ್ಭಟ ಜೋರಾಗುತ್ತಿದೆ. ಮಕ್ಕಳ ಹಿತದೃಷ್ಟಿಯಿಂದ ಮಲೆನಾಡಿನ 5 ತಾಲೂಕುಗಳ ಅಂಗನವಾಡಿ ಹಾಗೂ ಶಾಲೆಗಳಿಗೆ ಶುಕ್ರವಾರವೂ ರಜೆ ವಿಸ್ತರಣೆ ಮಾಡಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.

ಕೊಪ್ಪ, ಕಳಸ, ಮೂಡಿಗೆರೆ, ಶೃಂಗೇರಿ, ಎನ್‌.ಆರ್‌.ಪುರ ತಾಲೂಕುಗಳ ಅಂಗನವಾಡಿ ಜತೆಗೆ ಶಾಲೆಗಳಿಗೂ ರಜೆ ನೀಡಲಾಗಿದೆ. ಚಿಕ್ಕಮಗಳೂರು ನಗರ ವ್ಯಾಪ್ತಿ, ಲಕ್ಯಾ ಮತ್ತು ಅಂಬಳೆ ಹೋಬಳಿ ಹೊರತುಪಡಿಸಿ ಇತರೆ ಹೋಬಳಿಗಳಿಗೂ ಶಾಲೆಯ ರಜೆ ಆದೇಶ ಅನ್ವಯವಾಗಲಿದೆ.

ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ಸರಾಸರಿ ವಾಡಿಕೆ ಮಳೆ 18.9 ಮಿ.ಮೀ. ಆದರೆ, 46.7 ಮಿ.ಮೀ. ಮಳೆ ಬಂದಿದೆ. ಹೀಗಾಗಿ ಜಿಲ್ಲೆಯಾದ್ಯಂತ ಮತ್ತೆ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಬೆಳಿಗ್ಗೆಯಿಂದ ಮಳೆಯ ಪ್ರಮಾಣ ಇಳಿಮುಖವಾಗಿತ್ತಾದರೂ ಮಧ್ಯಾಹ್ನದ ನಂತರ ಭಾರೀ ಮಳೆ ಬಂದಿದ್ದು, ಇತರ ಜತೆ ಜತೆಗೆ ಗಾಳಿ ಬೀಸಿದ್ದರಿಂದ ಮಲೆನಾಡಿನ ಜನ ಜೀವನ ಅಸ್ತವ್ಯಸ್ತವಾಗಿದೆ.

ಶೃಂಗೇರಿ ಪಟ್ಟಣಕ್ಕೆ ಮತ್ತೆ ಜಲಕಂಟಕ ಎದುರಾಗಿದೆ. ಗುರುವಾರ ಸಂಜೆ 6 ಗಂಟೆ ವೇಳೆಗೆ ತುಂಗಾ ನದಿ ಗಾಂಧಿ ಮೈದಾನ ತನ್ನ ಮಡಿಲಿಗೆ ಹಾಕಿಕೊಂಡಿತು. ಇಲ್ಲಿನ ಶ್ರೀ ಮಠದ ಬೈಪಾಸ್‌ ರಸ್ತೆ ಕೂಡ ಜಲಾವ್ರತವಾಯಿತು. ಶೃಂಗೇರಿ -ಮಂಗಳೂರು ಸಂಪರ್ಕ ಕಲ್ಪಿಸುವ ರಾ.ಹೆದ್ದಾರಿ 169 ರಲ್ಲಿ ನೆಮ್ಮಾರ್‌ ಬಳಿ ರಾತ್ರಿ ರಸ್ತೆ ಮುಳುಗಡೆಯಾಗಿತ್ತು.

ಕಳಸ ತಾಲೂಕಿನಾದ್ಯಂತ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಮತ್ತೆ ಭದ್ರಾ ನದಿ ನೀರು ಏರಿಕೆಯಾಗಿದೆ. ಹೊರನಾಡು - ಕಳಸ ಸಂಪರ್ಕದ ಹೆಬ್ಬಾಳ್‌ ಸೇತುವೆ ಗುರುವಾರ ಸಂಜೆ ಮತ್ತೆ ಮುಳುಗಡೆಗೊಂಡಿತು. ನದಿ ಪಾತ್ರ ದಲ್ಲಿರುವ ಹೊಲ ಗದ್ದೆಗಳು, ತೋಟಗಳು ಜಲಾವ್ರತವಾದವು.

ಜಾವಳಿ, ಕೊಟ್ಟಿಗೆಹಾರ, ಬಣಕಲ್‌ ಸುತ್ತಮುತ್ತ ಮಳೆಯ ಪ್ರಮಾಣ ಇನ್ನಷ್ಟು ಜಾಸ್ತಿಯಾಗಿದೆ. ಮಂಗಳೂರು ಸಂಪರ್ಕಿಸುವ ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ವಾಹನಗಳು ಚಲನೆ ಮಾಡಲಾರದಷ್ಟು ದಟ್ಟವಾಗಿ ಮಂಜು ಕವಿದಿದೆ. ಅಪಾಯದ ಆತಂಕ ದಿಂದ ಚಾಲಕರು ರಾತ್ರಿ ವೇಳೆಯಲ್ಲಿ ಪ್ರಯಾಣ ಬೆಳೆಸಲು ಹಿಂದೇಟು ಹಾಕುತ್ತಿದ್ದಾರೆ. ಇಲ್ಲಿನ ಹಳ್ಳಗಳು ತುಂಬಿ ಹರಿಯುತ್ತಿವೆ. ಝರಿಗಳಿಗೆ ಇನ್ನಷ್ಟು ಜೀವ ಕಳೆ ಬಂದಿದೆ. ಹೇಮಾವತಿ ನದಿ ಮೈದುಂಬಿ ಹರಿಯುತ್ತಿರುವ ಪರಿಣಾಮ ಆಸುಪಾಸಿನ ತಗ್ಗಿನ ಪ್ರದೇಶಗಳು ಜಲಾವ್ರತವಾಗಿವೆ.

ಕೊಪ್ಪ ತಾಲೂಕಿನಲ್ಲೂ ಮಧ್ಯಾಹ್ನದ ನಂತರ ಮಳೆ ಆರ್ಭಟ ಜೋರಾಗಿದ್ದು, ಬಲವಾಗಿ ಬೀಸಿದ ಗಾಳಿಗೆ ಹಲವೆಡೆ ಮರ ಗಳು, ವಿದ್ಯುತ್‌ ಕಂಬಗಳು ಬಿದ್ದಿವೆ. ಹಾಗಾಗಿ ರಸ್ತೆ ಸಂಪರ್ಕಕ್ಕೆ ಕೆಲವೆಡೆ ಅಡಚಣೆಯಾಗಿತ್ತು. ಬಸರೀಕಟ್ಟೆ ಸೇರಿದಂತೆ ಹಲವೆಡೆ ಧರೆ ಕುಸಿತ ಉಂಟಾಗಿದೆ. ಹಳ್ಳಗಳು ತುಂಬಿ ಹರಿಯುತ್ತಿವೆ. ಕೊಪ್ಪ ಕೆಸವೆ ರಸ್ತೆಯ ಅಚ್ಚರಡಿ ಬಳಿ ಮುಸುರೆಹಳ್ಳ ತುಂಬಿ ಹರಿಯುತ್ತಿದ್ದು, ಇದರಿಂದ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಎನ್‌.ಆರ್‌.ಪುರ ತಾಲೂಕಿನಲ್ಲೂ ಮಳೆ ಚುರುಕು ಗೊಂಡಿದೆ. ಕಳೆದ ದಿನಗಳಿಗೆ ಹೋಲಿಕೆ ಮಾಡಿದರೆ ಗುರುವಾರ ವರುಣನ ಆರ್ಭಟ ಜೋರಾಗಿತ್ತು.

ಚಿಕ್ಕಮಗಳೂರು ತಾಲೂಕಿನಲ್ಲೂ ಮಳೆ ಮುಂದುವರಿದಿದೆ. ಬೆಳಿಗ್ಗೆಯಿಂದಲೇ ತುಂತುರು ಮಳೆ ಮಧ್ಯಾಹ್ನದ ನಂತರ ಚುರುಕು ಗೊಂಡಿತು. ತರೀಕೆರೆ ತಾಲೂಕಿನಲ್ಲಿ ಮಳೆ ತೀವ್ರವಾಗಿತ್ತು. ಆದರೆ, ಕಡೂರು ಮತ್ತು ಅಜ್ಜಂಪುರ ತಾಲೂಕುಗಳಲ್ಲಿ ಸಾಧಾರಣವಾಗಿತ್ತು. ಒಟ್ಟಾರೆ ಮಳೆಯಿಂದಾಗಿ ಮಲೆನಾಡು ತತ್ತರಿಸುತ್ತಿದೆ.

ಪೋಟೋ ಫೈಲ್‌ ನೇಮ್‌ 18 ಕೆಸಿಕೆಎಂ 4ಕೊಪ್ಪ ಕೆಸವೆ ರಸ್ತೆಯ ಅಚ್ಚರಡಿ ಬಳಿ ಮುಸುರೆಹಳ್ಳ ತುಂಬಿ ಹರಿಯುತ್ತಿರುವುದು.