ತಾಲೂಕಿನಾದ್ಯಂತ ವರುಣಾರ್ಭಟ: ರೈತರ ಮೊಗದಲ್ಲಿ ಸಂತಸ

| Published : May 21 2024, 12:36 AM IST

ಸಾರಾಂಶ

ಕಳೆದೊಂದು ವಾರದಿಂದ ವರುಣಾರ್ಭಟ ಮುಂದುರೆದಿದ್ದು, ಎಲ್ಲಿ ಮಳೆ ಬರುವುದಿಲ್ಲೋ ಎಂಬ ಆತಂಕದಲ್ಲಿದ್ದ ರೈತರ ಮೊಗದಲ್ಲಿ ಸಂತಸ ಉಂಟಾಗಿದೆ.

ಕನ್ನಡಪ್ರಭ ವಾರ್ತೆ ತಿಪಟೂರು

ಕಳೆದೊಂದು ವಾರದಿಂದ ವರುಣಾರ್ಭಟ ಮುಂದುರೆದಿದ್ದು, ಎಲ್ಲಿ ಮಳೆ ಬರುವುದಿಲ್ಲೋ ಎಂಬ ಆತಂಕದಲ್ಲಿದ್ದ ರೈತರ ಮೊಗದಲ್ಲಿ ಸಂತಸ ಉಂಟಾಗಿದೆ. ನಿರಂತರವಾಗಿ ಕಳೆದ ಎರಡ್ಮೂರು ವರ್ಷಗಳಿಂದ ಭೀಕರ ಬರದ ಬೇಗೆಯಲ್ಲಿ ಬಿಸಿಲಿನ ತಾಪಕ್ಕೆ ಬಸವಳಿದಿದ್ದ ತಾಲೂಕಿಗೆ ಈಗ ವರುಣ ಕೃಪೆ ತೋರಿದ್ದಾನೆ. ತಾಲೂಕಿನಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದೆ. ಕಳೆದ ೨-೩ ದಿನಗಳಿಂದ ಸುರಿದ ಮಳೆಗೆ ಹಳ್ಳ-ಕೊಳ್ಳ, ಕೆರೆಕಟ್ಟೆ-ಬಾವಿಗಳಲ್ಲಿ ನೀರು ನಿಂತಿದೆ. ಎಲ್ಲಿ ನೋಡಿದರೂ ನೀರು ನೀರೇ. ಕೊನೆಗೂ ದೇವರು ಕೈಬಿಡದೆ ನಮ್ಮ ಕಷ್ಟ ಅರಿತು ಕಣ್ಣುಬಿಟ್ಟನಲ್ಲ ಎಂಬ ಖುಷಿಯೊಂದಿಗೆ ರೈತರಿದ್ದಾರೆ.

ರಾಗಿ ಬಿತ್ತನೆಯತ್ತ ಚಿತ್ತ : ಪೂರ್ವ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಅಲಸಂದೆ ಬೆಳೆಗಳ ಬಿತ್ತನೆಗೆ ಮಳೆ ತಡವಾಗಿ ಬಂದ ಕಾರಣ ರೈತರು ರಾಗಿ ಬಿತ್ತನೆಗೆ ಭೂಮಿಯನ್ನು ಹಸನು ಮಾಡಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಬಿಡುವಿಲ್ಲದೆ ಮಳೆ ಸುರಿಯುತ್ತಿರುವುದರಿಂದ ಮಳೆ ಸ್ವಲ್ಪ ಬಿಡುವು ಕೊಟ್ಟರೆ ಸಾಕು ಎಂದು ಕಾಯುತ್ತಿದ್ದಾರೆ.

ಅಂತರ್ಜಲ ವೃದ್ದಿ: ತಾಲೂಕಿನಾದ್ಯಂತ ಅಂತರ್ಜಲ ಮಟ್ಟ ಸಾವಿರ ಅಡಿಗೆ ಕುಸಿದಿತ್ತು. ಆದರೆ ಈಗ ಬರುತ್ತಿರುವ ಮಳೆಯ ಕೃಪೆಯಿಂದ ಸಾಕಷ್ಟು ನೀರನ್ನು ಇಂಗುತ್ತಿರುವುದರಿಂದ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ವೃದ್ದಿಯಾಗಲಿದೆ. ಕೆರೆಕಟ್ಟೆಗಳಿಗೆ ನೀರು ಬರುತ್ತಿರುವುದರಿಂದ ಜನ ಜಾನುವಾರುಗಳ ನೀರಿಗೆ ತಾತ್ಕಾಲಿಕವಾಗಿ ಪರಿಹಾರ ಸಿಕ್ಕಿದೆ. ಇದೇ ರೀತಿ ಮಳೆ ಮುಂದುವರೆದರೆ ರಾಗಿ ಬೆಳೆಗೆ ಉತ್ತಮ ಇಳುವರಿ ಬರಲಿದೆ.

ನಗರದಲ್ಲೂ ಮಳೆ ಮಳೆ ಮಳೆ : ನಗರದಲ್ಲಿಯೂ ವರುಣನ ಆರ್ಭಟ ಹೆಚ್ಚಾಗಿದ್ದು, ರಸ್ತೆಗಳೆಲ್ಲಾ ಮಳೆ ನೀರು ಹರಿಯುತ್ತಿದ್ದು ಎಲ್ಲೆಲ್ಲಿಯೂ ಮಳೆಯದ್ದೇ ಮಾತು, ಚರ್ಚೆ. ಯುಜಿಡಿ, ಮತ್ತಿತರೆ ಕಾಮಗಾರಿ ಮಾಡಿರುವ ಕೆಲ ಬಡಾವಣೆಗಳ ರಸ್ತೆಗಳಲ್ಲಿ ನೀರು ಸರಿಯಾಗಿ ಹರಿಯದೆ ಜನರಿಗೆ ತೊಂದರೆಯಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಖಾಸಗಿ ಬಸ್, ಆಟೋ ನಿಲ್ದಾಣ, ತರಕಾರಿ ಮಾರುಕಟ್ಟೆ ಬಳಿಯಂತೂ ಕೊಚ್ಚೆ ವಿಪರೀತವಾಗಿದ್ದು, ತುಂಬಾ ತೊಂದರೆಯಾಗಿದೆ. ಒಟ್ಟಾರೆ ಬಿಸಿಲ ಬೇಗೆಯಲ್ಲಿ ಬೆಂದು ನೊಂದು ಹೋಗಿದ್ದ ನಗರದ ನಾಗರೀಕರ ಮೊಗದಲ್ಲಿ ಮಳೆರಾಯನ ಕೃಪೆ ಮಂದಹಾಸ ಮೂಡಿಸಿದೆ.ಎಲ್ಲೆಲ್ಲಿ ಮಳೆ ?: ತಾಲೂಕಿನ ಹೊನ್ನವಳ್ಳಿ ಹೋಬಳಿಯ ಹಾಲ್ಕುರಿಗೆ, ಹೊನ್ನವಳ್ಳಿ, ಸಾರ್ಥವಳ್ಳಿ, ಮಣಕೀಕೆರೆ ಸೇರಿದಂತೆ ಕಿಬ್ಬನಹಳ್ಳಿ ಹೋಬಳಿ, ನೊಣವಿನಕೆರೆ, ಕಸಬಾ ಹೋಬಳಿಯ ಬಹುತೇಕ ಭಾಗಗಳಲ್ಲಿ ಮಳೆ ಎಡಬಿಡದೆ ಸುರಿದಿದೆ. ಅದರಲ್ಲೂ ತಾಲೂಕಿನ ಹೊನ್ನವಳ್ಳಿ ಹೋಬಳಿಯ ಹಾಲ್ಕುರಿಕೆ, ಎಚ್. ಭೈರಾಪುರ ಗ್ರಾಮದಲ್ಲಿ ಸುರಿದ ಮಳೆಗೆ ತಿಪಟೂರು-ಹುಳಿಯಾರು ರಸ್ತೆಗಳು ಹಾಗೂ ಸೇತುವೆಗಳು ತುಂಬಿ ಹರಿದಿದ್ದು ಹಳ್ಳ-ಕೊಳ್ಳ, ಸಣ್ಣಪುಟ್ಟ ಕಟ್ಟೆಗಳಲ್ಲಿ ನೀರು ಶೇಖರಣೆಯಾಗಿದೆ.

ಜೀವಕಳೆಯತ್ತ ಅಡಿಕೆ-ತೆಂಗು: ಮಳೆ ಇಲ್ಲದೆ ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆಗಳಾದ ಅಡಿಕೆ ಹಾಗೂ ತೆಂಗಿನ ಮರಗಳು ಸಾಕಷ್ಟು ಪ್ರಮಾಣದಲ್ಲಿ ಒಣಗಿ ಹೋಗಿದ್ದು ಉಳಿದ ಮರಗಳನ್ನು ಬದುಕಿಸಿಕೊಳ್ಳಲು ಕೆಲ ರೈತರು ಟ್ಯಾಂಕರ್‌ಗಳ ಮೂಲಕ ನೀರು ಹಾಯಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಆದರೆ ಮಳೆರಾಯ ಕೃಪೆ ತೋರಿರುವುದರಿಂದ ರೈತರಂತೂ ಖುಷಿಯಿಂದ ತಮ್ಮ ತೋಟಗಳಿಗೆ ಹರಿಯುತ್ತಿರುವ ನೀರಿಗೆ ಬದುಗಳನ್ನು ಹಾಕಿ ನೀರು ಇಂಗಿಸುತ್ತ ಖುಷಿ ಕಾಣುತ್ತಿದ್ದಾರೆ.