ಸಾರಾಂಶ
ಹಳೇ ಪೋಟೋಗಳ ಸಂಗ್ರಹಿಸಿ, ಹೂಳುವ ಶ್ರೀ ವಾಸವಿ ಯುವಜನ ಸಂಘದ ಪರಿಸರಸ್ನೇಹಿ ಕಾರ್ಯವಿದು ಎಂ.ಎಸ್. ಚನ್ನಬಸವ ಶೀಲವಂತ್
ಕನ್ನಡಪ್ರಭ ವಾರ್ತೆ ದಾವಣಗೆರೆಒಂದು ಒಳ್ಳೆಯ ಫೋಟೋ ಸಾವಿರಾರು ಪದಗಳ ಹೇಳಬಲ್ಲ ತಾಕತ್ತು ಹೊಂದಿದೆ. ಈ ಮಾತು ದೇವರ ಪೋಟೋಗಳಿಗೆ ಹೋಲಿಸಿದರೆ ಥಟ್ಟನೆ ಎಲ್ಲರಿಗೂ ಅರ್ಥವಾಗುತ್ತದೆ. ಏಕೆಂದರೆ, ದೇವರ ಪೋಟೋಗಳೆಂದರೆ, ಅವು ಸಾಮಾನ್ಯವಲ್ಲ. ಪುರಾಣ ಪುಣ್ಯ ಕಥೆಗಳನ್ನು ಮೈವೆತ್ತಿಕೊಂಡಿರುತ್ತವೆ. ಪವಾಡ, ಅವತಾರ, ಪ್ರಭಾವದ ಪಾತ್ರಗಳಿಂದ ಇನ್ನಿಲ್ಲದ ಭಕ್ತಿ-ಭಾವನೆಗಳನ್ನು ಮೂಡಿಸುತ್ತವೆ. ಆದರೆ, ಇಂಥ ಧಾರ್ಮಿಕ ಮಹತ್ವ ಫೋಟೋಗಳಿಗೆ ಬಹುತೇಕ ಕಡೆ ಅವಮಾನವೂ ಆಗುತ್ತದೆ.
ಹೇಗೆಂದರೆ, ವರ್ಷಗಳ ಕಾಲ ಪೂಜಿಸಿ ಮುಕ್ಕಾದ ಪೋಟೋಗಳನ್ನು, ಒಡೆದು ಹಾಳಾದ ಫೋಟೋಗಳನ್ನು ಕೆಲ ಭಕ್ತಮಹಾಶಯರು ಮನಬಂದಂತೆ ವಿಲೇವಾರಿ ಮಾಡುತ್ತಾರೆ. ಪರಿಣಾಮ ಅನ್ಯರ ದೈವಿಕ ಭಾವನೆಗೆ ಈ ನಡೆ ಧಕ್ಕೆ ತಂದರೆ, ಪರಿಸರ, ಪ್ರಾಣಿ-ಪಕ್ಷಿಗಳ ಜೀವನಕ್ಕೂ ನೇರವಾಗಿ ಸಮಸ್ಯೆ ತಂದೊಡ್ಡುತ್ತದೆ.ಎಷ್ಟೋ ಕಡೆಗಳ ಬೀದಿಬದಿ, ಉದ್ಯಾನವನ, ಗಿಡ, ಮರ, ಖಾಲಿ ಜಾಗ, ಹುತ್ತ, ಆಲದ ಮರ, ಬನ್ನಿಮರ, ನಾಗರ ಕಟ್ಟೆ ಸೇರಿದಂತೆ ಅನೇಕ ಕಡೆಗೆ ದೇವರ ಫೋಟೋಗಳು ತಂದಿಟ್ಟ, ಬಿಸಾಡಿರುವುದು ಕಂಡಿರುತ್ತೇವೆ. ಹೀಗೆ ನಿರ್ಲಕ್ಷ್ಯದಿಂದ ಬಿಸಾಡಿದ ದೇವರ ಚಿತ್ರಗಳಿರುವ ಫೋಟೋಗಳಿಗೆ ಸೂಕ್ತ ರೀತಿಯಲ್ಲಿ ಮುಕ್ತಿ ಕೊಡುವ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ನಗರದ ಡಿಸಿಎಂ ಲೇಔಟ್‌ನ ಶ್ರೀ ವಾಸವಿ ಯುವಜನ ಸಂಘ ಮುಂದಾಗಿದೆ.
ಮರಗಳ ಬುಡಗಳೇ ಬೇಕು:ಮನೆ, ಅಂಗಡಿಗಳಲ್ಲಿ ಗಾಜು ಒಡೆದ, ಚಿತ್ರವು ಹರಿದ ಅಥವಾ ನೀರು-ಎಣ್ಣೆಯಿಂದ ಹಾಳಾದ ದೇವರ ಫೋಟೋಗಳನ್ನು ಬಹುತೇಕ ಜನರು ಕಸದ ಜೊತೆ ಬಿಸಾಡುವುದಿಲ್ಲ. ಬದಲಿಗೆ ಬೇವು, ಆಲ, ಅರಳಿ ಮರಗಳ ಬುಡದ ಬಳಿ ತಂದಿಡುತ್ತಾರೆ. ಗಾಜು, ಮೊಳೆಗಳಿಂದ ತಯಾರಿಸುವ ಇಂಥ ಫೋಟೋಗಳು ಪರಿಸರಕ್ಕೆ, ಜನ-ಜಾನುವಾರುಗಳ ನೆಮ್ಮದಿಗೆ ಮಾರಕ ಎಂಬುದು ಅವರ ತಿಳಿಯುವುದೇ ಇಲ್ಲ. ಇದರ ಪರಿಣಾಮ ಇಂದಿಗೂ ಜಿಲ್ಲೆ ಸೇರಿದಂತೆ ಬಹುತೇಕ ಕಡೆಗಳಲ್ಲಿ ಬೇಡವಾದ ದೇವರ ಪೋಟೋಗಳನ್ನು ಕಂಡ ಕಂಡ ಮರಗಳ ಬುಡದಲ್ಲಿ ತಂದಿಟ್ಟು ಕೈ ಮುಗಿದು ಹೋಗಿಬಿಡುತ್ತಾರೆ.
ಕೆಲ ಭಕ್ತರ ಈ ರೀತಿಯ ನಡೆಯನ್ನು ಸಾಮಾಜಿಕವಾಗಿ ಸರಿಪಡಿಸಲು ಡಿಸಿಎಂ ಲೇಔಟ್‌ನಲ್ಲಿರುವ ಶ್ರೀ ವಾಸವಿ ಯುವಜನ ಸಂಘ ವಿಭಿನ್ನವಾಗಿ ಚಿಂತಿಸಿ, ಪರಿಸರ ಕಾಳಜಿ ಮೆರೆಯಲು ಮುಂದಾಗಿದೆ. ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಸಮಯ ಬಿಡುವು ಮಾಡಿಕೊಂಡು ಬೀದಿಬದಿ, ಉದ್ಯಾನವನ, ಗಿಡ, ಮರ, ಖಾಲಿ ಜಾಗ, ಹುತ್ತ, ಆಲದ ಮರ, ಬನ್ನಿಮರ, ನಾಗರ ಕಟ್ಟೆ ಸೇರಿದಂತೆ ಇತರೆಡೆ ಜನರು ವಿಲೇವಾರಿ ಮಾಡಿದ ದೇವರ ಹಳೇಯ ಫೋಟೋಗಳನ್ನು ಒಂದೆಡೆ ರಾಶಿ ಹಾಕುತ್ತಿದ್ದಾರೆ. ಇದರ ಉದ್ದೇಶ ದೇವರ ಇಂಥ ಪೋಟೋಗಳನ್ನು ಸರಿಯಾದ ರೀತಿಯಲ್ಲಿ ಮಣ್ಣಿಗೆ ಸೇರಿಸುವುದಾಗಿದೆ.ವಿಲೇವಾರಿ ಹೇಗೆ?:
ಸಂಗ್ರಹಿಸಿದ ದೇವರ ಫೋಟೋಗಳ ಫ್ರೇಮ್, ಗಾಜು, ರಟ್ಟು, ಮೊಳೆಗಳನ್ನು ಬೇರೆ ಬೇರೆ ಮಾಡಲಾಗುತ್ತದೆ. ದೇವರ ಫೋಟೋಗಳನ್ನು ಗುಂಡಿ ತೆಗೆದು ಮುಚ್ಚಿ, ಅದರ ಮೇಲೆ ಗಿಡ ನೆಡುವ ಕಾರ್ಯ ಮಾಡಲಾಗುತ್ತದೆ. ಇನ್ನು ಮರದ/ಪ್ಲಾಸ್ಟಿಕ್/ಫೈಬರ್ ಫ್ರೇಮುಗಳು, ಮೊಳೆ, ಗಾಜು, ತಂತಿ, ಪ್ಲಾಸ್ಟಿಕ್, ರಟ್ಟುಗಳನ್ನು ಸಹ ಬೇರ್ಪಡಿಸಿ, ಮಹಾನಗರ ಪಾಲಿಕೆಗೆ ನೀಡುವ ಮೂಲಕ ಪರಿಸರಭಕ್ತಿ ಮೆರೆಯುತ್ತಿದ್ದಾರೆ.ಜನರು ಬಹಳ ವರ್ಷಗಳಿಂದ ಮನೆಯಲ್ಲಿ ದೇವರ ಫೋಟೋಗಳನ್ನಿಟ್ಟು ಪೂಜೆ ಸಲ್ಲಿಸುತ್ತಾರೆ. ಗಾಜು ಒಡೆದ, ಚಿತ್ರ ಮುಕ್ಕಾದ ತಕ್ಷಣ ಆ ಫೋಟೋವನ್ನು ಖಾಲಿ ಪ್ರದೇಶಗಳು, ಮರಗಳ ಬುಡಗಳ ಬಳಿ ತಂದಿಟ್ಟು ಹೋಗುತ್ತಾರೆ. ಇದರಿಂದ ಪರಿಸರ ಹಾಳಾಗುತ್ತದೆ. ಶ್ವಾನಗಳು ಮೂತ್ರ ವಿಸರ್ಜನೆ ಮಾಡುತ್ತವೆ. ಇದರಿಂದ ಭಕ್ತರ ಮನಸು ಸಹ ಕಲುಷಿತವಾಗುತ್ತದೆ. ಆದ್ದರಿಂದ ಸಾರ್ವಜನಿಕರು ಮುಕ್ಕಾದ ದೇವರ ಫೋಟೋಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು. ಜನರ ಈ ನಡೆಯನ್ನು ತಡೆಯುವ ಸಲುವಾಗಿ ಮುಂದಿನ ದಿನಗಳಲ್ಲಿ ಸಂಘದಿಂದ ನಿಗದಿತ ಮೊಬೈಲ್ ಸಂಖ್ಯೆಯನ್ನು ನೀಡಲಾಗುವುದು. ಸಾರ್ವಜನಿಕರು ಮುಕ್ಕಾದ ಫೋಟೋಗಳನ್ನು ನಂಬರಿಗೆ ಸಂಪರ್ಕಿಸಿದರೆ, ಮುಕ್ಕಾದ ಫೋಟೋಗಳನ್ನು ಸಂಗ್ರಹಿಸುವ ಯೋಜನೆ ನಮ್ಮ ಮುಂದಿದೆ ಎಂದು ಸದಸ್ಯರು ತಿಳಿಸುತ್ತಾರೆ.
28 ವರ್ಷಗಳಿಂದ ಸಮಾಜ ಸೇವೆ:ಡಿಸಿಎಂ ಲೇಔಟ್‌ನ ಶ್ರೀ ವಾಸವಿ ಯುವಜನ ಸಂಘವು 28 ವರ್ಷಗಳಿಂದ ವಿವಿಧ ರೀತಿಯಲ್ಲಿ ಸಮಾಜ ಸೇವೆ ಮಾಡುತ್ತಿದೆ. ಹಲವಾರು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಕೋವಿಡ್ ಸಂದರ್ಭ ದಿನಸಿ ಕಿಟ್ ವಿತರಣೆ, ಆಹಾರ ಪೊಟ್ಟಣ ವಿತರಣೆ, ಜಾತ್ರೆಗಳ ಸಂದರ್ಭ ಉಪಾಹಾರ, ಕುಡಿಯುವ ನೀರು ವಿತರಣೆ, ಸಂಕಷ್ಟದಲ್ಲಿರುವ ಬಡವರಿಗೆ ನೆರವು, ಉದ್ಯಾನವನಗಳ ಸ್ವಚ್ಛತೆ, ಪರಿಸರಸ್ನೇಹಿ ಗಿಡ-ಮರಗಳನ್ನು ನೆಡುವುದು ಸೇರಿದಂತೆ ಹಲವಾರು ಸೇವಾ ಕಾರ್ಯಗಳನ್ನು ಮಾಡಲಾಗುತ್ತಿದೆ ಎನ್ನುತ್ತಾರೆ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು.
ಮುಕ್ಕಾದ ಫೋಟೋಗಳ ಸಂಗ್ರಹಿಸುವ ಕಾರ್ಯಕ್ಕೆ ಸಂಘದ ಅಧ್ಯಕ್ಷರು, ನಿಕಟಪೂರ್ವ ಅಧ್ಯಕ್ಷರು, ಕಾರ್ಯದರ್ಶಿ, ಇನ್ನಿತರ ಪದಾಧಿಕಾರಿಗಳು, ಸದಸ್ಯರು ಕೈ ಜೋಡಿಸಿದ್ದಾರೆ. ಇಂತಹ ಸೇವಾ ಕಾರ್ಯಕ್ಕೆ ಹಲವಾರು ಸಂಘ-ಸಂಸ್ಥೆಗಳು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.