ಶಿವನಿಯಲ್ಲಿ‌ ವಾಸ್ಕೋ ಡ ಗಾಮಾ ಎಕ್ಸ್‌ಪ್ರೆಸ್ ಹೆಚ್ಚುವರಿ ನಿಲುಗಡೆ

| Published : Nov 04 2025, 01:15 AM IST

ಶಿವನಿಯಲ್ಲಿ‌ ವಾಸ್ಕೋ ಡ ಗಾಮಾ ಎಕ್ಸ್‌ಪ್ರೆಸ್ ಹೆಚ್ಚುವರಿ ನಿಲುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಯಶವಂತಪುರ-ವಾಸ್ಕೋ ಡ ಗಾಮಾ ಎಕ್ಸ್‌ಪ್ರೆಸ್ ರೈಲನ್ನು ಶಿವನಿ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆ ಮಾಡುವುದರಿಂದ ಅಜ್ಜಂಪುರ ಬಳಿಯ ಶಿವನಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಪ್ರಯಾಣಿಕರು ನೇರ ಸಂಪರ್ಕವನ್ನು ಪಡೆಯಲಿದ್ದಾರೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.

ನಿಲುಗಡೆಗೆ ಹಸಿರು ನಿಶಾನೆ ತೋರಿದ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಯಶವಂತಪುರ-ವಾಸ್ಕೋ ಡ ಗಾಮಾ ಎಕ್ಸ್‌ಪ್ರೆಸ್ ರೈಲನ್ನು ಶಿವನಿ ರೈಲು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆ ಮಾಡುವುದರಿಂದ ಅಜ್ಜಂಪುರ ಬಳಿಯ ಶಿವನಿ ಹಾಗೂ ಸುತ್ತಮುತ್ತಲಿನ ಪ್ರದೇಶದ ಪ್ರಯಾಣಿಕರು ನೇರ ಸಂಪರ್ಕವನ್ನು ಪಡೆಯಲಿದ್ದಾರೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.

ಶಿವನಿ ನಿಲ್ದಾಣದಲ್ಲಿ ಯಶವಂತಪುರ-ವಾಸ್ಕೋ ಡ ಗಾಮಾ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 17309 ಹೆಚ್ಚುವರಿ ನಿಲುಗಡೆಗಾಗಿ ಹಸಿರು ನಿಶಾನೆ ತೋರಿಸಿದ ಸಂದರ್ಭದಲ್ಲಿ ಮಾತನಾಡಿದರು. ಈ ಭಾಗದ ಜನರು ಈ ರೈಲಿನ ಮೂಲಕ ಬೆಂಗಳೂರು, ಹುಬ್ಬಳ್ಳಿ, ಗೋವಾ ಮುಂತಾದ ಪ್ರಮುಖ ಸ್ಥಳಗಳಿಗೆ ಸುಲಭ ಪ್ರಯಾಣ ಮಾಡಲು ಸಾಧ್ಯವಾಗಲಿದೆ. ಇದರಿಂದ ಪ್ರಾದೇಶಿಕ ಸಂಚಾರ ಮತ್ತು ಸಂಪರ್ಕತೆ ಸುಧಾರಣೆ ಆಗಲಿದೆ ಎಂದು ಅಭಿಪ್ರಾಯ ಪಟ್ಟರು.

ಇದೇ ವೇಳೆ ಬೀರೂರು ರೈಲು ನಿಲ್ದಾಣವನ್ನು ಪರಿಶೀಲಿಸಿ, ಬೀರೂರು ಮತ್ತು ತಿಪಟೂರು ರೈಲು ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗಳು ವೇಗವಾಗಿ ನಡೆಯುತ್ತಿವೆ ಎಂದ ಅವರು, 97% ವಿದ್ಯುದೀಕರಣ ಕಾರ್ಯ ಪೂರ್ಣಗೊಂಡಿದ್ದು, ಉಳಿದ ಶೇ. 100 ರಷ್ಟು ಕಾರ್ಯವನ್ನು 2025ರ ಡಿಸೆಂಬರ್ ಒಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದರು. 644 ಲೆವೆಲ್ ಕ್ರಾಸಿಂಗ್ ಬದಲಿಗೆ ರಸ್ತೆ ಮೇಲ್ಲೇತುವೆ ಮತ್ತು ಕೆಳಸೇತುವೆಗಳನ್ನು ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಅಮೃತ ಭಾರತ ಯೋಜನೆಯಡಿ 61ಕ್ಕೂ ಹೆಚ್ಚುಸ್ಟೇಷನ್‌ ಕಾಮಗಾರಿಗಳು ನಡೆಯುತ್ತಿವೆ ಎಂದು ತಿಳಿಸಿದರು. ಇವು ಪ್ರಮುಖವಾಗಿ ಪ್ರಯಾಣಿಕರ ಸೌಲಭ್ಯಗಳನ್ನು ಹಾಗೂ ಮೂಲಸೌಕರ್ಯವನ್ನು ಪರಿವರ್ತಿಸುವ ಉದ್ದೇಶ ಹೊಂದಿವೆ.

ಹಿಂದಿನ ಸರ್ಕಾರದಿಂದ ರೈಲ್ವೆ ಇಲಾಖೆಗೆ ₹ 830 ಕೋಟಿ ಅನುದಾನ ದೊರೆಯುತ್ತಿತ್ತು. ಆದರೆ ಮೋದಿ ಸರ್ಕಾರ ₹7664 ಕೋಟಿ ನೀಡಿದೆ. ಹೊಸ ರೈಲುಗಳಿಗೆ 2009 ರಿಂದ 2016ರವರೆಗೆ ₹70 ಸಾವಿರ ಕೋಟಿಗಳನ್ನು ಮಂಜೂರು ಮಾಡಿದೆ. ತುಮಕೂರು, ಚಿತ್ರದುರ್ಗ, ದಾವಣಗೆರೆ, ಬೆಳಗಾವಿ ಸೇರಿದಂತೆ ಹಲವು ನಿಲ್ದಾಣಗಳ ಹೊಸ ಸಂಪರ್ಕಕ್ಕೆ ವೇಗ ದೊರೆತಿದೆ ಎಂದರು.

ಚಿಕ್ಕಮಗಳೂರು- ಹಾಸನ- ಬೇಲೂರು ಇನ್ನೂ ಒಂದು ವರ್ಷದಲ್ಲಿ ಪ್ರಾರಂಭವಾಗಲಿದೆ. ಚಿಕ್ಕಜಜೂರು-ಬಳ್ಳಾರಿ ದ್ವಿಪಥ (185 ಕಿ.ಮೀ.) ಕಾಮಗಾರಿ ₹3340 ಕೋಟಿಗಳ ವೆಚ್ಚದಲ್ಲಿ ಕಾರ್ಯಗತಗೊಳ್ಳುತ್ತಿದೆ ಎಂದು ತಿಳಿಸಿದರು.

ವಿಕಲಚೇತನ ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ನೀಡಲು ಮತ್ತು ಎಲ್ಲಾ ಪ್ರಯಾಣಿಕರಿಗೆ ಸುಧಾರಿತ ಸೌಲಭ್ಯಗಳನ್ನು ಒದಗಿಸಲು ಭಾರತೀಯ ರೈಲ್ವೆ ಬದ್ಧವಾಗಿದೆ ಎಂದು ಪ್ರತಿಪಾದಿಸಿದರು. "ಒನ್ ಸ್ಟೇಷನ್, ಒನ್ ಪ್ರಾಡಕ್ಟ್ " ಯೋಜನೆಯಡಿ 89 ರೈಲು ನಿಲ್ದಾಣಗಳಲ್ಲಿ ಸ್ಥಳೀಯ ಕಲೆಗಾರರು ಮತ್ತು ಉತ್ಪಾದಕರಿಗೆ ಪ್ರೋತ್ಸಾಹ ನೀಡಲು ಮಳಿಗೆಗಳನ್ನು ತೆರೆಯಲಾಗಿದೆ ಎಂದು ವಿವರಿಸಿದರು.

ಭದ್ರತೆಯೇ ಭಾರತೀಯ ರೈಲ್ವೆಯ ಅತಿ ಮುಖ್ಯ ಆದ್ಯತೆಯಾಗಿದೆ ಎಂದು ಪುನರುಚ್ಚರಿಸಿದ ಅವರು ಇದಕ್ಕಾಗಿ ಸುರಕ್ಷತೆಗೆ ಸಿ.ಸಿ ಕ್ಯಾಮೆರಾ ಹಾಕಿಸಲಾಗುತ್ತದೆ. ದೇಶೀಯವಾಗಿ ಅಭಿವೃದ್ಧಿಪಡಿಸಲಾದ ''''''''ಕವಚ್'''''''' - ಸ್ವಯಂ ಚಾಲಿತ ರೈಲು ಸಂರಕ್ಷಣಾ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದ್ದು, ಸುರಕ್ಷಿತ ರೈಲು ಸಂಚಾರಕ್ಕಾಗಿ ಇದು ಸಹಾಯಕವಾಗಲಿದೆ ಎಂದು ಹೇಳಿದರು.

ಈ ಸಮಾರಂಭದಲ್ಲಿ ಸಂಸದರು ಕೋಟ ಶ್ರೀನಿವಾಸ್ ಪೂಜಾರಿ, ತರಿಕೆರೆ ಶಾಸಕ ಜಿ.ಎಚ್ ಶ್ರೀನಿವಾಸ್, ಬಿಜೆಪಿ ಮುಖಂಡ ಸಿ.ಎಂ ರಾಜಪ್ಪ ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ರು, ಸವಿತಾ ಬಿಜೆಪಿ ಮಹಿಳಾ ಅಧ್ಯಕ್ಷ ರೈಲ್ವೇ ಇಲಾಖೆ ಅಧಿಕಾರಿ ಮುದಿತ್ ಮಿತ್ತಲ್ ಶಂಭೈನೂರಾ ಆನಂದ್ ರೈಲ್ವೆ ಅಧಿಕಾರಿಗಳು ಪೊಲೀಸ್ ಸಿಬ್ಬಂದಿ ಶಿವನಿ ಗ್ರಾಮದ ನಾಗರಿಕರು ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.