ವಾಸುದೇವ ಸಾಮಗರ ಬದುಕು, ಬರಹಗಳು ಯಕ್ಷಗಾನಸಕ್ತರಿಗೆ ದಾರಿದೀಪ: ಡಾ.ತಲ್ಲೂರು

| Published : Dec 23 2024, 01:02 AM IST

ವಾಸುದೇವ ಸಾಮಗರ ಬದುಕು, ಬರಹಗಳು ಯಕ್ಷಗಾನಸಕ್ತರಿಗೆ ದಾರಿದೀಪ: ಡಾ.ತಲ್ಲೂರು
Share this Article
  • FB
  • TW
  • Linkdin
  • Email

ಸಾರಾಂಶ

ಕುಂದಾಪುರ ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಯಶಸ್ವಿ ಕಲಾವೃಂದ ಕೋಮೆ ಹಾಗೂ ಸಂಯಮ ಕೋಟೇಶ್ವರ ಸಹಕಾರದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ದಿ.ಮಲ್ಪೆ ವಾಸುದೇವ ಸಾಮಗ ಅವರ ೪ನೇ ಸಂಸ್ಮರಣಾ ಕಾರ್ಯಕ್ರಮ ಹಾಗೂ ವಾಸುದೇವ ಸಾಮಗ ಸಂಸ್ಮರಣಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಯಕ್ಷಗಾನಕ್ಕೆ ಅತ್ಯಂತ ಮಹತ್ತರ ಕೊಡುಗೆಗಳನ್ನು ನೀಡಿದ ಮೇರು ಕಲಾವಿದ ದಿ.ಮಲ್ಪೆ ವಾಸುದೇವ ಸಾಮಗ ಅವರ ಬದುಕು, ಅವರು ರಚಿಸಿದ ಯಕ್ಷಗಾನ ಕೃತಿಗಳು ಯಕ್ಷಗಾನಾಸಕ್ತರಿಗೆ ದಾರಿ ದೀಪಗಳಾಗಿವೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.ಅವರು ಶನಿವಾರ ಕುಂದಾಪುರ ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಯಶಸ್ವಿ ಕಲಾವೃಂದ ಕೋಮೆ ಹಾಗೂ ಸಂಯಮ ಕೋಟೇಶ್ವರ ಸಹಕಾರದಲ್ಲಿ ನಡೆದ ಖ್ಯಾತ ಯಕ್ಷಗಾನ ಕಲಾವಿದ ದಿ.ಮಲ್ಪೆ ವಾಸುದೇವ ಸಾಮಗ ಅವರ ೪ನೇ ಸಂಸ್ಮರಣಾ ಕಾರ್ಯಕ್ರಮ ಹಾಗೂ ವಾಸುದೇವ ಸಾಮಗ ಸಂಸ್ಮರಣಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಮಾತನಾಡಿ, ವಾಸುದೇವ ಸಾಮಗ ಅವರು ಯಕ್ಷಗಾನ ಹಾಗೂ ಯಕ್ಷಗಾನ ಕಲೆಯ ಬಗ್ಗೆ ಅತೀ ಕಾಳಜಿ ಹೊಂದಿದ್ದವರು. ಕಲಾರಂಗ ಹಮ್ಮಿಕೊಂಡ ಯಕ್ಷಗಾನ ಕಲಾವಿದರ ಸಮಾವೇಶಕ್ಕೆ ತಪ್ಪದೇ ಹಾಜರಾಗಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಸ್ವಾಭಿಮಾನಿಯಾಗಿ ಬದುಕಿದ್ದವರು. ಸಂಘಸಂಸ್ಥೆಗಳಿಗೂ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಿದ್ದಾರೆ. ಹರಿಕಥೆಯನ್ನು ಉತ್ತಮವಾಗಿ ನಡೆಸಿಕೊಡುತ್ತಿದ್ದವರು. ಒಬ್ಬ ಶ್ರೇಷ್ಠ ಸೃಜನಶೀಲ ಕಲಾವಿದರಾಗಿದ್ದರು ಎಂದರು.ವಾಸುದೇವ ಸಾಮಗ ಅವರ ಮಗ ಪ್ರದೀಪ್ ಸಾಮಗ ಮಾತನಾಡಿ, ಯಕ್ಷಗಾನ ಕಲಾವಿದರಾಗಿ ವಾಸುದೇವ ಸಾಮಗ ಅವರು ಯಕ್ಷಗಾನಕ್ಕೆ ಸಲ್ಲಿಸಿರುವ ಕೊಡುಗೆಯನ್ನು ಪ್ರಸ್ತಾಪಿಸಿದರು. ಕೊನೆ ಘಳಿಗೆಯಲ್ಲೂ ಅವರು ಬರೆಯುತ್ತಿದ್ದ, ಇದೀಗ ಪುಸ್ತಕರೂಪದಲ್ಲಿ ಪ್ರಕಟಗೊಂಡಿರುವ ‘ಯಕ್ಷ ರಸಾಯನ’ ಕೃತಿ ಪೂರ್ಣವಾಗವಾಗದಿರುವ ಬಗ್ಗೆ ಚಿಂತೆ ವ್ಯಕ್ತ ಪಡಿಸಿದ್ದರು. ಇದೀಗ ಅವರ ೪ನೇ ಸಂಸ್ಮರಣೆ ಕಾರ್ಯಕ್ರಮದ ಪೂರ್ವದಲ್ಲಿ ಕೃತಿಯನ್ನು ಪ್ರಕಟಿಸಿ ಲೋಕಾರ್ಪಣೆ ಮಾಡಿದ್ದೇವೆ ಎಂದರು.ಕಾರ್ಯಕ್ರಮದಲ್ಲಿ ದಿ. ವಾಸುದೇವ ಸಾಮಗ ಅವರ ಒಡನಾಡಿಯಾಗಿದ್ದ ಖ್ಯಾತ ಸ್ತ್ರೀ ವೇಷಧಾರಿ ಎಂ.ಎ.ನಾಯ್ಕ್ ಅವರಿಗೆ ವಾಸುದೇವ ಸಾಮಗ ಸಂಸ್ಮರಣಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ, ಪತ್ರಕರ್ತ ಬಾ.ಸಾಮಗ, ಮೇಳದ ಯಜಮಾನ ಪಿ.ಕಿಶನ್ ಹೆಗ್ಡೆ, ಅರ್ಥಧಾರಿ ಉಜಿರೆ ಅಶೋಕ್ ಭಟ್, ಯಶಸ್ವಿ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ, ಉದ್ಯಮಿ ಡಾ.ವೈಕುಂಠ ಹೇರ್ಳೆ, ಯಶಸ್ವಿ ಕಲಾವೃಂದದ ವೆಂಕಟೇಶ್ ವೈದ್ಯ, ಮೀರಾ ವಾಸುದೇವ ಸಾಮಗ ಮತ್ತಿತರರು ಉಪಸ್ಥಿತರಿದ್ದರು.