ವಿದ್ಯಾರ್ಥಿಗಳ ಬೆಳವಣಿಗೆಗೆ ಶಿಕ್ಷಕರ, ಪೋಷಕರ ಪಾತ್ರ ಮಹತ್ವದ್ದು: ವಾಸುದೇವಭಟ್

| Published : Jun 04 2024, 12:31 AM IST

ವಿದ್ಯಾರ್ಥಿಗಳ ಬೆಳವಣಿಗೆಗೆ ಶಿಕ್ಷಕರ, ಪೋಷಕರ ಪಾತ್ರ ಮಹತ್ವದ್ದು: ವಾಸುದೇವಭಟ್
Share this Article
  • FB
  • TW
  • Linkdin
  • Email

ಸಾರಾಂಶ

ವ್ಯಕ್ತಿತ್ವ ನಿರ್ಮಾಣ, ಸಂಸ್ಕಾರಯುತ ಶಿಕ್ಷಣ ನೀಡುವ ಮೂಲಕ ಸಮಾಜಕ್ಕೆ ಸತ್ಪ್ರಜೆಗಳನ್ನು ನೀಡುವುದೇ ನಮ್ಮ ಶಿಕ್ಷಣ ಸಂಸ್ಥೆಯ ಧ್ಯೇಯವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಕರ ಮತ್ತು ಪೋಷಕರ ಪಾತ್ರ ಮಹತ್ವದ್ದಾಗಿದೆ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಆರ್. ವಾಸುದೇವ ಭಟ್ ಹೇಳಿದರು.

ನಗರದ ವಿಜಯವಿಠಲ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳ ಪೋಷಕರಿಗೆ ನಡೆದ ಪರಿಚಯ ಕಾರ್ಯಕ್ರಮವನ್ನು ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ಹಾಗೂ ಪೋಷಕರೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು.

ವ್ಯಕ್ತಿತ್ವ ನಿರ್ಮಾಣ, ಸಂಸ್ಕಾರಯುತ ಶಿಕ್ಷಣ ನೀಡುವ ಮೂಲಕ ಸಮಾಜಕ್ಕೆ ಸತ್ಪ್ರಜೆಗಳನ್ನು ನೀಡುವುದೇ ನಮ್ಮ ಶಿಕ್ಷಣ ಸಂಸ್ಥೆಯ ಧ್ಯೇಯವಾಗಿದೆ. ಪರೀಕ್ಷೆಯ ಸಂದರ್ಭದಲ್ಲಿ ಕೇವಲ ಅಂಕ ಗಳಿಸುವುದೇ ವಿದ್ಯಾರ್ಜನೆಯಾಗದೆ ಮೌಲ್ಯಯುತ ಕಲಿಕೆ ನಿರಂತರವಾಗಿರಬೇಕು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಒಳ್ಳೆಯ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲೂ ಭಾಗವಹಿಸುವಂತೆ ಪೋಷಕರು ಪ್ರೋತ್ಸಾಹಿಸಬೇಕು. ಇದುವರೆಗಿನ ಉತ್ತಮ ಫಲಿತಾಂಶಕ್ಕೆ ಸಂಸ್ಥೆಯ ಸಿಬ್ಬಂದಿಯ ಪ್ರಾಮಾಣಿಕ ಪರಿಶ್ರಮವೇ ಕಾರಣ ಎಂದು ಹೇಳಿದರು.

ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ಮಾತನಾಡಿ, ಕಾಲೇಜಿನ ನೀತಿ, ನಿಬಂಧನೆ, ನಿಯಮಾವಳಿಗಳನ್ನು ತಿಳಿಸುತ್ತಾ ಒಬ್ಬ ವಿದ್ಯಾರ್ಥಿಯ ಯಶಸ್ಸಿನ ಹಿಂದೆ ಶಿಕ್ಷಕರ ಮತ್ತು ಪಾಲಕರ ಜವಾಬ್ದಾರಿಯನ್ನು ಪೋಷಕರ ಮನಮುಟ್ಟುವಂತೆ ತಿಳಿಸುತ್ತಾ ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗದವರ ಪರಿಚಯವನ್ನು ಮಾಡಿಕೊಟ್ಟರು. ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಸಮಯಕ್ಕೆ ಪ್ರಾಮುಖ್ಯತೆಯನ್ನು ನೀಡಿದರೆ ಉತ್ತಮ ಶಿಕ್ಷಣ ಗಳಿಸಲು ಸಾಧ್ಯ ಎಂದು ತಿಳಿಸಿದರು.

ವಿದ್ಯಾರ್ಥಿಗಳಾದ ಹರಿದ್ವರ್ಣ ಜೋಯೀಸ್, ಶ್ರೀವರ, ಎಂ. ಅನಿರುದ್ಧ ಅವರ ವೇದಘೋಷಗಳೊಂದಿಗೆ ಕಾರ್ಯಕ್ರಮ ಆರಂಭವಾಯಿತು.

ಕೆ. ಭುವನ, ಎಂ. ಪ್ರಣತಿ ಪ್ರಾರ್ಥಿಸಿದರು. ಆಂಗ್ಲಭಾಷಾ ಉಪನ್ಯಾಸಕಿ ಮಯೂರಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ

ಆರ್. ವೈಶಾಲಿ ಸ್ವಾಗತಿಸಿದರು, ಜೀವಶಾಸ್ತ್ರ ಉಪನ್ಯಾಸಕಿ ತನುಜ ಐ. ಹೆಗಡೆ ವಂದಿಸಿದರು.