ಮಂಡ್ಯದಲ್ಲಿ ವಾಟಾಳ್‌ ನಾಗರಾಜರಿಂದ ಈಡುಗಾಯಿ ಒಡೆವ ಚಳವಳಿ

| Published : Apr 27 2025, 01:30 AM IST

ಸಾರಾಂಶ

ಪಹಲ್ಗಾಮ್‌ನಲ್ಲಿ ಹಿಂದೂ ಪ್ರವಾಸಿಗರನ್ನು ಉಗ್ರಗಾಮಿಗಳು ಬಹಳ ನಿರ್ಧಯವಾಗಿ ಕೊಂದು ಹಾಕಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಕೃತ್ಯ ನಡೆಯದ ರೀತಿ ದೇಶದ ಉದ್ದಗಲಕ್ಕೂ ನಿಲ್ಲಬೇಕಾದ ಸ್ಥಿತಿ ಬಂದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಎಂಇಎಸ್ ನಿಷೇಧ, ಹಿಂದಿ ಹೇರಿಕೆ, ಪರಭಾಷಿಕರ ದೌರ್ಜನ್ಯ, ಉತ್ತರ ಕರ್ನಾಟಕ, ಗಡಿನಾಡು ಸೇರಿದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಒತ್ತಾಯಿಸಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಅವರು ಈಡುಗಾಯಿ ಒಡೆಯುವ ಚಳವಳಿಗೆ ಚಾಲನೆ ನೀಡಿದರು.

ನಗರದ ಜೆ.ಸಿ. ವೃತ್ತದಲ್ಲಿ ಈಡುಗಾಯಿ ಒಡೆದು ಚಳವಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಬೆಳಗಾವಿಯಲ್ಲಿ ಎಂಇಎಸ್‌ನವರ ಅಟ್ಟಹಾಸ ಮಿತಿ ಮೀರಿದೆ, ಬೆಂಗಳೂರಿನಲ್ಲಿ ಪರಭಾಷಿಕರ ದೌರ್ಜನ್ಯ ಎಲ್ಲೆ ಮೀರಿದೆ. ಇದನ್ನು ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

ಬೆಳಗಾವಿಯಲ್ಲಿ ಅಧಿವೇಶನ ನಡೆದರೂ ಪ್ರಯೋಜನವಾಗಿಲ್ಲ. 1956ರಲ್ಲಿ ಕರ್ನಾಟಕ ಏಕೀಕರಣ ಸಂದರ್ಭದಿಂದಲೂ ಹೋರಾಟ ಮಾಡಲಾಗಿದೆ. ಆದರೂ ಅಂದಿನಿಂದ ಎಲ್ಲ ಬೇಡಿಕೆಗಳು ಬೇಡಿಕೆಗಳಾಗಿಯೇ ಉಳಿದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಂಇಎಸ್ ರಾಜ್ಯದ ಗಡಿ ನಾಡಿಗೆ ಮಾರಕ. ಎಂಇಎಸ್ ನಿಷೇಧಕ್ಕೆ ಹಲವು ವರ್ಷಗಳಿಂದ ಕನ್ನಡಿಗರು, ಕನ್ನಡ ಪರ ಸಂಘಟನೆಗಳು ಹೋರಾಟ ಮಾಡುತ್ತಿವೆ. ಇಂದಿಗೂ ಅದನ್ನು ಯಾವುದೇ ಸರ್ಕಾರಗಳು ಈಡೇರಿಸಿಲ್ಲ. ಕಳಸಾಬಂಡೂರಿ, ಮೇಕೆದಾಟು ಜಾರಿಯಾಗಿಲ್ಲ, ರಾಜ್ಯದಲ್ಲಿ ಪರಭಾಷಿಗರ ಹಾವಳಿ ಎಲ್ಲೆಡೆ ಹೆಚ್ಚಾಗಿದೆ. ಪರಭಾಷಿಗರಿಂದ ಅಪರಾಧ ಕೃತ್ಯಗಳೂ ಹೆಚ್ಚಾಗಿವೆ. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ಮಾಡಬೇಕು ಎಂದು ಆಗ್ರಹಿಸಿದರು.

ಕರ್ನಾಟಕವು ತಮಿಳರು, ಗುಜರಾತಿಗಳು, ಮಾರ್ವಾಡಿಗಳ ಕೈಯ್ಯಲ್ಲಿದೆಯಾ? ಈ ನಾಡು ಸಂಸ್ಕೃತಿ ಜೊತೆಯಲ್ಲಿಯೇ ಹೋಗಬೇಕು. ಇಲ್ಲದಿದ್ದರೆ ಹೊರ ರಾಜ್ಯದಿಂದ ಬಂದಿರುವ ಪರಭಾಷಿಗರು ನಮ್ಮನ್ನು ಹೊರಹಾಕುತ್ತಾರೆ. ಬೆಳಗಾವಿಯಿಂದ ಚಾಮರಾಜನಗರ, ಮಂಗಳೂರಿನಿಂದ ಕೋಲಾರದ ವರೆಗೆ ನಿರಂತರವಾಗಿ ಹೋರಾಟ ನಡೆಸಬೇಕು ಎಂದು ಕನ್ನಡಿಗರಲ್ಲಿ ಮನವಿ ಮಾಡಿದರು.

ಮರಾಠಿಗರ ದಾಂಧಲೆ ಅತಿಯಾಗಿದೆ. ಮಂಗಳೂರು, ಉಡುಪಿ, ಕರಾವಳಿ ಪ್ರದೇಶವನ್ನು ಕಡೆಗಣಿಸಿದ್ದು, ಬಹಳ ಗಂಭೀರವಾಗಿ ಚಿಂತನೆ ಮಾಡಬೇಕು. ಕಾಸರಗೋಡು ಕರ್ನಾಟಕಕ್ಕೇ ಬರಬೇಕು. ಇದಕ್ಕಾಗಿ ಕನ್ನಡ ಚಳವಳಿ ವಾಟಾಳ್ ಪಕ್ಷ ನಿರಂತರ ಹೋರಾಟ ಮಾಡಲಿದೆ. ತಮಿಳುನಾಡಿಗೆ ಸೇರಿರುವ ಹೊಸೂರು ಹಾಗೂ ತಾಳವಾಡಿ ಕರ್ನಾಟಕಕ್ಕೆ ಸೇರಬೇಕು ಎಂದು ಗಡಿನಾಡು ಚಾಮರಾಜನಗರದ ಗಡಿಯಂಚಿನಲ್ಲಿ ಹೋರಾಟ ಮಾಡಲು ನಿರ್ಧರಿಸಿದ್ದೇವೆ ಎಂದರು.

ಈ ವಿಚಾರವಾಗಿ 50 ವರ್ಷದ ಹಿಂದೆ ಹೋರಾಟ ಮಾಡಿದಾಗ ನನ್ನನ್ನು ಬಂಧನ ಮಾಡಿದ್ದರು ಎಂದರು.

ಹಿಂದಿ ಹೇರಿಕೆಗೆ ವಿರೋಧ:

ಸಮಗ್ರ ಕರ್ನಾಟಕದಲ್ಲಿ ಹಿಂದಿ ಹೇರಿಕೆಯನ್ನು ತೀವ್ರವಾಗಿ ವಿರೋಧಿಸುತ್ತೇವೆ. ಎಲ್ಲೂ ಹಿಂದಿ ಇರಬಾರದು, ಹಿಂದಿ ಹೇರಲೇಬಾರದು. ರಾಜ್ಯಪಾಲರು ಜಂಟಿ ಅಧಿವೇಶನದ ಭಾಷಣದಲ್ಲಿ ಮೂರು ಬಾರಿಯೂ ಹಿಂದಿಯಲ್ಲಿ ಮಾತನಾಡಿದ್ದಾರೆ. ಇದನ್ನು ಯಾವೊಬ್ಬ ಶಾಸಕನೂ ಖಂಡಿಸಿಲ್ಲ. ನಾನಿದ್ದಿದ್ದರೆ ಖಂಡಿತ ಅವಕಾಶ ಕೊಡುತ್ತಿರಲಿಲ್ಲ. ರಾಜ್ಯಪಾಲರನ್ನು ಕಳಕಳಿಯಿಂದ ಕೇಳುತ್ತೇನೆ, ಮುಂದಿನ ಅಧಿವೇಶನದಲ್ಲಿ ಹಿಂದಿಯಲ್ಲಿ ಮಾತನಾಡಬಾರದು. ಯಾರಾದರೂ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಂತ್ರಿಗಳು ಹಿಂದಿ ಭಾಷಣವನ್ನು ವಿರೋಧಿಸಬೇಕು ಎಂದು ಹೇಳಿದರು.

ವಾಟಾಳ್ ಪಕ್ಷ ಬೆಳಗಾವಿ ಉಳಿಸಬೇಕು, ಎಂಇಎಸ್ ನಿಷೇಧ ಮಾಡಬೇಕು, ಗಡಿನಾಡು ಬೆಳಗಾವಿ ಆಗಬೇಕು, ಕನ್ನಡಿಗರಿಗೆ ಉದ್ಯೋಗ ನೀಡಬೇಕು, ಗ್ರೇಟರ್ ಬೆಂಗಳೂರು ಬೇಡ, ಉತ್ತರ ಕರ್ನಾಟಕ, ಚಾಮರಾಜನಗರ, ಕೋಲಾರ ಅಭಿವೃದ್ಧಿಯಾಗಬೇಕು, ಮಹದಾಯಿ, ಕಳಸಾ ಬಂಡೂರಿ ಯೋಜನೆ, ಮೇಕೆದಾಟು ಯೋಜನೆಗಾಗಿ ನಾವು ನಿರಂತರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ದೇಶದ ರಕ್ಷಣೆಗೆ ನಿಲ್ಲಬೇಕು:

ಉಗ್ರಗಾಮಿಗಳು ದೇಶದೊಳಗೆ ನುಗ್ಗಿ ಅಮಾಯಕರನ್ನು ನಿರ್ಧಯವಾಗಿ ಕೊಂದು ಹಾಕುತ್ತಿದ್ದಾರೆ. ಇದನ್ನು ಇಡೀ ದೇಶವೇ ಖಂಡನೆ ಮಾಡುವಂತಹುದ್ದಾಗಿದೆ. ದೇಶ ಮತ್ತು ನಾಡಿನ ರಕ್ಷಣೆ ವಿಚಾರದಲ್ಲಿ ಎಲ್ಲರೂ ಪಕ್ಷ ಬೇಧ ಮರೆತು ಒಟ್ಟಾಗಿ ನಿಲ್ಲಬೇಕು. ಕೇಂದ್ರ ಸರ್ಕಾರದ ಜೊತೆಗೆ ಇಡೀ ದೇಶ ನಿಮ್ಮ ಜೊತೆಯಲ್ಲಿದೆ. ಇಂತಹ ಉಗ್ರರನ್ನು ಸದೆಬಡಿಯಬೇಕು ಎಂದು ಆಗ್ರಹಿಸಿದರು.

ಪಹಲ್ಗಾಮ್‌ನಲ್ಲಿ ಹಿಂದೂ ಪ್ರವಾಸಿಗರನ್ನು ಉಗ್ರಗಾಮಿಗಳು ಬಹಳ ನಿರ್ಧಯವಾಗಿ ಕೊಂದು ಹಾಕಿದ್ದಾರೆ. ಇದನ್ನು ತೀವ್ರವಾಗಿ ಖಂಡಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಕೃತ್ಯ ನಡೆಯದ ರೀತಿ ದೇಶದ ಉದ್ದಗಲಕ್ಕೂ ನಿಲ್ಲಬೇಕಾದ ಸ್ಥಿತಿ ಬಂದಿದೆ. ಮೃತಪಟ್ಟರವರ ಕುಟುಂಬಕ್ಕೆ ಪರಿಹಾರ ನೀಡಿದರೆ ಅವರ ಪ್ರಾಣ ಬರಲ್ಲ. ಅವರನ್ನು ನಂಬಿರುವ ಕುಟುಂಬದ ಜವಾಬ್ದಾರಿಯನ್ನು ಸರ್ಕಾರವೇ ಹೊರಬೇಕು ಎಂದು ಒತ್ತಾಯಿಸಿದರು.

ವಾಟಾಳ್ ಪಕ್ಷದ ಕಾರ್ಯಕರ್ತರಾದ ಪಾರ್ಥಸಾರಥಿ, ನಾರಾಯಣಸ್ವಾಮಿ, ಅಂಬುಜಮ್ಮ, ಅಂಜುಜಾಕ್ಷಿ, ಸ್ಪರ್ಶ, ಮುನಾವರ್, ಜಾಫರ್, ಮುಬಾರಕ್ ಪಾಷ ಸೇರಿದಂತೆ ಹಲವರು ಭಾಗವಹಿಸಿದ್ದರು.