ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ವಿರೋಧಿಸಿ ವಾಟಾಳ್ ಪ್ರತಿಭಟನೆ

| Published : Jul 24 2025, 12:47 AM IST

ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ವಿರೋಧಿಸಿ ವಾಟಾಳ್ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಸಣ್ಣ ವ್ಯಾಪಾರಿಗಳಿಗೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್ ನೀಡಿರುವುದನ್ನು ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಬುಧವಾರ ತಳ್ಳುವ ಗಾಡಿಯಲ್ಲಿ ತರಕಾರಿ, ಬೇಕರಿ ಉತ್ಪನ್ನಗಳ ಅಣಕು ಮಾರಾಟ ಮಾಡಿ ವಿನೂತನ ಪ್ರತಿಭಟನೆ ನಡೆಸಿದರು.

ರಾಮನಗರ: ಸಣ್ಣ ವ್ಯಾಪಾರಿಗಳಿಗೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್ ನೀಡಿರುವುದನ್ನು ಖಂಡಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಬುಧವಾರ ತಳ್ಳುವ ಗಾಡಿಯಲ್ಲಿ ತರಕಾರಿ, ಬೇಕರಿ ಉತ್ಪನ್ನಗಳ ಅಣಕು ಮಾರಾಟ ಮಾಡಿ ವಿನೂತನ ಪ್ರತಿಭಟನೆ ನಡೆಸಿದರು.

ನಗರದ ಐಜೂರು ವೃತ್ತದಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಜಮಾಯಿಸಿದ ವಿವಿಧ ಕನ್ನಡಪರ ಸಂಘಟನೆಯ ಹೋರಾಟಗಾರರು ತಳ್ಳುವ ಗಾಡಿಯಲ್ಲಿ ಹಣ್ಣು, ತರಕಾರಿ, ಬ್ರೆಡ್, ರಸ್ಕ್ ಇನ್ನಿತರ ಉತ್ಪನ್ನಗಳ ಅಣಕು ಮಾರಾಟ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜು, ಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್ ಕಳುಹಿಸುತ್ತಿರುವ ರಾಜ್ಯ ಸರ್ಕಾರ ಈ ಕ್ರಮವನ್ನು ತಕ್ಷಣವೇ ಕೈ ಬಿಡಬೇಕು. ಸಿಎಂ ಸಿದ್ದರಾಮಯ್ಯ ಅವರ ಈ ನಿರ್ಧಾರ ಸರಿಯಿಲ್ಲ. ಸಣ್ಣಪುಟ್ಟ ವ್ಯಾಪಾರಿಗಳ ಮೇಲೆ ರಾಜ್ಯ ಸರ್ಕಾರ ತೆರಿಗೆ ಬ್ರಹ್ಮಾಸ್ತ್ರ ಹೂಡುತ್ತಿದೆ. ವ್ಯಾಪಾರಿಗಳಲ್ಲಿ ಆತಂಕ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಜಿಎಸ್‌ಟಿ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರದ ನಡುವೆ ತಿಕ್ಕಾಟ ನಡೆಯುತ್ತಿದೆ. ಈ ಕಾರಣಕ್ಕೆ ಸಣ್ಣಪುಟ್ಟ ವ್ಯಾಪಾರಸ್ಥರ ಮೇಲೆ ದುಪ್ಪಟ್ಟು ಟ್ಯಾಕ್ಸ್ ಹಾಕಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ತೆರಿಗೆ ಇಲಾಖೆಯನ್ನು ಬಳಸಿಕೊಂಡು ಈ ಮಟ್ಟದಲ್ಲಿ ತೆರಿಗೆ ವಿಧಿಸಿದರೆ ಬಡವರ ಗತಿ ಏನು. ಮುಂದಿನ ದಿನಗಳಲ್ಲಿ ಮೂತ್ರ ವಿಸರ್ಜನೆಗೂ ಜಿಎಸ್‌ಟಿ ಹಾಕುತ್ತಾರೆ. ಉಸಿರಾಡುವುದಕ್ಕೂ ಸರ್ಕಾರ ಜಿಎಸ್‌ಟಿ ಹಾಕಬಹುದು. ಕೂಡಲೇ ಸಿಎಂ ಸಿದ್ದರಾಮಯ್ಯ ಸಣ್ಣ ವ್ಯಾಪಾರಿಗಳ ರಕ್ಷಣೆ ಮಾಡಬೇಕು. ಈ ಜಿಎಸ್‌ಟಿ ವಿಧಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕ ಬಂದ್ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು

ಪ್ರತಿಭಟನೆಯಲ್ಲಿ ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್, ಜಿಲ್ಲಾಧ್ಯಕ್ಷ ಸಿ.ಎಸ್.ಜಯಕುಮಾರ್, ಮುಖಂಡರಾದ ವಿ.ಗಂಗಾಧರ್ , ಭಾಗ್ಯ , ಸುಧಾ, ಜಯರಾಮ, ಮಂಜುನಾಥ್, ಕೃಷ್ಣಮೂರ್ತಿ, ಪಿ.ಸುರೇಶ ಕೊತ್ತಿಪುರ, ರೇಖಾ, ಸುಂದರ್, ವಾಟಾಳ್ ಪಕ್ಷದ ಅಧ್ಯಕ್ಷ ನಾರಾಯಣಸ್ವಾಮಿ, ವಾಟಾಳ್ ನಾಗರಾಜ್ ಆಪ್ತ ಕಾರ್ಯದರ್ಶಿ ಪಾರ್ಥಸಾರಥಿ ಮತ್ತಿತರರು ಭಾಗವಹಿಸಿದ್ದರು.

23ಕೆಆರ್ ಎಂಎನ್ 6.ಜೆಪಿಜಿ

ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಬುಧವಾರ ತಳ್ಳುವ ಗಾಡಿಯಲ್ಲಿ ತರಕಾರಿ, ಬೇಕರಿ ಉತ್ಪನ್ನಗಳ ಅಣಕು ಮಾರಾಟ ಮಾಡಿ ವಿನೂತನ ಪ್ರತಿಭಟನೆ ನಡೆಸಿದರು.