ಆ. 15ರಿಂದ ಸೆ. 15ರ ವರೆಗೆ ಜಾಬ್ ಕಾರ್ಡ್ ಪರಿಶೀಲನೆ, ಹೊಸ ಜಾಬ್ ಕಾರ್ಡ್‌ಗಳ ವಿತರಣೆ, ಇ ಕೆವೈಸಿ ಸಂಬಂಧಿಸಿದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಲಕ್ಷ್ಮೇಶ್ವರ: ಗ್ರಾಮೀಣ ಪ್ರದೇಶದ ಕುಟುಂಬಗಳ ದುಡಿಯುವ ಕೈಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ವಿಕಸಿತ ಭಾರತ ಜಿ ರಾಮ್‌ ಜಿ ಯೋಜನೆಯಡಿ ತಾಲೂಕಿನ ಆಡರಕಟ್ಟಿ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ಜಾಬ್ ಕಾರ್ಡ್ ಮೇಳ ಹಾಗೂ ವಿಶೇಷ ಜಾಗೃತಿ ಅಭಿಯಾನಕ್ಕೆ ಜಿಪಂ ಯೋಜನಾ ನಿರ್ದೇಶಕ ಹಾಗೂ ವಿಬಿ ಜಿ ರಾಮ್ ಜಿ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ಎಂ.ವಿ. ಚಳಗೇರಿ ಚಾಲನೆ ನೀಡಿದರು.

ಆ. 15ರಿಂದ ಸೆ. 15ರ ವರೆಗೆ ಜಾಬ್ ಕಾರ್ಡ್ ಪರಿಶೀಲನೆ, ಹೊಸ ಜಾಬ್ ಕಾರ್ಡ್‌ಗಳ ವಿತರಣೆ, ಇ ಕೆವೈಸಿ ಸಂಬಂಧಿಸಿದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಈ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆಯನ್ನು ನೀಡಿದ್ದು, ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು ಜಾಬ್ ಕಾರ್ಡ್ ಪಡೆದುಕೊಂಡು ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳಲ್ಲಿ ಯೋಜನೆಯ ಲಾಭವನ್ನು ಪಡೆದು ಮಹಿಳಾ ಸಬಲೀಕರಣಕ್ಕೆ ಸಾಕ್ಷಿ ಆಗಬೇಕೆಂದು ಹೇಳಿದರು.

ಆ. 15ರಿಂದ ರಾಜ್ಯಾದ್ಯಂತ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಬ್ ಕಾರ್ಡ್ ಮೇಳ ಆಯೋಜಿಸಿರುವ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿಯೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗ್ರಾಮೀಣ ಕುಟುಂಬಗಳಿಗೆ ಕೆಲಸದ ಭದ್ರತೆಯನ್ನು ಕಲ್ಪಿಸುವುದರ ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಾನವ ದಿನಗಳ ಸೃಜನೆಗೆ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದರು.ಇ ಕೆವೈಸಿ ಪ್ರಕ್ರಿಯೆ ವಿಬಿ ಜಿ ರಾಮ್ ಜಿ ಯೋಜನೆಯ ಜಾಬ್ ಕಾರ್ಡ್ ಹೊಂದಿರುವ ಕುಟುಂಬಗಳ ಮಾಹಿತಿಯನ್ನು ಪರಿಶೀಲಿಸುವುದು, ಅಗತ್ಯವಿರುವವರಿಗೆ ಹೊಸ ಜಾಬ್ ಕಾರ್ಡ್ ಮಾಡಿಸಿಕೊಡುವುದು, ಜಾಬ್ ಕಾರ್ಡ್ ನವೀಕರಣ ಹಾಗೂ ಇ- ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವುದು ಸೇರಿದಂತೆ ಉದ್ಯೋಗದ ಬೇಡಿಕೆ ಸ್ವೀಕರಿಸುವ ಕಾರ್ಯಕ್ಕೆ ಆದ್ಯತೆ ನೀಡಲಾಗಿದೆ. ಕೆಲಸಕ್ಕಾಗಿ ಅರ್ಜಿ ಸಲ್ಲಿಸುವ ಕುಟುಂಬಗಳಿಗೆ ನಿಯಮಾನುಸಾರ ಸ್ವೀಕೃತಿ ನೀಡುವ ವ್ಯವಸ್ಥೆಯನ್ನು ಗ್ರಾಮ ಪಂಚಾಯಿತಿಯಲ್ಲಿ ಮಾಡಲಾಗುತ್ತಿದೆ ಎಂದರು.

ಟಿಐಇಸಿ ಮಂಜುನಾಥ ಸ್ವಾಮಿ ಹಂಜಿಗಿಮಠ ಸ್ವಾಗತಿಸಿದರು. ಪಿಡಿಒ ಪ್ರಶಾಂತ ಮಾಡಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಎಫ್‌ಟಿ ಸತೀಶ್ ಅರಿಶಿಣದ ವಂದಿಸಿದರು. ಬಿಎಫ್‌ಟಿ, ಕಾಸಿಂಸಾಬ್ ನದಾಫ್, ತಿರುಕಪ್ಪ ಬಾಲೆಹೊಸೂರ, ಗ್ರಾಮದ ಮುಖಂಡರು ಕೃಷ್ಣಪ್ಪ, ಗ್ರಾಮ ಪಂಚಾಯತಿ ಸಿಬ್ಬಂದಿ ವಿಶ್ವನಾಥ ಮತ್ತಿಕಟ್ಟಿ, ಶೇಖರ ಮರಾಠೆ, ಶರಣಪ್ಪ, ಕಿರಣ ಪಾಟೀಲ, ಎನ್‌ಆರ್‌ಎಲ್‌ಎಂ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.