ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ವಿಬಿಜಿ ರಾಮ್ ಜಿ ಯೋಜನೆಗಾಗಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಲೋಗೋ ವಿನ್ಯಾಸ ಸ್ಪರ್ಧೆಯಲ್ಲಿ ಪುತ್ತೂರಿನ ಕಲಾವಿದ ರಾಮ್ ಪ್ರಸಾದ್ ಕೆ. ಪ್ರಥಮ ಸ್ಥಾನ ಪಡೆದು ರು.50 ಸಾವಿರ ನಗದು ಪುರಸ್ಕಾರ ಪಡೆದುಕೊಂಡಿದ್ದಾರೆ.

ಪುತ್ತೂರು: ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ ವಿಬಿಜಿ ರಾಮ್ ಜಿ ಯೋಜನೆಗಾಗಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಲೋಗೋ ವಿನ್ಯಾಸ ಸ್ಪರ್ಧೆಯಲ್ಲಿ ಪುತ್ತೂರಿನ ಕಲಾವಿದ ರಾಮ್ ಪ್ರಸಾದ್ ಕೆ. ಪ್ರಥಮ ಸ್ಥಾನ ಪಡೆದು ರು.50 ಸಾವಿರ ನಗದು ಪುರಸ್ಕಾರ ಪಡೆದುಕೊಂಡಿದ್ದಾರೆ. ಸೋಮವಾರ ನವದೆಹಲಿಯ ಪೂಸಾದಲ್ಲಿ ನಡೆದ ರಾಷ್ಟ್ರೀಯ ಗ್ರಾಮೀಣ ವಿಕಾಸ ಸಮ್ಮೇಳನ-2026ರಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾನ್ ಅವರು ರಾಮ ಪ್ರಸಾದ್‌ಗೆ ಪ್ರಶಸ್ತಿ ಪ್ರದಾನ ಮಾಡಿದರು. ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ, ವಿವಿಧ ರಾಜ್ಯಗಳ ಸಚಿವರು, ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಕಸಿತ್ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್‌ ಆ್ಯಂಡ್‌ ಅಜೀವಿಕಾ ಮಿಷನ್‌ (ಗ್ರಾಮೀಣ) ವಿಬಿ ರಾಮ್‌ ಜಿ ಕಾಯ್ದೆ-2025ರ ಪ್ರಚಾರ-ಜಾಗೃತಿಯ ನಿಟ್ಟಿನಲ್ಲಿ ಮೈ ಭಾರತ್ ಮತ್ತು ಮೈ ಜಿಒವಿ ಸಹಯೋಗದೊಂದಿಗೆ ಲೋಗೋ ವಿನ್ಯಾಸ, ರೀಲ್/ವೀಡಿಯೋ ಚಾಲೆಂಜ್, ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.7,233 ಸ್ಪರ್ಧಿಗಳ ನಡುವೆ ಆಯ್ಕೆ: ದೇಶಾದ್ಯಂತ ಒಟ್ಟು 7,233 ಸ್ಪರ್ಧಿಗಳು ಲೋಗೋ ವಿನ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿಶ್ವಲ್ ಆರ್ಟ್‌ನಲ್ಲಿ ಪದವಿ ಪಡೆದಿರುವ ರಾಮ್ ಪ್ರಸಾದ್‌ ಅವರಿಗೆ ಸ್ಪರ್ಧೆಯ ಮಾಹಿತಿ ತಡವಾಗಿ ಸಿಕ್ಕಿತ್ತು. ಮೊದಲ ಗಡುವು ಮುಗಿದಿದ್ದರೂ, ಬಳಿಕ ನಾಲ್ಕು ದಿನ ವಿಸ್ತರಣೆಯಾದಾಗ ತಮ್ಮ ಲೋಗೋವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ವಿನ್ಯಾಸಗೊಳಿಸಿ ಸಲ್ಲಿಸಿದ್ದರು. ಉದ್ಯೋಗ, ಸಶಕ್ತಿಕರಣ, ಸಮಗ್ರ ಗ್ರಾಮೀಣ ಅಭಿವೃದ್ಧಿಯ ಸಾರವನ್ನು ಸೆರೆಹಿಡಿದ ಇವರ ಲೋಗೋ ಪ್ರಶಸ್ತಿಗೆ ಆಯ್ಕೆಯಾಗಿದೆ. ಸರ್ಕಾರದ ವತಿಯಿಂದಲೇ ನವದೆಹಲಿಗೆ ತೆರಳಿ ರಾಮ್ ಪ್ರಸಾದ್ ಪ್ರಶಸ್ತಿ ಸ್ವೀಕರಿಸಿದ್ದಾರೆ.