ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ವಿಕಸಿತ ಭಾರತ ಗ್ರಾಮ (ವಿಬಿಜಿ ರಾಮಜಿ) ಯೋಜನೆಯು ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿಗೆ ಬಲ ನೀಡುವ ಮಹತ್ವದ ಹೆಜ್ಜೆಯಾಗಿದೆ. ಮೂಲಸೌಕರ್ಯ, ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಡಿಜಿಟಲ್ ಸೌಲಭ್ಯಗಳ ಮೂಲಕ ಗ್ರಾಮಗಳನ್ನು ಸ್ವಾವಲಂಬಿ ಮತ್ತು ಸಶಕ್ತವಾಗಿಸುವುದು ಇದರ ಮುಖ್ಯ ಉದ್ದೇಶ. ಈ ಯೋಜನೆಯ ಲಾಭಗಳನ್ನು ಪ್ರತಿಯೊಬ್ಬ ಗ್ರಾಮಸ್ಥನಿಗೂ ತಲುಪಿಸುವ ಮೂಲಕ ಗ್ರಾಮೀಣ-ನಗರ ಅಂತರವನ್ನು ಕಡಿಮೆ ಮಾಡಿ, ಸಮೃದ್ಧ ಮತ್ತು ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.ತಾಲೂಕಿನ ಯಕ್ಸಂಬಾ ಪಟ್ಟಣದ ಬೀರೇಶ್ವರ ಭವನದಲ್ಲಿ ನಡೆದ ವಿಬಿಜಿ ರಾಮಜಿ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮನರೇಗಾ ಇದ್ದ ಯೋಜನೆ ಸ್ವಲ್ಪ ತಿದ್ದುಪಡಿ ಮಾಡಿದರೇ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಇದಕ್ಕೆ ಯಾರೂ ಕಿವಿಗೊಡಬಾರದು. ಚಿಕ್ಕೋಡಿ ಮತ್ತು ಯಡಿಯೂರಪ್ಪ ಅವಿನಾಭಾವ ಸಂಬಂಧ ಇದೆ. ಕ್ಯಾಬಿನೆಟ್ ಇಲ್ಲದಿದ್ದಾಗ ಯಡಿಯೂರಪ್ಪ ಅವರು ಕೃಷ್ಣಾ ನದಿ ಪ್ರವಾಹ ಪೀಡಿತ ಜನರ ಕಣ್ಣಿರು ಒರೆಸಿದ್ದಾರೆ. ನೆರೆ ಸಂತ್ರಸ್ತರಿಗೆ ₹ 5 ಲಕ್ಷ ಪರಿಹಾರ ಒದಗಿಸಿದ್ದಾರೆ. ತಾತ್ಕಾಲಿಕವಾಗಿ ₹10 ಸಾವಿರ ಹಣ ನೀಡಿದ್ದಾರೆ. ರೈತರಿಗೆ ಸ್ಪಂದನೆ ಮಾಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಯೋಧರಿಗೆ ಪಿಂಚಣಿ ಹಣ ಕೊಟ್ಟಿಲ್ಲ. ಗ್ಯಾರಂಟಿ ಇದು ಚುನಾವಣೆ ಲಕ್ಷ್ಮೀ ಆಗಿದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಗ್ಯಾರಂಟಿ ಹಣ ಬಿಡುಗಡೆ ಮಾಡುತ್ತಿದ್ದಾರೆ. ₹ 5000 ಕೋಟಿ ಗ್ಯಾರಂಟಿ ಹಣ ಫಲಾನುಭವಿಗಳಿಗೆ ಸೇರಿಲ್ಲ. ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುವುದನ್ನು ಬಿಟ್ಟರೆ ಯಾವುದೇ ಅಭಿವೃದ್ಧಿಗೆ ಒತ್ತು ನೀಡಿಲ್ಲ ಎಂದು ಟೀಕಿಸಿದರು.
ವಿಬಿಜಿ ರಾಮಜಿ ಯೋಜನೆಗೆ ತಿದ್ದುಪಡೆ ತಂದಿದ್ದಕ್ಕೆ ಕಾಂಗ್ರೆಸ್ ಬೊಬ್ಬೆ ಹೊಡೆಯುತ್ತಿದ್ದಾರೆ. ವಿಬಿಜಿ ರಾಮಜಿ ಮೂಲಕ 125 ದಿನ ಕೂಲಿ ಕೆಲಸ ಕೊಡಲಾಗುತ್ತದೆ. ಮನರೇಗಾದಲ್ಲಿ ಭ್ರಷ್ಟಾಚಾರ ನಡೆಯುತ್ತಿತ್ತು. ಅದನ್ನು ತಡೆಯಲು ಈ ಯೋಜನೆಗೆ ತಿದ್ದುಪಡಿ ತಂದು ಹಣ ಸದ್ಬಳಕೆಗೆ ಕೇಂದ್ರ ಸರಕಾರ ಮುಂದಾಗಿದೆ ಎಂದರು.ರಾಜ್ಯಸಭೆ ಸದಸ್ಯ ಈರಣ್ಣಾ ಕಡಾಡಿ ಮಾತನಾಡಿ, ವಿಕಸಿತ ಭಾರತ ರೋಜಗಾರ್ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಈ ಕಾಯ್ದೆ ಪಂಚಾಯತಿಗೆ ಮಾರಕ ಎಂದು ಜನರಿಗೆ ಸುಳ್ಲು ಹೇಳುತ್ತಿದೆ ಎಂದು ಆರೋಪಿಸಿದರು.
ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಕೇಂದ್ರ ಸರ್ಕಾರ ವಿಬಿಜಿ ರಾಮಜಿ ಜನಪರ ಯೋಜನೆ ಜಾರಿಗೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ. ಈ ಯೋಜನೆ ಯತಾವತ್ ಜಾರಿಯಾಗಲು ಬಿಜೆಪಿ ಕಾರ್ಯಕರ್ತರು ಜನರಿಗೆ ಯೋಜನೆ ಲಾಭಗಳನ್ನು ತಿಳಿಸಬೇಕು ಎಂದರು.
ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಮಾತನಾಡಿ, ರಾಮನ ಹೆಸರಿನಲ್ಲಿ ಈ ಯೋಜನೆ ಬಂದಿರುವುದರಿಂದ ಕಾಂಗ್ರೆಸ್ ನಡುಕ ಹುಟ್ಟಿದೆ. ವಿಕಸಿತ ಭಾರತಕ್ಕೆ ವಿಬಿಜಿ ರಾಮಜಿ ಅನುಕೂಲವಾಗಿದೆ. ಕಾಂಗ್ರೆಸ್‌ಗೆ ಲೂಟಿ ಹೊಡೆಯುವ ಅಭ್ಯಾಸ ರೂಢಿಯಾಗಿದೆ. ಗ್ಯಾರಂಟಿ ಹೆಸರಿನ ಮೇಲೆ ಭ್ರಷ್ಟಾಚಾರ ನಡೆದಿದೆ. ಬಿಜೆಪಿ ಒಳ್ಳೆಯ ಯೋಜನೆ ಜಾರಿ ಮಾಡಿದೆ, ಆದರೆ ಅದನ್ನು ಅಪಪ್ರಚಾರ ಮಾಡಿ ಜನರಿಗೆ ಸುಳ್ಳ ಹೇಳುವುದನ್ನು ಕಾಂಗ್ರೆಸ್ ಸಂಪ್ರದಾಯ ಮುಂದುವರೆಸಿಕೊಂಡು ಹೋಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ನಿಖಿಲ ಕತ್ತಿ, ಮಾಜಿ ಶಾಸಕರಾದ ವಿವೇಕರಾವ ಪಾಟೀಲ, ಶ್ರೀಮಂತ ಪಾಟೀಲ, ಮಹೇಶ ಕುಮಟಳ್ಳಿ, ಪಿ.ರಾಜೀವ, ಬಾಳಾಸಾಹೇಬ ವಡ್ಡರ, ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಅಮೃತ ಕುಲಕರ್ಣಿ, ದೀಪಕ ಪಾಟೀಲ, ಮಹೇಶ ಭಾತೆ, ರಮೇಶ ಕಾಳನ್ನವರ, ದುಂಡಪ್ಪ ಬೆಂಡವಾಡೆ ಮುಂತಾದವರು ಇದ್ದರು. ಬೆಳಗಾವಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಸ್ವಾಗತಿಸಿದರು. ಶಾಸಕಿ ಶಶಿಕಲಾ ಜೊಲ್ಲೆ ವಂದಿಸಿದರು.------
ಕೋಟ್ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಆದಾಗಿನಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಸರ್ಕಾರಕ್ಕೆ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿತ್ತು. ಚಿಕ್ಕೋಡಿ ಜಿಲ್ಲೆಗೆ ಒಂದೂ ರೂಪಾಯಿ ಹಣ ನೀಡಿಲ್ಲ. ಮಹಿಳೆ, ಕೃಷಿ.ಯುವಕರಿಗೆ ಒಂದೂ ಕಾರ್ಯಕ್ರಮ ನೀಡಿಲ್ಲ. ನಾಲಾಯಕ ಕಾಂಗ್ರೆಸ್ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಪಪ್ರಚಾರ ಮಾಡುವ ಕೆಲಸ ಮುಂದುವರೆಸಿದೆ. ಗಂಗಾಕಲ್ಯಾಣ ಯೋಜನೆ ಮುಂದುವರೆಸಿಲ್ಲ. ಕುರಿಗಾರರ ₹ 50 ಕೋಟಿ ಬಾಕಿ ಉಳಿಸಿಕೊಂಡಿದೆ. ಬಡವರಿಗೆ ಅನುಕೂಲವಾಗಲು ಹೈನುಗಾರಿಕೆ ಪ್ರೊತ್ಸಾಹ ಧನ ಕೊಡುತ್ತಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ₹ 1000 ಕೋಟಿ ಬಾಕಿ ಉಳಿಸಿಕೊಂಡಿದೆ.
ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷರು