ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸುವುದರ ಜತೆಗೆ, ಅವರು ನಿರ್ವಹಿಸಿದ ಕೆಲಸಕ್ಕೆ ತ್ವರಿತವಾಗಿ ಕೂಲಿ ಪಾವತಿಸುವ ಉದ್ದೇಶ ಹೊಂದಿರುವ ವಿಬಿ ಜಿ ರಾಮ್‌ ಜಿ ಯೋಜನೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆತಿದೆ. ಯೋಜನೆ ಆರಂಭವಾಗಿ ಒಂದೇ ತಿಂಗಳಲ್ಲಿ 2.35 ಲಕ್ಷ ಮಾನವ ದಿನಗಳು ಸೃಜನೆಯಾಗಿದ್ದು, ₹ 7.04 ಕೋಟಿ ಪಾವತಿ ಪ್ರಕ್ರಿಯೆ ನಡೆದಿದೆ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಹಾವೇರಿ

ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸುವುದರ ಜತೆಗೆ, ಅವರು ನಿರ್ವಹಿಸಿದ ಕೆಲಸಕ್ಕೆ ತ್ವರಿತವಾಗಿ ಕೂಲಿ ಪಾವತಿಸುವ ಉದ್ದೇಶ ಹೊಂದಿರುವ ವಿಬಿ ಜಿ ರಾಮ್‌ ಜಿ ಯೋಜನೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆತಿದೆ. ಯೋಜನೆ ಆರಂಭವಾಗಿ ಒಂದೇ ತಿಂಗಳಲ್ಲಿ 2.35 ಲಕ್ಷ ಮಾನವ ದಿನಗಳು ಸೃಜನೆಯಾಗಿದ್ದು, ₹ 7.04 ಕೋಟಿ ಪಾವತಿ ಪ್ರಕ್ರಿಯೆ ನಡೆದಿದೆ.

ಜು.1ರಿಂದ ಜಿಲ್ಲೆಯ ಎಂಟು ತಾಲೂಕುಗಳಲ್ಲಿ ವಿಕಸಿತ ಭಾರತ್‌ ಗ್ಯಾರಂಟಿ ಫಾರ್‌ ರೋಜಗಾರ್‌ ಮತ್ತು ಆಜಿವಿಕಾ ಮಿಶನ್‌ (ವಿಬಿ ಜಿ ರಾಮ್‌ ಜಿ) ಯೋಜನೆ ಆರಂಭವಾಗಿದೆ. ಈ ಸಲ ಬರಗಾಲ ಪರಿಸ್ಥಿತಿ ಇರುವುದರಿಂದ ಕೂಲಿ ಕಾರ್ಮಿಕರ ವಲಸೆ ತಡೆಗಟ್ಟಿ, ಸ್ಥಳೀಯವಾಗಿಯೇ ಉದ್ಯೋಗ ಭರವಸೆ ಒದಗಿಸುವುದು ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಜಾಬ್‌ ಕಾರ್ಡ್‌ ಅಭಿಯಾನ, 125 ದಿನಗಳ ಕೂಲಿ ನೀಡುವ ಕಾರ್ಯ ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಾಗಿದೆ. ಇದರಿಂದ ಯೋಜನೆ ಆರಂಭವಾಗಿ ಒಂದೇ ತಿಂಗಳಲ್ಲಿ 2.35 ಲಕ್ಷ ಮಾನವ ದಿನಗಳು ಆಗಿವೆ. ಕೂಲಿ ಪಾವತಿಗಾಗಿ ಸಿದ್ಧಪಡಿಸಿರುವ ಒಟ್ಟು ₹7 ಕೋಟಿ ಮೊತ್ತದಲ್ಲಿ ₹4.35 ಕೋಟಿ ಮೊತ್ತವನ್ನು ಖಜಾನೆಗೆ ಸಲ್ಲಿಸಲಾಗಿದೆ. ಇನ್ನು ವಾರದೊಳಗಾಗಿ ಈ ಹಣ ಕೂಲಿಕಾರರ ಖಾತೆಗೆ ಜಮಾ ಆಗುವ ನಿರೀಕ್ಷೆಯಿದೆ.

ಯೋಜನೆಯಡಿ ಕೂಲಿ ಪಾವತಿಗೆ ಸಂಬಂಧಿಸಿದಂತೆ ಸಿದ್ಧಪಡಿಸಿದ ಎಫ್‌ಟಿಒ (ಫಂಡ್‌ ಟ್ರಾನ್ಸ್‌ಫರ್‌ ಆರ್ಡರ್‌) ಗಳ ತಾಲೂಕುವಾರು ಅಂಕಿ-ಅಂಶಗಳು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಕೂಲಿ ಪಾವತಿ ಪ್ರಕ್ರಿಯೆ ಚುರುಕುಗೊಂಡಿರುವುದನ್ನು ತೋರಿಸುತ್ತಿವೆ.

ಹಿರೇಕೆರೂರು ತಾಲೂಕಿನಲ್ಲಿ ₹1,56,41,164 ಮೊತ್ತದ ಎಫ್‌ಟಿಒಗಳಿಗೆ ಎರಡನೇ ಸಹಿ ಆಗಿದೆ. ರಟ್ಟಿಹಳ್ಳಿಯಲ್ಲಿ ₹1,34,43,203, ರಾಣಿಬೆನ್ನೂರಿನಲ್ಲಿ ₹1,09,91,945 ಹಾಗೂ ಬ್ಯಾಡಗಿಯಲ್ಲಿ ₹1,08,59,949 ಮೊತ್ತದ ಎಫ್‌ಟಿಒಗಳಿಗೆ ಎರಡನೇ ಸಹಿ ಪೂರ್ಣಗೊಂಡಿದೆ.

ಉಳಿದಂತೆ ಹಾವೇರಿಯಲ್ಲಿ ₹63,22,272, ಹಾನಗಲ್ಲಿನಲ್ಲಿ ₹53,52,647, ಸವಣೂರಿನಲ್ಲಿ ₹43,56,929 ಹಾಗೂ ಶಿಗ್ಗಾಂವಿಯಲ್ಲಿ ₹34,58,547 ಮೊತ್ತದ ಎಫ್‌ಟಿಒಗಳಿಗೆ ಎರಡನೇ ಸಹಿ ಆಗಿದೆ.

ಖಜಾನೆಗೆ ₹4.72 ಕೋಟಿ: ಎರಡನೇ ಸಹಿ ಪೂರ್ಣಗೊಂಡ ಎಫ್‌ಟಿಒಗಳ ಪೈಕಿ ₹4,72,57,220 ಮೊತ್ತದ ಎಫ್‌ಟಿಒಗಳು ಈಗಾಗಲೇ ಖಜಾನೆಗೆ ಸಲ್ಲಿಕೆಯಾಗಿವೆ. ಈ ಹಂತದಲ್ಲಿ ರಟ್ಟಿಹಳ್ಳಿ ತಾಲೂಕಿನಲ್ಲಿ ಹೆಚ್ಚಿನ ಮೊತ್ತದ ಎಫ್‌ಟಿಒಗಳು ಖಜಾನೆ ತಲುಪಿದ್ದು, ₹1,25,04,350 ಮೊತ್ತದ ಎಫ್‌ಟಿಒಗಳನ್ನು ಸಲ್ಲಿಸಲಾಗಿದೆ.

ರಾಣಿಬೆನ್ನೂರಿನಲ್ಲಿ ₹75,05,931, ಬ್ಯಾಡಗಿಯಲ್ಲಿ ₹73,81,905 ಹಾಗೂ ಹಿರೇಕೆರೂರಿನಲ್ಲಿ ₹68,04,943 ಮೊತ್ತದ ಎಫ್‌ಟಿಒಗಳು ಖಜಾನೆಗೆ ಸಲ್ಲಿಕೆಯಾಗಿವೆ. ಹಾವೇರಿಯಲ್ಲಿ ₹42,53,476, ಸವಣೂರಿನಲ್ಲಿ ₹30,47,067, ಶಿಗ್ಗಾಂವಿಯಲ್ಲಿ ₹32,14,755 ಹಾಗೂ ಹಾನಗಲ್ಲಿನಲ್ಲಿ ₹25,44,793 ಮೊತ್ತದ ಎಫ್‌ಟಿಒಗಳು ಖಜಾನೆ ಹಂತ ತಲುಪಿವೆ.

ಕೂಲಿ ಕಾರ್ಮಿಕರಿಗೆ ಹಣ: ವಿಬಿ ಜಿ ರಾಮ್‌ ಜಿ ಯೋಜನೆ ಆರಂಭಗೊಂಡ ಮೊದಲ ತಿಂಗಳಲ್ಲೇ ₹ 7.04 ಕೋಟಿ ಮೊತ್ತದ ಎಫ್‌ಟಿಒಗಳಿಗೆ ಎರಡನೇ ಸಹಿ ಆಗಿರುವುದು ಹಾಗೂ ಅದರಲ್ಲಿ ₹4.72 ಕೋಟಿ ಮೊತ್ತದ ಎಫ್‌ಟಿಒಗಳು ಖಜಾನೆಗೆ ಸಲ್ಲಿಕೆಯಾಗಿರುವುದು ಜಿಲ್ಲೆಯ ಮಟ್ಟದಲ್ಲಿ ಗಮನಾರ್ಹ ಪ್ರಗತಿಯಾಗಿದೆ.

ಎಫ್‌ಟಿಒಗಳ ಮುಂದಿನ ಹಂತದ ಪ್ರಕ್ರಿಯೆ ಪೂರ್ಣಗೊಂಡಂತೆ ಕೂಲಿ ಹಣವು ಸಂಬಂಧಿಸಿದ ಕಾರ್ಮಿಕರ ಖಾತೆಗಳಿಗೆ ಜಮೆಯಾಗುವ ನಿರೀಕ್ಷೆಯಿದೆ. ಯೋಜನೆ ಆರಂಭದ ಹಂತದಲ್ಲೇ ಕಂಡುಬಂದಿರುವ ಈ ವೇಗ, ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಉದ್ಯೋಗದ ಜತೆಗೆ ಅವರ ಶ್ರಮದ ಪ್ರತಿಫಲ ತಲುಪಿಸುವ ಪ್ರಕ್ರಿಯೆ ಚುರುಕುಗೊಂಡಿರುವುದನ್ನು ಸೂಚಿಸುತ್ತದೆ.

ತಾಂತ್ರಿಕ ಸಮಸ್ಯೆಗಳು ಪರಿಹಾರ: ಆರಂಭಿಕ ಹಂತದಲ್ಲಿ ಕೆ2 ಪೋರ್ಟಲ್‌ನಲ್ಲಿ ಎಫ್‌ಟಿಒಗಳು ಪ್ರತಿಫಲಿಸದಿರುವುದು ಸೇರಿದಂತೆ ಕೆಲವು ತಾಂತ್ರಿಕ ತೊಡಕುಗಳು ಎದುರಾಗಿದ್ದವು. ಇದೀಗ ಆ ಸಮಸ್ಯೆಗಳನ್ನು ಪರಿಹರಿಸಲಾಗಿದ್ದು, ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಖಜಾನೆಗೆ ಸಲ್ಲಿಕೆಯಾಗಿರುವ ಎಫ್‌ಟಿಒಗಳ ಮೊತ್ತವನ್ನು ಟ್ರೆಜರಿಯಿಂದ ಆರ್‌ಬಿಐ (ಮತ್ತು ಪಿಎಫ್‌ಎಂಎಸ್‌ ಮೂಲಕ ನೇರವಾಗಿ ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ. ಇದರಿಂದ ಕೂಲಿ ಕಾರ್ಮಿಕರಿಗೆ ಹಣ ತಲುಪುವ ಪ್ರಕ್ರಿಯೆ ಸರಳಗೊಂಡಿದೆ.

ಜಿಲ್ಲೆಯಲ್ಲಿ ಯೋಜನೆ ಚುರುಕಾಗಿ ನಡೆಯುತ್ತಿದೆ. ಕಾರ್ಮಿಕರಿಗೆ ಕೂಲಿ ಹಣ ಪಾವತಿ ಪ್ರಕ್ರಿಯೆ ನಡೆದಿದ್ದು, ಈಗಾಗಲೇ ಅವರ ಖಾತೆಗೆ ಜಮಾ ಮಾಡುವ ಪ್ರಕ್ರಿಯೆ ನಡೆದಿದೆ. ಇನ್ನೊಂದು 8-10 ದಿನಗಳಲ್ಲಿ ಸಂಪೂರ್ಣವಾಗಿ ಹಣ ಜಮಾ ಆಗಲಿದೆ ಎಂದು ಜಿಪಂ ಸಿಇಒ ಹಾವೇರಿ ದಲ್ಜೀತಕುಮಾರ ಹೇಳಿದರು.