VBG Ramji Yojana wages delayed: Women protest

-ಕಾರ್ಮಿಕರಿಗೆ ಸಕಾಲಕ್ಕೆ ಕೂಲಿ ಹಣ ನೀಡುವಲ್ಲಿ ವಿಳಂಬ ಖಂಡಿಸಿ ಮಹಿಳೆಯರ ಆಕ್ರೋಶ

--

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ವಿಬಿಜಿ ರಾಮ್‌ಜಿ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಸಕಾಲಕ್ಕೆ ಕೂಲಿ ಹಣ ಪಾವತಿಸದಿರುವುದನ್ನು ಖಂಡಿಸಿ ತಾಲೂಕಿನ ರಾಯಪುರ ಗ್ರಾಮದ ಮಹಿಳೆಯರು ತಾಲೂಕು ಪಂಚಾಯಿತಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಪಂಚಾಯಿತಿ ಆವರಣದಲ್ಲಿ ನೂರಾರು ಮಹಿಳೆಯರು ಯೋಜನೆಯಡಿ ಕೆಲಸ ಮಾಡಿದ್ದರೂ ಸಕಾಲಕ್ಕೆ ಕಾರ್ಮಿಕರಿಗೂ ಕೂಲಿ ಹಣ ಪಾವತಿಸಲಾಗುತ್ತಿಲ್ಲ. ಕೆಲವರಿಗೆ ಮಾತ್ರ ಕೂಲಿ ಹಣ ಜಮೆಯಾಗಿದ್ದು, ಉಳಿದ ಕಾರ್ಮಿಕರಿಗೆ ಹಣ ಪಾವತಿಸಲಾಗಿಲ್ಲ. ಅಲ್ಲದೆ 15 ದಿನಗಳಲ್ಲಿ ಕೂಲಿ ಹಣ ವಿತರಿಸಬೇಕಿದ್ದರೂ ಅಧಿಕಾರಿಗಳು ಹಣ ಹಾಕುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೆಲಸದ ಸ್ಥಳಗಳಲ್ಲಿ ಕಾರ್ಮಿಕರಿಗೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸುತ್ತಿಲ್ಲ. ಬಿಸಿಲಿನಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಕುಡಿವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿಲ್ಲ ಎಂದು ಒತ್ತಾಯಿಸಿದರು.

ಯೋಜನೆಯಡಿ ಕನಿಷ್ಠ 125 ದಿನಗಳ ಕೆಲಸ ನೀಡಬೇಕಿದ್ದರೂ ಸಮರ್ಪಕವಾಗಿ ಕೆಲಸ ನೀಡುತ್ತಿಲ್ಲ. ಎನ್‌ಎಂಎಂಎಸ್ ಮಾಡುವಾಗ ಕೆಲವರ ಹಾಜರಾತಿಯೂ ತಪ್ಪಾಗಿ ನಮೂದಾಗುತ್ತದೆ. ಹಾಗಾಗಿ, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕೂಲಿ ಕೆಲಸ ನೀಡುವ ಜತೆಗೆ ಸಕಾಲಕ್ಕೆ ಹಣ ಪಾವತಿಸಬೇಕು.

ಈಗ ಕೂಲಿ ಹಣ ಬಾರದೆ ಇರುವವರಿಗೆ ಹಣ ತುಂಬಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಯೋಜನೆಯ ಸಹಾಯಕ ನಿರ್ದೇಶಕ ಗಣೇಶ್, ತಾಲೂಕು ಪಂಚಾಯಿತಿ ವ್ಯವಸ್ಥಾಪಕ ನಂದೀಶ್ ಆಗಮಿಸಿ ಸಮಸ್ಯೆಗಳ ಪರಿಹರಿಸುವ ಭರವಸೆ ನೀಡಿದಾಗ ಪ್ರತಿಭಟನೆ ಹಿಂಪಡೆದರು.

ಈ ಸಂದರ್ಭದಲ್ಲಿ ರಾಯಪುರ ಗ್ರಾಮದ ಮಾರಣ್ಣ, ಒಬಕ್ಕ, ವಿಜಯಮ್ಮ, ಕಮಲಮ್ಮ, ಪಡ್ಲೋಬಯ್ಯ, ಮಲ್ಲಮ್ಮ, ಹನುಮಂತಪ್ಪ, ಗಿಡ್ಡೋಬಯ್ಯ, ನಿಂಗಯ್ಯ, ಪೂಜಾರಿ ಓಬಣ್ಣ, ಜಂಗ್ಲಿ ಮಲ್ಲಯ್ಯ, ನಾಗರಾಜ, ತಿಪ್ಪೇಸ್ವಾಮಿ ಇದ್ದರು.