ಹೊಸಕೋಟೆ: ಗ್ರಾಮೀಣರು ಉದ್ಯೋಗಕ್ಕಾಗಿ ನಗರ ಪ್ರದೇಶಗಳತ್ತ ಗುಳೆ ಹೋಗುವುದನ್ನು ತಪ್ಪಿಸಿ, ಗ್ರಾಮದಲ್ಲೇ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಜಾಬ್‌ ಕಾರ್ಡ್ ಮೇಳಗಳನ್ನು ಆಯೋಜಿಸುತ್ತಿದೆ ಎಂದು ತಾವರೆಕೆರೆ ಗ್ರಾಪಂ ಪಿಡಿಒ ಮುನಿಗಂಗಯ್ಯ ತಿಳಿಸಿದರು

ಹೊಸಕೋಟೆ: ಗ್ರಾಮೀಣರು ಉದ್ಯೋಗಕ್ಕಾಗಿ ನಗರ ಪ್ರದೇಶಗಳತ್ತ ಗುಳೆ ಹೋಗುವುದನ್ನು ತಪ್ಪಿಸಿ, ಗ್ರಾಮದಲ್ಲೇ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಜಾಬ್‌ ಕಾರ್ಡ್ ಮೇಳಗಳನ್ನು ಆಯೋಜಿಸುತ್ತಿದೆ ಎಂದು ತಾವರೆಕೆರೆ ಗ್ರಾಪಂ ಪಿಡಿಒ ಮುನಿಗಂಗಯ್ಯ ತಿಳಿಸಿದರು.

ತಾಲೂಕಿನ ನಂದಗುಡಿ ಹೋಬಳಿಯ ತಾವರೆಕೆರೆ ಗ್ರಾಪಂ ವ್ಯಾಪ್ತಿಯ ಯಳಚಹಳ್ಳಿ ಗ್ರಾಮದಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯ ಅರಿವು ಹಾಗೂ 2026-27ನೇ ಸಾಲಿನ ಜಾಬ್‌ಕಾರ್ಡ್ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 1262 ಜಾಬ್‌ಕಾರ್ಡ್‌ ಗಳಿದ್ದವು. ಇದೀಗ ಸರ್ಕಾರದ ಹೊಸ ಮಾರ್ಗಸೂಚಿಯಂತೆ ವಿಬಿಜಿ ರಾಮ್ ಜಿ ಯೋಜನೆಯ ಜಾಬ್‌ಕಾರ್ಡ್ ಹೊಂದಿರುವ ಕುಟುಂಬಗಳ ವ್ಯಾಪ್ತಿಯನ್ನು ವಿಸ್ತರಿಸಿ, ಉದ್ಯೋಗದ ಅಗತ್ಯವಿರುವವರಿಗೆ ಜಾಬ್‌ಕಾರ್ಡ್ ನೀಡಲಾಗುತ್ತಿದೆ. ಮೇಳದಲ್ಲಿ ಹೊಸದಾಗಿ ೨೫ ಜನಕ್ಕೆ ಜಾಬ್‌ಕಾರ್ಡ್ ವಿತರಿಸಲಾಗಿದೆ. ಉದ್ಯೋಗದ ಅವಶ್ಯಕತೆ ಹೊಂದಿರುವವರಿಗೆ ಜಾಬ್‌ಕಾರ್ಡ್ ನೀಡುವುದು ಗ್ರಾಪಂ ಜವಾಬ್ದಾರಿ. ಎಪಿಎಲ್ ಅಥವಾ ಬಿಪಿಎಲ್ ಬೇಧವಿಲ್ಲದೆ ಉದ್ಯೋಗ ಬಯಸುವ ಅರ್ಹರಿಗೆ ಜಾಬ್‌ಕಾರ್ಡ್ ನೀಡಿ, ಗ್ರಾಮದಲ್ಲೇ ಕೆಲಸ ದೊರೆಯುವಂತೆ ಮಾಡುವುದು ಯೋಜನೆಯ ಉದ್ದೇಶ ಎಂದರು.

ವಿಬಿ ರಾಮ್ ಜಿ ಮಾಹಿತಿ ಶಿಕ್ಷಣ ಮತ್ತು ಸಂವಹನಾಧಿಕಾರಿ ಮಧುಸುಧನ್ ಮಾತನಾಡಿ, ಹಿಂದೆ ನರೇಗಾ ಯೋಜನೆಯಡಿ ಮುಖ್ಯವಾಗಿ ಚರಂಡಿ, ರಸ್ತೆ ಹಾಗೂ ಜಮೀನು ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿತ್ತು. ಇದೀಗ ಹೊಸ ಯೋಜನೆಯಡಿ ರೈತರ ಜಮೀನುಗಳಲ್ಲಿ ಕೃಷಿ ಹೊಂಡ ನಿರ್ಮಾಣ, ಬದು ನಿರ್ಮಾಣ, ಜಮೀನು ಅಭಿವೃದ್ಧಿ, ಕೊಳವೆಬಾವಿ ಸುತ್ತ ಇಂಗು ಗುಂಡಿ ನಿರ್ಮಾಣ ಸೇರಿದಂತೆ ಹಲ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಅದೇ ರೀತಿ ಮನೆಗಳಿಂದ ಹೊರಬರುವ ತ್ಯಾಜ್ಯ ನೀರು ಚರಂಡಿಗೆ ಬಿಡುವುದನ್ನು ತಪ್ಪಿಸಲು ಸೋಕ್‌ಪಿಟ್ ನಿರ್ಮಾಣ, ಜಾನುವಾರು ಕೊಟ್ಟಿಗೆ, ಕೋಳಿ ಶೆಡ್, ತೋಟದ ಶೆಡ್ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ. ಸಾರ್ವಜನಿಕ ಹಾಗೂ ವೈಯಕ್ತಿಕ ಆಸ್ತಿಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಾಂಪೌಂಡ್ ನಿರ್ಮಾಣ, ‘ನಮ್ಮ ಹೊಲ-ನಮ್ಮ ದಾರಿ’ ಸೇರಿದಂತೆ ವಿವಿಧ ಕಾಮಗಾರಿಗಳಿಗೂ ಅವಕಾಶ ಕಲ್ಪಿಸಲಾಗಿದೆ ಎಂದರು.

ತಾವರೆಕೆರೆ ಗ್ರಾಪಂ ಮಾಜಿ ಅದ್ಯಕ್ಷ ಯಳಚಹಳ್ಳಿ ರವಿಕುಮಾರ್ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು ಸುಮಾರು 308 ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದ್ದು, ಜಾಬ್‌ಕಾರ್ಡ್ ಹೊಂದಿರುವವರು ಅಗತ್ಯ ಕಾಮಗಾರಿಗಳಿಗಾಗಿ ಗ್ರಾಪಂಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಬರಗಾಲದ ಹಿನ್ನೆಲೆಯಲ್ಲಿ ಗ್ರಾಮೀಣರಿಗೆ ಸ್ಥಳೀಯವಾಗಿಯೇ ಉದ್ಯೋಗ ದೊರಕಿಸುವುದು ಸರ್ಕಾರದ ಉದ್ದೇಶ. ಉದ್ಯೋಗದ ಅಗತ್ಯವಿರುವವರು ಗ್ರಾಪಂಗೆ ಆಗಮಿಸಿ ಜಾಬ್‌ಕಾರ್ಡ್ ಪಡೆದು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ವಿಬಿ ಜಿ ರಾಮ್ ಜಿ ಯೋಜನೆ ಎಂಜಿನಿಯರ್ ರಾಜೇಶ್, ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ್, ದ್ವಿತೀಯ ದರ್ಜೆ ಸಹಾಯಕಿ ಮೀನಾಕ್ಷಿ, ಕರ ವಸೂಲಿಗಾರ ರಾಜಣ್ಣ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.

ಫೋಟೋ: 27 ಹೆಚ್‌ಎಸ್‌ಕೆ 1

ಹೊಸಕೋಟೆ ತಾಲೂಕಿನ ತಾವರೆಕೆರೆ ಗ್ರಾಪಂ ವ್ಯಾಪ್ತಿಯ ಯಳಚಹಳ್ಳಿ ಗ್ರಾಮದಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯ ಜಾಬ್‌ಕಾರ್ಡ್ ಮೇಳದಲ್ಲಿ ಪಿಡಿಒ ಮುನಿಗಂಗಯ್ಯ ಅರ್ಹರಿಗೆ ಜಾಬ್‌ ಕಾರ್ಡ್‌ ವಿತರಿಸಿದರು.