ಬಾಕಿ ಇರುವ ಅಥವಾ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಹೊಸ ಕಾಯ್ದೆಯ ನಿಯಮಾವಳಿಗಳ ಪ್ರಕಾರವೇ ಮುಂದುವರಿಸಬಹುದು
ಹರಪನಹಳ್ಳಿ: ಗ್ರಾಮೀಣ ಭಾಗದಲ್ಲಿ ಜನರಿಗೆ ಉದ್ಯೋಗ ಭದ್ರತೆ, ಜಲಸಂರಕ್ಷಣೆ, ಆಸ್ತಿ ಸೃಜನೆ ಹಾಗೂ ಜೀವನೋಪಾಯಕ್ಕಾಗಿ ಕಳೆದ ಎರಡು ದಶಕಗಳಿಂದ ಕಾರ್ಯ ನಿರ್ವಹಿಸುತ್ತಲಿದ್ದ ಮನರೇಗಾ ಯೋಜನೆಯು ರದ್ದಾಗಿ ಹೊಸ ತಂತ್ರಜ್ಞಾನದ ಬಳಕೆಯೊಂದಿಗೆ ಕೇಂದ್ರ ಸರ್ಕಾರವು ವಿಕಸಿತ ಭಾರತ-ಜಿ ರಾಮ್ ಜಿ ಕಾಯ್ದೆ 2025ನ್ನು ಜು.1ರಿಂದ ದೇಶಾದ್ಯಂತ ಜಾರಿಗೊಳಿಸಿದೆ ಎಂದು ತಾಪಂ ಇಒ ಚಂದ್ರಶೇಖರ್ ವೈ.ಎಚ್. ತಿಳಿಸಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಅವರು, ವಿಕಸಿತ ಭಾರತ-ಜಿ ರಾಮ್ ಜಿ ಕಾಯ್ದೆಯು ಗ್ರಾಮೀಣ ಉದ್ಯೋಗ ಮತ್ತು ಅಭಿವೃದ್ಧಿಯ ಹೊಸ ಶಾಸನವಾಗಿದೆ. ಗ್ರಾಮೀಣ ಕುಟುಂಬಗಳಿಗೆ ಒಂದು ಆರ್ಥಿಕ ವರ್ಷದಲ್ಲಿ 125 ದಿನಗಳ ಕೌಶಲ್ಯರಹಿತ ಕೂಲಿ ಉದ್ಯೋಗದ ಶಾಸನಬದ್ಧ ಗ್ಯಾರಂಟಿಯನ್ನು ನೀಡುತ್ತದೆ ಎಂದು ಅವರು ಹೇಳಿದ್ದಾರೆ.
ಇದು ಗ್ರಾಮೀಣ ಭಾಗದಲ್ಲಿ ಉತ್ಪಾದಕ ಆಸ್ತಿಗಳ ಸೃಜನೆ ಮಾಡುವ ಮೂಲಕ ಗ್ರಾಮೀಣ ಅಭಿವೃದ್ಧಿಯನ್ನು ವಿಕಸಿತ ಭಾರತ @2047ರ ದೃಷ್ಟಿಕೋನದೊಂದಿಗೆ ಜೋಡಿಸುವ ಗುರಿ ಹೊಂದಿದೆ. ಜುಲೈ 1ರಿಂದ ಜಾರಿಗೆ ಬರುವಂತೆ ಹಳೆಯ ನರೇಗಾ ಕಾಯ್ದೆ ರದ್ದಾಗಿದ್ದು, ನೂತನ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಆ್ಯಂಡ್ ಅಜೀವಿಕಾ ಮಿಷನ್ ಕಾಯ್ದೆಯು ದೇಶದ ಎಲ್ಲ ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲಿ ಜಾರಿಯಾಗಿದೆ. ಹೊಸ ಕಾಯ್ದೆ ಪ್ರಾರಂಭವಾದ ದಿನಾಂಕದಂದು ನರೇಗಾ ಅಡಿಯಲ್ಲಿ ಬಾಕಿ ಇರುವ ಅಥವಾ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಹೊಸ ಕಾಯ್ದೆಯ ನಿಯಮಾವಳಿಗಳ ಪ್ರಕಾರವೇ ಮುಂದುವರಿಸಬಹುದು ಎಂದಿದ್ದಾರೆ.ಹಳೆಯ ಜಾಬ್ ಕಾರ್ಡ್ ಹೊಂದಿಲ್ಲದ ಕುಟುಂಬಗಳು ಗ್ರಾಪಂಗೆ ಸದಸ್ಯರ ಹೆಸರು, ವಯಸ್ಸು, ವಿಳಾಸದ ವಿವರ ನೀಡಿ ಹೊಸ ಕಾರ್ಡ್‌ಗಾಗಿ ನೋಂದಾಯಿಸಿಕೊಳ್ಳಬಹುದು. ಉದ್ಯೋಗಕ್ಕಾಗಿ ಗ್ರಾಮೀಣ ವಯಸ್ಕ ಸದಸ್ಯರು ಗ್ರಾಪಂ, ಕಾರ‍್ಯಕ್ರಮ ಅಧಿಕಾರಿಗಳು ಅಥವಾ ಗ್ರಾಪಂನ ಅಧಿಕೃತ ವ್ಯಕ್ತಿಗೆ ಮೌಖಿಕವಾಗಿ, ಲಿಖಿತವಾಗಿ ಅಥವಾ ಡಿಜಿಟಲ್ ವೇದಿಕೆಗಳ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದ್ದಾರೆ.