ಸಾರಾಂಶ
ಕನ್ನಂಬಾಡಿ ಅಣೆಕಟ್ಟೆಯಲ್ಲಿ ನೀರು ತುಂಬಿದ್ದರೂ ಸಹ ಕೆರೆ ಕಟ್ಟೆಗಳಲ್ಲಿ ಮತ್ತು ನಾಲೆಗಳಲ್ಲಿ ನೀರು ಮಾತ್ರ ಬರುತ್ತಿಲ್ಲ. ಜುಲೈ 10ರಿಂದ ನಾಲೆಗಳಿಗೆ ನೀರು ಬಿಟ್ಟಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆಯೇ ಹೊರತು ಕೊನೆ ಭಾಗದ ನಾಲೆಗಳಿಗೆ ನೀರು ಮಾತ್ರ ತಲುಪುತ್ತಿಲ್ಲ.
ಕನ್ನಡಪ್ರಭ ವಾರ್ತೆ ಭಾರತೀನಗರ
ಮದ್ದೂರು ತಾಲೂಕಿನ ವಿಸಿ ನಾಲೆಗಳ ಕೊನೆ ಭಾಗಕ್ಕೆ ಕೆಆರ್‌ಎಸ್ ನೀರು ತಲುಪದ ಕಾರಣ ಕಟ್ಟು ಪದ್ಧತಿ ನಿಲ್ಲಿಸಿ ನಿರಂತರವಾಗಿ ನೀರು ಹರಿಸುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿರುವುದಾಗಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಂಬಾಡಿ ಅಣೆಕಟ್ಟೆಯಲ್ಲಿ ನೀರು ತುಂಬಿದ್ದರೂ ಸಹ ಕೆರೆ ಕಟ್ಟೆಗಳಲ್ಲಿ ಮತ್ತು ನಾಲೆಗಳಲ್ಲಿ ನೀರು ಮಾತ್ರ ಬರುತ್ತಿಲ್ಲ. ಜುಲೈ 10ರಿಂದ ನಾಲೆಗಳಿಗೆ ನೀರು ಬಿಟ್ಟಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆಯೇ ಹೊರತು ಕೊನೆ ಭಾಗದ ನಾಲೆಗಳಿಗೆ ನೀರು ಮಾತ್ರ ತಲುಪುತ್ತಿಲ್ಲ ಎಂದರು.
ವ್ಯವಸಾಯವನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ರೈತರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಈ ಕೂಡಲೇ ಕಟ್ಟು ಪದ್ಧತಿಯಲ್ಲಿ ನೀಡುತ್ತಿರುವ ನೀರನ್ನು ನಿಲ್ಲಿಸಿ ನಿರಂತರವಾಗಿ ನೀರು ಬಿಟ್ಟು ಕೊನೆ ಭಾಗದ ನಾಲೆಗಳಿಗೆ ತಲುಪುವಂತೆ ಮಾಡಬೇಕೆಂದು ಒತ್ತಾಯಿಸಿದರು.ನೀರು ಕಡೆ ಭಾಗಕ್ಕೆ ತಲುಪದೇ ಇರುವುದರಿಂದ ರೈತರು ವ್ಯವಸಾಯ ಮಾಡಲು ತೊಂದರೆಯಾಗಿದೆ. ಕೂಡಲೇ ಕೊನೆಯ ಭಾಗದ ನಾಲೆಗಳಿಗೆ ನೀರು ಹರಿಸಬೇಕು. ಕೆಆರ್‌ಎಸ್‌ಅಣೆ ಕಟ್ಟೆ ಭರ್ತಿಯಾಗಿದ್ದರೂ ಕಟ್ಟುಪದ್ದತಿಯಲ್ಲಿ ನೀರು ಹರಿಸುವುದಾಗಿ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನೀಯರ್ ಪ್ರಕರಣೆ ಹೊರಡಿಸಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ತಮಿಳು ನಾಡಿಗೆ ಹೋಗುತ್ತಿರುವ ನೀರನ್ನು ನಿಲ್ಲಿಸಿ ಶಾಶ್ವತವಾಗಿ ನಾಲೆಗಳಿಗೆ ನೀರು ಹರಿಸಬೇಕು. ಈ ಸಂಬಂಧವಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಅವರು ಮತ್ತು ನಾನು ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಕಟ್ಟುಪದ್ಧತಿಯಲ್ಲಿ ಬಿಡುವ ನೀರನ್ನು ನಿಲ್ಲಿಸಿ ರೈತರಿಗೆ ನಿರಂತರವಾಗಿ ನೀರು ಬಿಡುವುದಾಗಿ ಭರವಸೆ ನೀಡಿದ್ದಾರೆ ಎಂದರು.